Asianet Suvarna News Asianet Suvarna News

ಚಿಕ್ಕಮಗಳೂರು: ಕರ್ನಾಟಕ ರಾಜ್ಯೋತ್ಸವದ ವೇದಿಕೆಗೆ ನುಗ್ಗಲು ಯತ್ನ, ಪ್ರತಿಭಟನಾನಿರತರ ಬಂಧನ

ಕಾರ್ಯಕ್ರಮಕ್ಕೂ ಮುನ್ನ ಕನ್ನಡ ರಾಜ್ಯೋತ್ಸವದ ಮೆರವಣಿಗೆ ವೇಳೆ ಜಿಲ್ಲಾಡಳಿತ ಹಾಗೂ ಶಾಸಕ ಸಿ.ಟಿ.ರವಿ ವಿರುದ್ಧ ಅಸಮಾಧಾನ ಹೊರಹಾಕಿ ಕಪ್ಪು ಪಟ್ಟಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದ 20ಕ್ಕೂ ಹೆಚ್ಚು ದಲಿತ ಸಂಘಟನೆ ಕಾರ್ಯಕರ್ತರು  

Arrest of Protestors Those Who Enterd to Karnataka Rajyotsava Stage in Chikkamagaluru grg
Author
First Published Nov 1, 2022, 12:09 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.01):  ಕಾಫಿನಾಡು ಚಿಕ್ಕಮಗಳೂರಿನಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಇಂದು(ಮಂಗಳವಾರ) ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಅವರ ಗೈರು ಹಾಜರಿನಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ 67ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ದಾವಣಗೆರೆ ಹಾಗೂ ಚಿಕ್ಕಮಗಳೂರು ಎರಡು ಜಿಲ್ಲೆಗೂ ಉಸ್ತುವಾರಿ ಸಚಿವರಾಗಿರುವ ಭೈರತಿ ಬಸವರಾಜು ದಾವಣಗೆರೆ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಧ್ವಜಾರೋಹಣ ನೆರವೇರಿಸಿದರು. 

ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ನಂತರ ಪಥ ಸಂಚಲನದಲ್ಲಿ ಭಾಗಿಯಾದ ವಿವಿಧ ತಂಡಗಳು ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದ್ರು. ತೆರೆದ ವಾಹನದಲ್ಲಿ ಧ್ವಜವಂದನೆಯನ್ನು ಸ್ವೀಕರಿಸಿದ್ರು. ಇದೇ ಮೊದಲ ಬಾರಿಗೆ ಶಾಲಾ-ಮಕ್ಕಳು, ಪೊಲೀಸರ ಜೊತೆ ಪಥಸಂಚಲನದಲ್ಲಿ ಕಂಸಾಳೆ, ಡೊಳ್ಳು, ಛಂಡೇ ವಾಧ್ಯ, ವೀರಗಾಸೆ, ಸ್ಥಬ್ಧಚಿತ್ರ ಸೇರಿದಂತೆ ನಾಡಿನ ಸಂಸ್ಕೃತಿಯ ಪರಂಪರೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆಗೂ ಅವಕಾಶ ನೀಡಲಾಗಿತ್ತು. 

Chikkamagaluru: ಬಾಸೂರು ಹುಲ್ಲುಗಾವಲು ಪ್ರದೇಶದಲ್ಲಿ ಕುರಿಗಳು: ಭವಿಷ್ಯದಲ್ಲಿ ಮೇವು ಸಿಗದ ಪರಿಸ್ಥಿತಿ

ಜಲಸಂಪನ್ಮೂಲದ ತವರು ಕಾಫಿನಾಡು 

ಧ್ವಜವಂದನೆ ಸ್ವೀಕಾರಿಸಿದ ಬಳಕಿ ಮಾತಾಡಿದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು, ಚಿಕ್ಕಮಗಳೂರು ಜಿಲ್ಲೆ ನಮ್ಮ ರಾಜ್ಯದ ಜಲಸಂಪನ್ಮೂಲದ ತವರು ಕೂಡ. ಏಳು ಪ್ರಮುಖ ನದಿಗಳಾದ ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ಯಗಚಿ, ವೇದಾ, ಆವತಿಯರು ಹುಟ್ಟುವುದು ಈ ಜಿಲ್ಲೆಯ ಪ್ರಸಿದ್ಧ ಪಶ್ಚಿಮ ಘಟ್ಟಗಳಲ್ಲಿ ಮತ್ತು ಚಂದ್ರದ್ರೋಣ ಪರ್ವತದ ಶಿಖರಗಳಲ್ಲಿ. ಈ ನದಿಗಳ ಜೊತೆಗೆ ಮೂವತ್ತಕ್ಕೂ ಅಧಿಕ ಉಪನದಿಗಳೂ, ಹೆಸರೇ ಇಲ್ಲದ ನೂರಾರು ಹಳ್ಳ, ತೊರೆ, ಝರಿಗಳು ಹುಟ್ಟುವ ಪ್ರದೇಶ ನಮ್ಮದು. ನಮ್ಮ ರಾಜ್ಯದ ಹತ್ತಾರು ಜಿಲ್ಲೆಗಳಿಗೆ ನೀರುಣಿಸಿ ಆಂದ್ರ, ತಮಿಳುನಾಡುಗಳಿಗೂ ಜಲಧಾರೆ ಹರಿಸುವ ಭಾಗ್ಯ ಇಲ್ಲಿನ ನದಿಗಳದ್ದು. ಆದುದರಿಂದ ಇಲ್ಲಿನ, ಪಶ್ಚಿಮ ಘಟ್ಟಗಳಲ್ಲಿನ ಪ್ರಕೃತಿ ಸಮತೋಲನವನ್ನು ಕಾಪಾಡಿಕೊಂಡು ಈ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವ ಅನನ್ಯ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಕನ್ನಡಿಗನೂ ವಹಿಸಿಕೊಳ್ಳಲೇಬೇಕಾಗಿದೆ. ಹನ್ನೆರಡು ವರುಷಗಳಿಗೊಮ್ಮೆ ಅರಳುವ ಹೂ ಎಂಬ ಹಿರಿಮೆ ಪಡೆದ 'ನೀಲಕುರಂಜಿ ಹೂ' ಈ ವರ್ಷ ಚಂದ್ರದ್ರೋಣ ಪರ್ವತದಲ್ಲಿ ಅರಳಿ ವಿಶ್ವವೇ ಚಿಕ್ಕಮಗಳೂರಿನ ಕಡೆ ಗಮನ ಕೇಂದ್ರೀಕರಿಸುವಂತೆ ಮಾಡಿತು. ಈ ಸುಂದರ ಪುಷ್ಪದ ಅಪೂರ್ವ ಸೊಬಗು ಅಸಂಖ್ಯ ಪ್ರವಾಸಿಗರನ್ನು ಚಿಕ್ಕಮಗಳೂರಿಗೆ ಬರಮಾಡಿಕೊಂಡು ಅವರ ಕಣ್ಮನಗಳನ್ನು ತಣಿಸಿದೆ. ಪ್ರಕೃತಿ ಸಮತೋಲವನ್ನು ಕಾಪಾಡಲು ಪ್ರತಿಯೊಬ್ಬರು ಪ್ರಕೃತಿಯನ್ನು ಸಂರಕ್ಷಿಸಬೇಕೆಂಬ ಪಾಠವನ್ನು ಈ ನಮ್ಮ ಪ್ರಕೃತಿಯೇ ನಿತ್ಯವೂ ಕಲಿಸುತ್ತಿದೆ.  ಚಿಕ್ಕಮಗಳೂರಿನ ಸಂಸ್ಕೃತಿ, ಪರಂಪರೆ, ಇತಿಹಾಸಗಳಿಗೆ ಭವ್ಯವಾದ ಆಯಾಮಗಳು ಇವೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ನಮ್ಮ ಜಿಲ್ಲೆಯಲ್ಲಿ ಇರುವುದು ನಮ್ಮ ಹೆಮ್ಮೆ ಎಂದರು. 

ವೇದಿಕೆಗೆ ನುಗ್ಗಲು ಯತ್ನಸಿದ ಪ್ರತಿಭಟನಾನಿತರ ಬಂಧನ

ಕಾರ್ಯಕ್ರಮಕ್ಕೂ ಮುನ್ನ ಕನ್ನಡ ರಾಜ್ಯೋತ್ಸವದ ಮೆರವಣಿಗೆ ವೇಳೆ ಜಿಲ್ಲಾಡಳಿತ ಹಾಗೂ ಶಾಸಕ ಸಿ.ಟಿ.ರವಿ ವಿರುದ್ಧ ಅಸಮಾಧಾನ ಹೊರಹಾಕಿ ಕಪ್ಪು ಪಟ್ಟಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದ 20ಕ್ಕೂ ಹೆಚ್ಚು ದಲಿತ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದರು.

ಕಳೆದ ನಾಲ್ಕೈದು ದಿನಗಳಿಂದ ನಗರದ ಆಜಾದ್ ಪಾರ್ಕ್ ಬಳಿ, ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಸಮೀಪ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ತೋಟದ ಮಾಲೀಕನ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ತೋಟದ ಮಾಲೀಕನನ್ನ ಬಂಧಿಸದ ಕಾರಣ ಕಾರ್ಯಕರ್ತರು ಜಿಲ್ಲಾಡಳಿತದ ಮೇಲೆ ಆಕ್ರೋಶ ಹೊರಹಾಕುವ ವೇಳೆ ಎಲ್ಲರನ್ನೂ ಬಂಧಿಸಿದ್ದಾರೆ. ಬಂಧನ ಖಂಡಿಸಿ ದಲಿತ ಸಂಘಟನೆ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವದ ವೇದಿಕೆಯತ್ತ ನುಗ್ಗಲು ಯತ್ನಸಿದರು. ವೇದಿಕೆ ನುಗ್ಗಲು ಯತ್ನಿಸಿದ ದಲಿತಪರ ಸಂಘಟನೆಯ ಮುಖಂಡರನ್ನು ಸ್ಥಳದಲ್ಲಿದ್ದ ಪೊಲೀಸರು ವಶಕ್ಕೆ ಪಡೆದರು. ಈ ವೇಳೆಯಲ್ಲಿ ಜಿಲ್ಲಾಡಳಿತ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ಹೊರಹಾಕಿದರು.
 

Follow Us:
Download App:
  • android
  • ios