ಮಂಗಳೂರಲ್ಲಿ ಮತ್ತೆ ಕೃತಕ ‘ಜಲಪ್ರಳಯ’: ನರಕಯಾತನೆ ಪಟ್ಟ ಜನತೆ
ನೂರಾರು ಮನೆ, ಅಂಗಡಿಗಳಿಗೆ ನೀರು ನುಗ್ಗಿ ಹಾನಿ, ಬೆಳ್ಳಂಬೆಳಗ್ಗೆ ನರಕಯಾತನೆಪಟ್ಟ ಮಂಗಳೂರಿನ ಜನತೆ
ಮಂಗಳೂರು(ಜು.31): ಕೇವಲ ನಾಲ್ಕೈದು ಗಂಟೆ ಸುರಿದ ಧಾರಾಕಾರ ಮಳೆಗೆ ಶನಿವಾರ ಮಂಗಳೂರು ಮಹಾನಗರದಲ್ಲಿ ಅಕ್ಷರಶಃ ಕೃತಕ ಜಲಪ್ರಳಯ ಉಂಟಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ನೂರಾರು ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ. ತಿಂಗಳ ಹಿಂದಷ್ಟೇ ಮಹಾಮಳೆಯಿಂದ ನಗರವಾಸಿಗಳು ಅನುಭವಿಸಿದ ನರಕಯಾತನೆ ಮತ್ತೆ ಮರುಕಳಿಸಿದ್ದು, ಕೃತಕ ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಅನಿವಾರ್ಯತೆ ತಲೆದೋರಿದೆ. ಶುಕ್ರವಾರ ಹಗಲಿಡೀ ಬಿರುಬಿಸಿಲು ಇದ್ದ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಮಳೆ ಆರಂಭವಾಗಿತ್ತು. ಮಳೆಯ ತೀವ್ರತೆ ಹಠಾತ್ ಏರಿಕೆಯಾಗಿದ್ದು, 5ರಿಂದ 7 ಗಂಟೆಯ ಅವಧಿಯಲ್ಲಿ ಭಾರೀ ಸಿಡಿಲು ಗುಡುಗಿನೊಂದಿಗೆ ಆಕಾಶಕ್ಕೆ ತೂತು ಬಿದ್ದಂತೆ ಧಾರಾಕಾರವಾಗಿ ಸುರಿಯಿತು. ಪರಿಣಾಮವಾಗಿ ಮಂಗಳೂರು ಮಹಾನಗರಾದ್ಯಂತ ತಗ್ಗು ಪ್ರದೇಶಗಳಲ್ಲಿ ಮನೆ, ಅಂಗಡಿ, ಅಪಾರ್ಚ್‌ಮೆಂಟ್‌ಗಳೆನ್ನದೆ ಎಲ್ಲೆಡೆ ಕೃತಕ ಪ್ರವಾಹ ನುಗ್ಗಿ ಜನರು ಬೆಳ್ಳಂಬೆಳಗ್ಗೆ ತೀವ್ರ ಪಾಡುಪಡುವಂತಾಯಿತು.
ಹೆದ್ದಾರಿ ಮೇಲೇ ಪ್ರವಾಹ!:
ನಗರದ ಪಡೀಲ್, ಪಂಪ್‌ವೆಲ್, ಕೊಟ್ಟಾರ ಚೌಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ನಾಲ್ಕೈದು ಅಡಿ ಎತ್ತರಕ್ಕೆ ಪ್ರವಾಹ ನೀರು ಹರಿಯುತ್ತಿತ್ತು. ಘನ ವಾಹನಗಳು ಕಷ್ಟದಿಂದ ಸಂಚರಿಸುತ್ತಿದ್ದರೆ, ಬೈಕು, ಕಾರು, ರಿಕ್ಷಾಗಳು ಸಂಚರಿಸಲಾಗದೆ ಬದಲಿ ಮಾರ್ಗದಲ್ಲಿ ಸಂಚರಿಸಬೇಕಾಗಿತ್ತು. ಬೆಳಗ್ಗೆ ಕೆಲಸಕ್ಕೆ ಹೋಗುವರು ತೀವ್ರ ಸಂಕಷ್ಟಅನುಭವಿಸಿದರು.
ಕರ್ನಾಟಕದಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್
ಮನೆಗಳು ಜಲಾವೃತ:
ಪಡೀಲ್, ಪಂಪ್‌ವೆಲ್, ಕದ್ರಿ ದೇವಸ್ಥಾನದ ರಸ್ತೆ, ಮಾಲೆಮಾರ್, ಕೊಟ್ಟಾರಚೌಕಿ, ಕೋಡಿಕಲ್, ಕೊಡಿಯಾಲಗುತ್ತು ರಸ್ತೆ ಕೊಡಿಯಾಲಗುತ್ತು ಪೂರ್ವ, ಕುದ್ರೋಳಿ, ಡೊಂಗರಕೇರಿ, ಪಾಂಡೇಶ್ವರ ಮತ್ತಿತರ ಪ್ರದೇಶಗಳಿಗೆ ದಿಢೀರ್ ನೀರು ನುಗ್ಗಿದ್ದು, ನೂರಕ್ಕೂ ಅಧಿಕ ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿತ್ತು. ನಗರದ ಡೊಂಗರಕೇರಿ ಸುಭಾಷನಗರ ಎರಡನೇ ಮುಖ್ಯರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿತ್ತು. ಸಾಮಾನ್ಯವಾಗಿ ಪ್ರವಾಹ ಬಾರದ ಪಿವಿಎಸ್, ಬಂಟ್ಸ್ ಹಾಸ್ಟೆಲ್, ಕಂಕನಾಡಿ ಪ್ರದೇಶಗಳಲ್ಲಿ ನೆಲಮಾಳಿಗೆಯ ಅಂಗಡಿ, ಹೊಟೇಲ್‌ಗಳು ನೀರಿನಿಂದ ಸಂಪೂರ್ಣ ಮುಳುಗಿದ್ದವು. ಬೆಲೆಬಾಳುವ ಎಲೆಕ್ಟ್ರಾನಿಕ್ ಮತ್ತಿತರ ವಸ್ತುಗಳು ಸಂಪೂರ್ಣ ಹಾನಿಗೀಡಾಗಿವೆ. ಮಳೆ ಕಡಿಮೆಯಾದ ಬಳಿಕವೂ ಈ ಅಂಗಡಿಗಳ ನೀರು ಇಳಿಯದೆ ಬಳಿಕ ಪಂಪ್ ಮಾಡುವ ಮೂಲಕ ಹೊರಹಾಕಬೇಕಾಯಿತು.
ಸೆಂಟ್ರಲ್ ರೈಲು ನಿಲ್ದಾಣ ಜಲಾವೃತ:
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಜಲಾವೃತವಾಗಿದ್ದು, ಇಲ್ಲಿ ವಾಹನ ನಿಲುಗಡೆಗೆ ಅನನುಕೂಲವಾಗಿದೆ. ಎಕ್ಕೂರಿನಿಂದ ಬಜಾಲ್ ಹೋಗುವ ಸಂಪರ್ಕ ರಸ್ತೆ ಜಲಾವೃತಗೊಂಡಿದ್ದು, ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದೆ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಬೇಕಾಯಿತು. ಉಳ್ಳಾಲದ ಕಲ್ಲಾಪು, ಪಟ್ಲ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮನೆ ಸಾಮಗ್ರಿಗಳಿಗೆ ಹಾನಿಯಾಗಿದೆ.
ಶಾಲೆಗಳಿಗೆ ರಜೆ:
ಭಾರಿ ಮಳೆಯ ಕಾರಣ ಮಂಗಳೂರು ಉಪವಿಭಾಗದ ಬಂಟ್ವಾಳ, ಮಂಗಳೂರು, ಮೂಲ್ಕಿ ಮೂಡುಬಿದಿರೆ, ಉಳ್ಳಾಲ ವ್ಯಾಪ್ತಿಯ ಎಲ್ಲ ಅಂಗನವಾಡಿ, ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಪುತ್ತೂರು ತಾಲೂಕಿನಲ್ಲೂ ಶಾಲೆಗಳಿಗೆ ರಜೆಯಿತ್ತು.
ಮಳೆ ವಿವರ:
ಬಂಟ್ವಾಳ ತಾಲೂಕು ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೇವಲ ನಾಲ್ಕು ಗಂಟೆಗಳಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ನೇತ್ರಾವತಿ ನದಿಯ ದಕ್ಷಿಣ ದಡದಲ್ಲಿರುವ ಹರೇಕಳದಲ್ಲಿ ಈ ಸಮಯದಲ್ಲಿ ಅತಿ ಹೆಚ್ಚು 174 ಮಿ.ಮೀ. ಮಳೆಯಾಗಿದೆ. ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ಹತ್ತೊಂಬತ್ತು ಗ್ರಾಮಗಳಲ್ಲಿ 10 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದೆ. ಪಜೀರು- 14.05 ಸೆಂ.ಮೀ., ಮೇರಮಜಲು-13.5 ಸೆಂ.ಮೀ, ಬೋಳಿಯಾರ್ 13.0 ಸೆಂ.ಮೀ., ಬಂಟ್ವಾಳ ತಾಲೂಕಿನ ಮಂಚಿಯಲ್ಲಿ 12.7 ಸೆಂ.ಮೀ., ಕಳ್ಳಿಗೆ 12.0 ಸೆಂ.ಮೀ., ಮಂಗಳೂರು ತಾಲೂಕಿನ ಕೋಟೆಕಾರ್ ಮತ್ತು ಮಂಜನಾಡಿಯಲ್ಲಿ 11.5 ಸೆಂ.ಮೀ., ಗುರುಪುರದಲ್ಲಿ 11.4 ಸೆಂ.ಮೀ., ಬಾಡಗದಲ್ಲಿ 11.2 ಸೆಂ.ಮೀ. ಬಂಟ್ವಾಳ ತಾಲೂಕಿನ ನರಿಂಗಾನದಲ್ಲಿ ಸೆಂ.ಮೀ, ನೀರುಮಾರ್ಗ- 11.05 ಸೆಂ.ಮೀ., ಬಂಟ್ವಾಳದ ಸಜಿಪದಲ್ಲಿ 10.8 ಸೆಂ.ಮೀ., ಮಂಗಳೂರು ತಾಲೂಕಿನ ಕುಪ್ಪೆಪದವಿಯಲ್ಲಿ 10.5 ಸೆಂ.ಮೀ., ಕಿನ್ಯಾ, ಪಾವೂರು ಮತ್ತು ಸೋಮೇಶ್ವರದಲ್ಲಿ 10.3 ಸೆಂ.ಮೀ., ನೆಟ್ಟಣಿಗೆ ತಾಲೂಕಿನಲ್ಲಿ 10.2 ಸೆಂ.ಮೀ. ಹಾಗೂ ಪುತ್ತೂರು ತಾಲೂಕಿನ ಮುದ್ನೂರಿನಲ್ಲಿ 1 ಸೆಂ.ಮೀ. ಮಳೆಯಾಗಿದೆ.
ದಿಢೀರ್ ಇಳಿದ ಪ್ರವಾಹ!
ಮುಂಜಾನೆ ವೇಳೆಗೆ ಮಳೆಯ ತೀವ್ರತೆ ನೋಡಿದರೆ ಇಡೀ ದಿನ ಮಳೆ ಬರುವಂತಿತ್ತು. ಆದರೆ ಬೆಳಗ್ಗೆ 7 ಗಂಟೆ ವೇಳೆಗೆ ಮಳೆ ದಿಢೀರ್ ಇಳಿಕೆಯಾಗಿದ್ದು, 9ರ ವೇಳೆಗೆ ಕೃತಕ ಪ್ರವಾಹ ಆದ ಕಡೆಗಳಲ್ಲೆಲ್ಲ ನೀರು ಇಳಿದು ಮಳೆ ಬಂದೇ ಇಲ್ಲ ಎನ್ನುವಂತೆ ತೀಕ್ಷ ಬಿಸಿಲು ಆವರಿಸಿತ್ತು. ಸಂಜೆಯವರೆಗೂ ಬಿಸಿಲಿನ ವಾತಾವರಣವೇ ಇದ್ದು ಅಚ್ಚರಿ ಮೂಡಿಸಿತ್ತು. ಆದರೆ ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಆದ ಹಾನಿ ಸರಿಪಡಿಸಲು ಜನರು ಹರಸಾಹಸಪಟ್ಟರು.
Uttara Kannada: ನೆರೆ:ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹ
ಬಂಟ್ವಾಳ: ಧಾರಾಕಾರ ಮಳೆ, ಅಲ್ಲಲ್ಲಿ ಹಾನಿ
ಬಂಟ್ವಾಳ: ಕಳೆದ ಕೆಲವು ದಿನಗಳ ಕಾಲ ವಿರಾಮ ಪಡೆದುಕೊಂಡಿದ್ದ ಮಳೆ, ಶನಿವಾರ ಮುಂಜಾನೆ ಧಾರಾಕಾರವಾಗಿ ಸುರಿದಿದೆ. ಭಾರಿ ಮಳೆಗೆ ತುಂಬೆಯ ಮುದಲ್ಮೆ ನಾಗಪ್ಪ ಪೂಜಾರಿ ಅವರ ಮನೆಯ ಹಿಂಬದಿಯ ಗೋಡೆ ಕುಸಿದು ಹಾನಿಯಾಗಿದೆ. ಮುಂಜಾನೆ ಮನೆಯವರೆಲ್ಲ ಮಲಗಿರುವ ವೇಳೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಮನೆ ಮಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕಳ್ಳಿಗೆ ಗ್ರಾಮದ ಮುಂಡಾಜೆ ಅಶ್ವಿನ್ ಎಂಬವರ ಮನೆಗೆ ನೀರು ನುಗ್ಗಿದ್ದು, ಅಪಾರ ಹಾನಿ ಸಂಭವಿಸಿದೆ.
ಬಂಟ್ವಾಳ ಮೂಡ ಗ್ರಾಮದ ಮೊಡಂಕಾಪಿನ ಕಾಮೆರೆಕೋಡಿನಲ್ಲಿ ಸಾರ್ವಜನಿಕ ನೀರು ಹೊಗುವ ತೋಡಿಗೆ ಮುನ್ಸಿಪಾಲಿಟಿಯ ವತಿಯಿಂದ ನಿರ್ಮಿಸಲಾದ ಕಾಲು ಸಂಕವು ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ. ಸಂಕದ ಬದಿ ಇರುವ ಮುನ್ಸಿಪಾಲಿಟಿಯ ಮಾಜಿ ಅಧ್ಯಕ್ಷೆ ಜೋಸ್ಫಿನ್ ಡಿಸೋಜ ಅವರ ಮನೆಯ ಆವರಣ ಗೋಡೆ ಕುಸಿದು ಹತ್ತಿರವಿರುವ ಪಂಪ್‌ಶೆಡ್ ಮತ್ತು ನೀರಿನ ಟಾಂಕ್ ಕುಸಿಯುವ ಆಪಾಯವಿದೆ ಎಂದು ತಿಳಿದುಬಂದಿದೆ.