ಯಾದಗಿರಿ: ಬೋನಾಳ ಕೆರೆಯಲ್ಲಿ ಪಕ್ಷಿಗಳಿಗಾಗಿ 10 ಕೃತಕ ದ್ವೀಪ ನಿರ್ಮಾಣ
ದೇಶದ ಅತಿದೊಡ್ಡ ಸಿಹಿ ನೀರಿನ ಬೋನಾಳ ಕೆರೆ ಅಭಿವೃದ್ಧಿ| ಅರಣ್ಯ ಇಲಾಖೆ ಯೋಜನೆ| ದೇಶ- ವಿದೇಶಗಳ 100ಕ್ಕೂ ಹೆಚ್ಚು ಪಕ್ಷಿ ಪ್ರಭೇದ ಸಂತಾನೋತ್ಪತ್ತಿಗೆ ಬರುವ ತಾಣವಿದು| ‘ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಿದ ರಾಜ್ಯ ಸರ್ಕಾರ|
ರಮೇಶ್ ಬನ್ನಿಕುಪ್ಪೆ
ಬೆಂಗಳೂರು(ಜ.08): ದಕ್ಷಿಣ ಭಾರತದ ಅತಿ ದೊಡ್ಡ ಸಿಹಿ ನೀರಿನ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನಾಳ ಕೆರೆಯಲ್ಲಿ ದೇಶೀಯ ಮತ್ತು ವಿದೇಶಿ ಪಕ್ಷಿಗಳ ಸಂತತಿ ಹೆಚ್ಚಳಕ್ಕೆ ಪೂರಕ ಪರಿಸರ ಸೃಷ್ಟಿಗೆ ಮುಂದಾಗಿರುವ ಅರಣ್ಯ ಇಲಾಖೆ, ಕೆರೆಯಲ್ಲಿ ತುಂಬಿರುವ ಹೂಳು ತೆಗೆದು, ಮಧ್ಯಭಾಗದಲ್ಲಿ ಕೃತಕವಾಗಿ ಹತ್ತು ದ್ವೀಪಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.
ಬೋನಾಳ ಕೆರೆಯು ಸುಮಾರು 673 ಎಕರೆಯುಳ್ಳ ಅತಿ ದೊಡ್ಡ ಪಕ್ಷಿಧಾಮ (ರಂಗನತಿಟ್ಟು 47 ಎಕರೆ) ಎಂಬ ಹೆಸರು ಪಡೆದಿದೆ. ಈ ಕೆರೆಯನ್ನು 2019ರ ಸೆಪ್ಟೆಂಬರ್ 26 ರಂದು ‘ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ’ವೆಂದು ರಾಜ್ಯ ಸರ್ಕಾರ ಘೋಷಿಸಿದೆ. ಅಲ್ಲದೆ, ಪ್ರತಿ ವರ್ಷದ ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಿನಲ್ಲಿ ಆಸ್ಪ್ರೇಲಿಯಾ, ಮಲೇಷ್ಯಾ, ಅರ್ಜೆಂಟೈನಾ, ನೈಜೀರಿಯಾ, ಸೈಬಿರಿಯಾ ಹಾಗೂ ಶ್ರೀಲಂಕಾದಿಂದ ಅನೇಕ ಪ್ರಭೇದ ಪಕ್ಷಿಗಳು ವಲಸೆ ಬಂದು ಸಂತಾನೋತ್ಪತ್ತಿ ವೃದ್ಧಿ ಮಾಡಿಕೊಳ್ಳುತ್ತಿವೆ. ಈ ಪಕ್ಷಿಗಳಿಗೆ ಪೂರಕ ವಾತಾವರಣ ನಿರ್ಮಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಕೆರೆಗೆ ಕೃಷ್ಣಾ ನದಿ ನೀರು ಬರುತ್ತಿದ್ದು, ವರ್ಷಪೂರ್ತಿ ನೀರು ಇರುತ್ತದೆ. ಕಳೆದ ಹಲವು ವರ್ಷಗಳಿಂದ ದೇಶ ಮತ್ತು ವಿದೇಶಗಳಿಂದ ಸಾವಿರಾರು ಪಕ್ಷಿಗಳು ವಲಸೆ ಬಂದು ನೆಲೆಸುತ್ತಿವೆ. ಆದರೆ, ಅವುಗಳಿಗೆ ಯಾವುದೇ ರೀತಿಯ ರಕ್ಷಣೆ ಇರಲಿಲ್ಲ. ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ. ಆದರೆ, ಇದೀಗ ಪಕ್ಷಿಗಳಿಗೆ ಸೂಕ್ತ ಪರಿಸರ ಮತ್ತು ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಈ ಕೆರೆಯನ್ನು ದೇಶದ 100 ಜೌಗು ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಕೆರೆಯಲ್ಲಿ ಸಾಕಷ್ಟುಜಲಚರಗಳಿದ್ದು, ಪಕ್ಷಿಗಳಿಗೆ ಉತ್ತಮ ಆಹಾರ ಲಭ್ಯವಿರಲಿದೆ. ಈ ಕೆರೆಯಲ್ಲಿನ ಪಕ್ಷಿಗಳ ಬಗ್ಗೆ ಕಲಬುರಗಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಸಮೀಕ್ಷೆ ನಡೆಸಿ ಸಲ್ಲಿಸಿರುವ ವರದಿ ಆಧರಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಯಾದಗಿರಿ ಜಿಲ್ಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ರವಿಶಂಕರ್ ತಿಳಿಸಿದ್ದಾರೆ.
ಅರಣ್ಯ ಇಲಾಖೆ ವಶಕ್ಕೆ:
ಸುಮಾರು 200 ವರ್ಷಗಳ ಹಿಂದೆ ಸುರಪುರದ ಅರಸು ರಾಜಾ ಪಾಮ ನಾಯಕರ ಆಡಳಿತದ ಸಂದರ್ಭದಲ್ಲಿ ನಿಷ್ಠ ವೀರಪ್ಪ ಅವರ ಸಲಹೆ ಮೇರೆಗೆ ಕೆರೆ ನಿರ್ಮಿಸಲಾಗಿದೆ ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಈ ಕೆರೆಯಲ್ಲಿ ಕಳೆದ 25 ವರ್ಷಗಳಿಂದ ವಿವಿಧ ದೇಶಗಳ ಪಕ್ಷಿಗಳು ಬಂದು ನೆಲೆಸುತ್ತಿವೆ. ಇದೀಗ ಕೆರೆ ಅರಣ್ಯ ಇಲಾಖೆಗೆ ಹಸ್ತಾಂತರವಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ದ್ವೀಪಗಳ ನಿರ್ಮಾಣ, ಸೌಲಭ್ಯ ನಿರ್ಮಾಣ:
ಹೂಳು ತೆಗೆದು ಕೆರೆಯ ಮಧ್ಯಭಾಗದಲ್ಲಿ 10 ದ್ವೀಪಗಳನ್ನು ಸೃಷ್ಟಿಸಲಾಗುವುದು. ಅಲ್ಲಿ ಗಿಡಗಳನ್ನು ಬೆಳೆಸಿ ಪಕ್ಷಿಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದು ವಿವರಿಸಿದ್ದಾರೆ.
ಕೆರೆಗೆ ಪ್ರವಾಸಿಗರನ್ನು ಆಕರ್ಷಿಸಲು ಕುಡಿಯಲು ಶುದ್ಧ ನೀರಿನ ಸೌಲಭ್ಯ, ಕುಳಿತುಕೊಳ್ಳಲು ವ್ಯವಸ್ಥೆ, ಮಾಹಿತಿ ಫಲಕಗಳು ಮತ್ತು ಫೋಟೋಗ್ರಫಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗುವುದು. ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಿಸಲಾಗುವುದು ಎಂದಿದ್ದಾರೆ.
100ಕ್ಕೂ ಹೆಚ್ಚು ಪಕ್ಷಿಗಳ ನೆಲೆ
ಮಿಂಚುಳ್ಳಿ(ಕಿಂಗ್‌ಫಿಷರ್), ಕೆಂಪು ನವಿಲು(ರೆಡ್ ಪಿಕಾಕ್), ಕರಿತಲೆ ಹಕ್ಕಿ(ಬ್ಲಾಕ್ ಹೆಡೆಡ್ ಬರ್ಡ್), ಬಿಳಿ ಕತ್ತಿನ ಕೊಕ್ಕರೆ (ಬಾರ್ ಹೆಡ್ಡಡ್ ಗೂಜ್), ಸರ್ಪ ಪಕ್ಷಿ(ಸ್ನೇಕ್ ಬರ್ಡ್), ಚಕ್ರವಾಕ (ಬ್ರಾಹ್ಮಿನಿ ಡಕ್) ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಈ ಕೆರೆಗೆ ಬರುತ್ತವೆ.
ಈ ಬಗ್ಗೆ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಸಂಜಯ್ ಮೋಹನ್ ಅವರು, ಬೋನಾಳ ಕೆರೆಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ‘ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಿದೆ. ಸಿಹಿ ನೀರಿನ ಕೆರೆಯಾಗಿರುವ ಇಲ್ಲಿ ದೇಶ ಮತ್ತು ವಿದೇಶಿ ಪಕ್ಷಿಗಳು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದು, ಅವುಗಳ ಸಂತತಿ ವೃದ್ಧಿಗೆ ಪೂರಕ ವಾತಾವರಣ ಮತ್ತು ಪ್ರವಾಸಿಗರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.