Mandya: ತಮಿಳುನಾಡಿಗೆ ನೀರು: ರೈತರ ಕಣ್ಣಲ್ಲಿ ರಕ್ತಕಣ್ಣೀರು..!

ಕಳೆದ 20 ದಿನಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿದುಹೋಗುತ್ತಿದೆ. ತಮ್ಮ ಕೃಷಿ ಭೂಮಿ ಮತ್ತು ಬೆಳೆಗಳಿಗೆ ಹರಿಯಬೇಕಾದ ನೀರು ನೆರೆ ರಾಜ್ಯದ ಭೂಮಿ, ಬೆಳೆಗಳನ್ನು ತಣಿಸಲು ಬಿರುಸಿನಿಂದ ಹರಿಯುತ್ತಿರುವುದನ್ನು ಕಂಡು ಜಿಲ್ಲೆಯ ರೈತರು ರಕ್ತ ಕಣ್ಣೀರು ಸುರಿಸುತ್ತಿದ್ದಾರೆ.

As water is being released to Tamil Nadu farmers are having problems with their crops gvd

ಮಂಡ್ಯ ಮಂಜುನಾಥ

ಮಂಡ್ಯ (ಸೆ.01): ಕಳೆದ 20 ದಿನಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿದುಹೋಗುತ್ತಿದೆ. ತಮ್ಮ ಕೃಷಿ ಭೂಮಿ ಮತ್ತು ಬೆಳೆಗಳಿಗೆ ಹರಿಯಬೇಕಾದ ನೀರು ನೆರೆ ರಾಜ್ಯದ ಭೂಮಿ, ಬೆಳೆಗಳನ್ನು ತಣಿಸಲು ಬಿರುಸಿನಿಂದ ಹರಿಯುತ್ತಿರುವುದನ್ನು ಕಂಡು ಜಿಲ್ಲೆಯ ರೈತರು ರಕ್ತ ಕಣ್ಣೀರು ಸುರಿಸುತ್ತಿದ್ದಾರೆ.

ಕೆಆರ್‌ಎಸ್ ನೀರಿನ ಮೇಲೆ ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆ ಬಹುತೇಕ ಅವಲಂಬಿತವಾಗಿದೆ. ಮಳೆ ಅಭಾವದಿಂದ ನೀರಿಗೆ ಸಂಕಷ್ಟ ಪರಿಸ್ಥಿತಿ ಎದುರಾದಾಗಲೆಲ್ಲಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಕೂಡ ಇಲ್ಲಿನ ರೈತರ ಬಗ್ಗೆ ಕರುಣೆಯೇ ಇಲ್ಲದಂತೆ ತೀರ್ಪು ನೀಡುತ್ತಿವೆ. ಮಳೆ ಇಲ್ಲದೆ ನಮ್ಮಲ್ಲಿ ನೀರಿಲ್ಲವೆಂದು ಪರಿ ಪರಿಯಾಗಿ ಮನವಿ ಮಾಡಿದರೂ ಜಲಾಶಯವನ್ನು ಬಸಿದಾದರೂ ನೀರು ಬಿಡುವಂತೆ ಕಠೋರ ತೀರ್ಪುಗಳನ್ನು ಹೊರಹಾಕುತ್ತಾ ಇಲ್ಲಿನ ರೈತರ ಬದುಕಿನ ಮೇಲೆ ಬರೆ ಎಳೆಯುತ್ತಲೇ ಇವೆ.

ಕಾ​ವೇರಿ ನೀ​ರಿನ ವಿ​ಚಾ​ರ​ದಲ್ಲಿ ರಾ​ಜ​ಕೀಯ ತೀಟೆ ಮಾ​ಡ​ಬೇ​ಡಿ: ಸ​ಚಿವ ಚ​ಲು​ವ​ರಾ​ಯ​ಸ್ವಾಮಿ

ಪ್ರಾಧಿಕಾರದ ಆದೇಶದಂತೆ ಕೆಆರ್‌ಎಸ್ ಅಣೆಕಟ್ಟೆಯಿಂದ ಈಗಾಗಲೇ 13 ಟಿಎಂಸಿ ನೀರು ತಮಿಳುನಾಡು ಸೇರಿದೆ. ಮೆಟ್ಟೂರು ಅಣೆಕಟ್ಟೆಯಲ್ಲಿ ಎಷ್ಟು ನೀರಿದೆ. ತಮಿಳುನಾಡಿಗೆ ನೈಋತ್ಯ ಮಾನ್ಸೂನ್ ಬರುವ ಅವಕಾಶವಿದ್ದರೂ ಅದಾವುದನ್ನೂ ಲೆಕ್ಕಿಸದೆ ಪುನಃ ನಿತ್ಯ 10 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಆದೇಶಿಸಿದೆ. ಪ್ರಕೃತಿಗೆ ವಿರುದ್ಧವಾಗಿ ಹೊರಬೀಳುತ್ತಿರುವ ಇಂತಹ ತೀರ್ಪುಗಳನ್ನು ಪಾಲಿಸುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ವಿದ್ಯುತ್ ಅಭಾವ: ಒಂದೆಡೆ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಮತ್ತೊಂದೆಡೆ ಮಳೆಯೂ ಬರುತ್ತಿಲ್ಲ. ಕೆರೆ-ಕಟ್ಟೆಗಳಲ್ಲೂ ನೀರಿಲ್ಲ. ಕನಿಷ್ಠ ಪಕ್ಷ ಕೊಳವೆ ಬಾವಿಯನ್ನು ಅವಲಂಬಿಸಿಕೊಂಡು ಬೆಳೆ ಬೆಳೆಯಲು ಮುಂದಾಗಿರುವ ರೈತರಿಗೆ ವಿದ್ಯುತ್ ಅಭಾವ ಕಾಡುತ್ತಿದೆ. ಎರಡು-ಮೂರು ದಿನ ವಿದ್ಯುತ್ ಇಲ್ಲದೆ ನೀರು ಹರಿಸಲಾಗುತ್ತಿಲ್ಲ. ಇದರ ಪರಿಣಾಮ ಭತ್ತದ ಸಸಿಮಡಿಗಳೆಲ್ಲಾ ಒಣಗಿಹೋಗಿವೆ. ನಾಟಿ ಮಾಡಿದ ಕಬ್ಬು ಚಿಗುರೊಡೆಯುತ್ತಿಲ್ಲ. ಬಿತ್ತನೆ ಮಾಡಿದ ರಾಗಿ ಮೇಲೇಳುತ್ತಿಲ್ಲ. ಇಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲಾಗದೆ ರೈತರು ದಿಕ್ಕೆಟ್ಟಿದ್ದಾರೆ. ಕರೆಂಟ್ ಯಾವಾಗ ಬರುತ್ತೋ, ಯಾವಾಗ ಹೋಗುವುದೋ ತಿಳಿಯದೆ ಕಂಗಾಲಾಗಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.

ಕೊನೆ ಭಾಗವನ್ನು ತಲುಪದ ನೀರು: ಕಟ್ಟುನೀರು ಪದ್ಧತಿಯಡಿ ಅರೆ ಖುಷ್ಕಿ ಬೆಳೆಗಳಿಗೆ ನೀರು ಹರಿಸುವ ಭರವಸೆ ನೀಡಿದ ಸರ್ಕಾರ ಹದಿನೈದು ದಿನಗಳ ಕಾಲ ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಿತು. ಅದು ಮದ್ದೂರು ಭಾಗದ ಕೊಪ್ಪ, ಮಳವಳ್ಳಿ ಭಾಗವನ್ನು ತಲುಪಲೇ ಇಲ್ಲ. 400 ಕೋಟಿ ರು.ಗೂ ಹೆಚ್ಚು ಹಣದಲ್ಲಿ ವಿಶ್ವೇಶ್ವರಯ್ಯ ನಾಲೆಗಳ ಆಧುನೀಕರಣಗೊಳಿಸಿದ್ದರೂ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸಲು ಸಾಧ್ಯವಾಗದಿರುವುದು ದುರಂತವೇ ಸರಿ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ನಿತ್ಯ 7329 ಕ್ಯುಸೆಕ್ ನೀರು ಹರಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ತಮಿಳುನಾಡಿಗೆ ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಅಣೆಕಟ್ಟೆಯ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

100 ಅಡಿಗೆ ಕುಸಿತ: ಮಳೆಗಾಲದಲ್ಲೇ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಇನ್ನೂ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ನೀರಿನ ಮಟ್ಟ ಎಲ್ಲಿಗೆ ಬಂದು ನಿಲ್ಲುವುದೋ ತಿಳಿಯದಾಗಿದೆ. ಆಗಸ್ಟ್ ಅಂತ್ಯಕ್ಕೆ ಅಣೆಕಟ್ಟೆಯ ನೀರಿನ ಮಟ್ಟ ಈ ಪ್ರಮಾಣದಲ್ಲಿ ಕುಸಿದಿದ್ದು, ಬೇಸಿಗೆ ನೆನಸಿಕೊಂಡರೆ ಈಗಲೇ ಭಯಪಡುವಂತಾಗಿದೆ. ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಕಾಡುವ ಮುನ್ಸೂಚನೆಗಳು ಈಗಲೇ ಕಂಡುಬರುತ್ತಿವೆ.

ಮುಂಗಾರು ಮಳೆ ವೈಲ್ಯದಿಂದ ಈಗಲೇ ತಾಪ ಹೆಚ್ಚಾಗಿದೆ. ಮಳೆಗಾಲದಲ್ಲೇ ಬೇಸಿಗೆ ಅನುಭವ ಜನರಿಗೆ ಆಗುತ್ತಿದೆ. ನೀರನ್ನು ಉಳಿಸಿಕೊಳ್ಳಲಾಗದೆ ಬೆಳೆಯನ್ನೂ ಬೆಳೆಯಲಾಗದೆ ಬದುಕನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ರೈತರು ಚಿಂತಾಕ್ರಾಂತರಾಗಿದ್ದಾರೆ. ತಮಿಳುನಾಡಿನಲ್ಲಿ ವಾರ್ಷಿಕ ಮೂರು ಬೆಳೆ ಬೆಳೆದು ಬದುಕನ್ನು ಸುಸ್ಥಿರಗೊಳಿಸಿಕೊಂಡಿದ್ದಾರೆ. ಆದರೆ, ನಮ್ಮಲ್ಲಿ ನೀರಿಲ್ಲದೆ ಒಂದು ಬೆಳೆಯನ್ನೂ ಬೆಳೆಯಲಾಗದಷ್ಟು ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಮತ್ತೆ ಕಾಂಗ್ರೆಸ್‌ ಕದ ತಟ್ಟಿದರೆ ಮರ್ಯಾದೆಗೇಡು: ಸಿ.ಟಿ.ರವಿ

ಹೋರಾಟಗಳಿಗೆ ಮನ್ನಣೆಯೇ ಇಲ್ಲ: ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ರೈತರು, ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆಯ ಹಾದಿ ಹಿಡಿದಿವೆ. ಹೋರಾಟ ತೀವ್ರತೆ ಪಡೆದುಕೊಳ್ಳದಿರುವುದರಿಂದ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ರೈತರ ಹಿತ ಕಾಪಾಡುವುದಾಗಿ ಹೇಳುತ್ತಲೇ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿದೆ. ಕಾವೇರಿ ಕತ್ತಲ ನ್ಯಾಯ ಮರೆಯಾಗಿ ನ್ಯಾಯಬದ್ಧ ತೀರ್ಪುಗಳು ಹೊರಬೀಳುವ ದಿನಗಳಿಗೆ ರೈತರು ಎದುರುನೋಡುತ್ತಿದ್ದಾರೆ.

Latest Videos
Follow Us:
Download App:
  • android
  • ios