ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಕಾರ್ಡ್ ಭರವಸೆ ಜಾರಿ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಕಾರ್ಡ್ ಭರವಸೆ ಜಾರಿಗೊಳಿಸಲಿದೆ. ರಾಜ್ಯದ ಸಮಗ್ರ ಅಭಿವೃಧ್ದಿಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸುತ್ತೂರು : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಕಾರ್ಡ್ ಭರವಸೆ ಜಾರಿಗೊಳಿಸಲಿದೆ. ರಾಜ್ಯದ ಸಮಗ್ರ ಅಭಿವೃಧ್ದಿಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ತುಮ್ಮನೇರಳೆ ಗ್ರಾಪಂ ವ್ಯಾಪ್ತಿಯ ಮರಡಿಹುಂಡಿ, ನಂದಿಗುಂದಪುರ, ನಂದಿಗುಂದ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಈ ಬಾರಿಯ ಚುನಾವಣೆಗೆ ಪ್ರಣಾಳಿಕೆಯಲ್ಲಿ ಹೇಳಿರುವ ಗ್ಯಾರಂಟಿ ಕಾರ್ಡ್‌ನ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಲಿದೆ. ರಾಜ್ಯದಲ್ಲಿ ಎಲ್ಲಾ ವರ್ಗದ ಜನರಿಗೂ ಅನುಕೂಲ ಕಲ್ಪಿಸಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೊಳಿಸಿದ್ದ ಜನಪರ ಯೋಜನೆಗಳು ಹಾಗೂ ಕಾರ್ಯಕ್ರಮ ಮುಂದುವರೆಸಲು ಎಲ್ಲರೂ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು.
ಈ ವೇಳೆ ನಂದಿಗುಂದಪುರ ಗ್ರಾಮದ ಶಾಂತಮ್ಮ, ಸಿದ್ದಮ್ಮ ಮಾತನಾಡಿ, ನಮಗೆ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಸೇರಿ ಹಲವು ಅನುಕೂಲ ಮಾಡಿಕೊಟ್ಟಿದ್ದು, ನಮ್ಮ ಕಷ್ಟಸುಖಗಳಲ್ಲಿ ಶೀಘ್ರವಾಗಿ ಭಾಗಿಯಾಗುತ್ತಾರೆ ಎಂದರು.
ಈ ವೇಳೆ ಮುಖಂಡರಾದ ಬುಲೆಟ್ ಮಹದೇವು, ಮಹೇಶ್, ಪುಟ್ಟಸ್ವಾಮಿ, ದೇವರಾಜು, ಹುಚ್ಚಪ್ಪ, ತಾಯಮ್ಮ, ಪುಟ್ಟಮಾದಮ್ಮ ಇದ್ದರು.
ವರುಣಕ್ಕೆ ಸೋಮಣ್ಣ ಕೊಡುಗೆ ಇಲ್ಲ
ನಂಜನಗೂಡು : ವರುಣ ಕ್ಷೇತ್ರಕ್ಕೆ ಸಚಿವ ಸೋಮಣ್ಣ ಅವರದು ನಯಾಪೈಸೆ ಕೊಡುಗೆಯಿಲ್ಲ, ವಸತಿ ಸಚಿವರಾಗಿ ಕಳೆದ 5 ವರ್ಷಗಳಿಂದ ರಾಜ್ಯದ ಜನರಿಗೆ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ, ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 224 ಕ್ಷೇತ್ರಗಳಿಗೂ ಕೊಡುಗೆ ನೀಡಿರುವ ಕಾರಣ ಅವರು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಹದಿನಾರು, ಹದಿನಾರು ಮೋಳೆ, ಆಲತ್ತೂರು ಹುಂಡಿ ಗ್ರಾಮಗಳಲ್ಲಿ ಅವರ ತಂದೆ ವರುಣಾ ಕ್ಷೇತ್ರದ ಅಭ್ಯರ್ಥಿ ಸಿದ್ದರಾಮಯ್ಯರವರ ಪರವಾಗಿ ಮತಯಾಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ವಿ. ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಅವರು ಕ್ಷೇತ್ರಕ್ಕಾಗಲಿ ಜಿಲ್ಲೆಗಾಗಲಿ ಯಾವುದೇ ಕೊಡುಗೆ ನೀಡಿಲ್ಲ. ವಸತಿ ಸಚಿವರಾಗಿ ಕಳೆದ 5 ವರ್ಷಗಳಲ್ಲಿ ಬಡವರಿಗೆ 1 ಮನೆಯನ್ನೂ ನೀಡಿಲ್ಲ. ಕೊನೆ ಕ್ಷಣದಲ್ಲಿ ಬಿಡುಗಡೆಗೊಳಿಸಿದ್ದ 2 ಸಾವಿರ ಮನೆಗಳು ಬರೀ ಪೇಪರ್ ಮೇಲಿದೆ ಹೊರತು ಕಾರ್ಯಗತವಾಗಿಲ್ಲ. ಇನ್ನು ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾಗಿದ್ದ 8 ಸಾವಿರ ಮನೆಗಳು ಲಾಕ್ ಆಗಿ ಹಣ ಬಿಡುಗಡೆಯಾಗಿಲ್ಲ ಎಂದರು.
ಸಂಸದ ಪ್ರತಾಪ್‌ಸಿಂಹ ಅವರು ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದಿದ್ದರು. ಈಗ 4 ದಿನ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಆ ಭಯ ಇರಬೇಕೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ, ಪ್ರತಾಪ್‌ಸಿಂಹ ಅವರ ಬಾಯಿ ಬೊಂಬಾಯಿ, ಅವರದು ಮೋಟರ್ ಮೌತ್, ಅವರು ಸುಳ್ಳು ಹೇಳುವುದರಲ್ಲಿ ಅಪಪ್ರಚಾರ ಮಾಡುವುದರಲ್ಲಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದರು.
ಯತೀಂದ್ರ ವೀರಶೈವರ ಮುಖಂಡರು: ವೀರಶೈವ ಮುಖಂಡ ಗುರುಪಾದಸ್ವಾಮಿ ಮಾತನಾಡಿ, ಬಿಜೆಪಿಗರಿಗೆ ವಿ.ಸೋಮಣ್ಣ ವೀರಶೈವ ಲಿಂಗಾಯತರಾದರೆ ಕ್ಷೇತ್ರದಲ್ಲಿ ನಮಗೆ ಯತೀಂದ್ರ ಅವರೇ ವೀರಶೈವ ಮುಖಂಡರು. ಏಕೆಂದರೆ ಅವರು ಜಾತಿ, ಬಡವ ಬಲ್ಲಿದನೆಂಬ ಬೇಧ ಭಾವವಿಲ್ಲದೆ ವರುಣ ಕ್ಷೇತ್ರದಲ್ಲಿ ವೀರಶೈವರ ಬೀದಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಿ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರೂ ಕೂಡ ಹದಿನಾರು ಗ್ರಾಮಕ್ಕೆ ಸುಮಾರು 75 ಕೋಟಿ ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂದರು.