Asianet Suvarna News Asianet Suvarna News

75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಅಧಿಕಾರವಿಲ್ಲ: ಬಿಎಸ್‌ವೈಗೆ ವಿನಾಯ್ತಿ ಸಿಗುತ್ತಾ?

ಸಮಾಜದ ಒಳತಿಗಾಗಿ ನಿಗಮ ಸ್ಥಾಪನೆ| ಮೂರುಸಾವಿರ ಮಠಕ್ಕೆ ಅರುಣಾದೇವಿ ಭೇಟಿ, ಗದ್ದುಗೆ ದರ್ಶನ| ವಯೋ ನಿರ್ಬಂಧ, ಬಿಎಸ್‌ವೈಗೆ ವಿನಾಯಿತಿ ನೀಡುವ ವಿಶ್ವಾಸವಿದೆ| 

Arunadevi Udayakumar Talks Over CM BS Yediyurappa grg
Author
Bengaluru, First Published Dec 19, 2020, 10:28 AM IST

ಹುಬ್ಬಳ್ಳಿ(ಡಿ.19): ಸಮಾಜದ ಒಳತಿಗಾಗಿ ‘ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪಿಸಿದ್ದಾರೆ. ಇದರಲ್ಲಿ ಯಾರೊಬ್ಬರ ಉದ್ಧಾರ ಗುರಿಯಲ್ಲ, ಸಮಾಜದ ಬಡವರ ಕಲ್ಯಾಣಕ್ಕಾಗಿ ನಿಗಮ ಸ್ಥಾಪಿಸಿರುವುದು ಎಂದು ‘ಅಖಿಲ ಭಾರತ ವೀರಶೈವ ಮಹಾಸಭಾ’ದ ‘ಮಹಿಳಾ ಘಟಕ’ದ ಅಧ್ಯಕ್ಷೆಯೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಉದಯಕುಮಾರ ಹೇಳಿದ್ದಾರೆ. 

ಇಲ್ಲಿನ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ್ದ ಅವರು, ಗದ್ದುಗೆ ದರ್ಶನಾಶೀರ್ವಾದ ಪಡೆದರು. ಆನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಸಮಾಜಕ್ಕೊಂದು, ಜಾತಿಗೊಂದು ನಿಗಮ ಮಂಡಳಿ ಬೇಕಾ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಎಲ್ಲ ಸಮಾಜದಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಯಡಿಯೂರಪ್ಪ ಅವರ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಅವರು ಬಸವತತ್ವದಂತೆ ಎಲ್ಲ ವರ್ಗಗಳಿಗೂ ಆದ್ಯತೆ ನೀಡುತ್ತಿದ್ದಾರೆ. ಎಲ್ಲ ಧರ್ಮದಲ್ಲಿ ಬಡವರಿದ್ದಾರೆ. ಅವರನ್ನು ತಲುಪಬೇಕಿದೆ. ಹೀಗಾಗಿ ಅದಕ್ಕೊಂದು ವ್ಯವಸ್ಥೆ ಕೊಡಬೇಕಿದೆ ಎಂದರು.

ನಿಗಮಕ್ಕಿಂತ ಮೀಸಲಾತಿ ಬೇಡಿಕೆ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ನಾನು ಉತ್ತರ ಕೊಡುವಷ್ಟುಸಮರ್ಥಳಲ್ಲ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಿರಿಯರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ಸಂಸ್ಥೆಯಲ್ಲಿ ಮಹಿಳಾ ಘಟಕವನ್ನು ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಅಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವುದು ಮೊದಲ ಆದ್ಯತೆಯಾಗಿದೆ ಎಂದರು.

'ಕಾಂಗ್ರೆಸ್‌ ಭಂಡತನ ಪ್ರದರ್ಶಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಿದೆ'

ಮಹಿಳಾ ಅಧ್ಯಕ್ಷರು ಇದುವರೆಗೂ ಬೆಂಗಳೂರು ಕೇಂದ್ರಿಕೃತವಾಗಿ ಕೆಲಸ ಮಾಡುತ್ತಿದ್ದರು. ಇದೀಗ ಹಿರಿಯರಾದ ಶಾಮನೂರು ಶಿವಶಂಕರಪ್ಪ ಹಾಗೂ ತಿಪ್ಪಣ್ಣ ಅವರು ನನಗೆ ಹೊಸ ಜವಾಬ್ದಾರಿ ವಹಿಸಿದ್ದು, ಅವರ ನಿರೀಕ್ಷೆಗೆ ತಕ್ಕ ಕೆಲಸ ಮಾಡುವ ವಿಶ್ವಾಸವಿದೆ. ಸಮಾಜದಲ್ಲಿ ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯಮಾಡಬೇಕಿದೆ. ಈ ದಿಸೆಯಲ್ಲಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.

ಪ್ರತಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಿಸಲು ಮಹಾಸಭಾ ಯೋಜಿಸಿದೆ. ಈ ನಿಟ್ಟಿನಲ್ಲಿ ಆರ್ಥಿಕ ಸಂಪನ್ಮೂಲವನ್ನು ದಾನಿಗಳಿಂದ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಸಮಾಜದಲ್ಲಿ ಸಾಕಷ್ಟುಸಂಖ್ಯೆ ಕೊಡುಗೈದಾನಿಗಳಿದ್ದು, ಅವರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಹಾವೇರಿಯಲ್ಲಿ ನನೆಗುದಿಗೆ ಬಿದ್ದಿದ್ದ ಭವನ ನಿರ್ಮಾಣ ಕೆಲಸ ಪುನಾರಂಭಿಸಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಉನ್ನತ ಅಧ್ಯಯನ ಹಾಗೂ ನಾಗರಿಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ ಅವಶ್ಯ ಇದ್ದು, ಶಿಕಾರಿಪುರ ತಾಲೂಕು ಅಕ್ಕಮಹಾದೇವಿ ಜನ್ಮಸ್ಥಳ ಉಡಿತಡಿ ಹಾಗೂ ಕಲಬುರ್ಗಿಯಲ್ಲಿ ರಾಜ್ಯ ಮಟ್ಟದ ತರಬೇತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಆಯಾ ಸಂಸದರ ನೆರವು ಪಡೆಯಲು ಉದ್ದೇಶಿಸಲಾಗಿದೆ. ವೀರಶೈವ ಲಿಂಗಾಯತ ಮಹಾಸಭೆಯಿಂದ ಪಕ್ಷಾತೀತವಾಗಿ ಸಮಾಜದ ಸಂಘಟನೆ ನಡೆಯುತ್ತಿದ್ದು, ಒಳ್ಳೆಯ ಕೆಲಸಗಳ ಮೂಲಕ ಜನರನ್ನು ತಲುಪಬೇಕಿದೆ ಎಂದು ಹೇಳಿದರು.

ಈ ವೇಳೆ ಮೂರು ಸಾವಿರ ಮಠದ ಶ್ರೀಗಳು ಅರುಣಾದೇವಿ ಅವರನ್ನು ಸನ್ಮಾನಿಸಿದರು. ಈ ವೇಳೆ ಅರುಣಾದೇವಿ ಪತಿ ಉದಯಕುಮಾರ, ಸಮಾಜದ ಮುಖಂಡರಾದ ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.
ವಯೋ ನಿರ್ಬಂಧ, ಬಿಎಸ್‌ವೈಗೆ ವಿನಾಯಿತಿ ನೀಡುವ ವಿಶ್ವಾಸವಿದೆ.

ವಯೋ ನಿರ್ಬಂಧ, ಬಿಎಸ್‌ವೈಗೆ ವಿನಾಯಿತಿ ನೀಡುವ ವಿಶ್ವಾಸವಿದೆ

75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಅಧಿಕಾರ ನೀಡುವುದಿಲ್ಲ ಎಂದು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಆದರೆ ಕೆಲವರ ವಿಚಾರದಲ್ಲಿ ಇದಕ್ಕೆ ವಿನಾಯಿತಿ ಸಹ ನೀಡಲಾಗುತ್ತದೆ. ಅದೇ ರೀತಿ ಯುಡಿಯೂರಪ್ಪ ಅವರಿಗೂ ಅನ್ವಯವಾಗಲಿದೆ ಎಂಬುದು ನಮ್ಮ ಅನಿಸಿಕೆ. ಹೀಗಾಗಿ ಮುಖ್ಯಮಂತ್ರಿಯಾಗಿ ಅವರು ಯಾವುದೇ ತೊಂದರೆ ಇಲ್ಲದೆ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ‘ಅಖಿಲ ಭಾರತ ವೀರಶೈವ ಮಹಾಸಭಾ’ದ ‘ಮಹಿಳಾ ಘಟಕ’ದ ರಾಜ್ಯಾಧ್ಯಕ್ಷೆ ಹಾಗೂ ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಉದಯಕುಮಾರ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದಲ್ಲಿ ಅತ್ಯಂತ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಪ್ರವಾಸ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವ ಕಾರಣಕ್ಕೆ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದ್ದೇನೆ. ಈಗಾಗಲೇ ಮಂಡ್ಯ, ತುಮಕೂರು ಸೇರಿ ವಿವಿಧ ಕಡೆಗಳಲ್ಲಿ ಪ್ರವಾಸ ನಡೆಸಿದ್ದೇನೆ. ಧಾರವಾಡ ಜಿಲ್ಲಾ ಪ್ರವಾಸ ಒಂದು ರೀತಿಯಲ್ಲಿ ವಿಶೇಷವಾಗಿದೆ ಎಂದರು.

ನಾನು ಮೊದಲಿನಿಂದಲೂ ಸಮಾಜ ಸೇವಕಿಯಲ್ಲ. ಈ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರಣಕ್ಕೆ ಈ ಜವಾಬ್ದಾರಿ ನೀಡಿದ್ದಾರೆ. ನನಗೆ ನೀಡಿರುವುದು ಜವಾಬ್ದಾರಿ ಹೊರತು ಅಧಿಕಾರವಲ್ಲ ಎಂದು ತಿಳಿದುಕೊಂಡು ಸಮಾಜದ ಏಳ್ಗೆಗೆ ಶ್ರಮಿಸುತ್ತೇನೆ. ಈಗಾಗಲೇ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲಸ ನಡೆದಿದೆ. ಧಾರವಾಡದಲ್ಲಿ ನಿರ್ಮಿಸಿರುವ ಲಿಂಗಾಯತ ಭವನ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ತಮ ಸೇವೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗುರುರಾಜ ಹುಣಸಿಮರದ, ಶಿವಾನಂದ ಅಂಬಡಗಟ್ಟಿ, ಶಿವಶರಣ ಕಲಬಶೆಟ್ಟರ, ಎಂ.ಎಫ್‌. ಹಿರೇಮಠ, ಮಹಿಳಾ ಘಟಕದ ಪದಾಧಿಕಾರಿಗಳು ಇತರರು ಇದ್ದರು.
 

Follow Us:
Download App:
  • android
  • ios