ರಾತ್ರೋರಾತ್ರಿ ರೈತ ಮುಖಂಡರ ಬಂಧನ, ರೈತರಿಂದ ಪ್ರತಿಭಟನೆ
ಮೈಸೂರಿನಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮದ ಹಿನ್ನೆಲೆ ರೈತರು ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಹುದೆನ್ನುವ ಶಂಕೆಯಲ್ಲಿ ಪೋಲಿಸರು ರೈತ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ, ರೈತ ಮುಖಂಡರು ಪೊಲೀಸ್ ಠಾಣೆಯ ಎದುರು ಹಾಗೂ ಸಂತೇಮಾಳದ ಬಳಿ ರಸ್ತೆಯಲ್ಲಿ ತಡೆದು ಪ್ರತಿಭಟಿಸಿದರು.
ಬನ್ನೂರು : ಮೈಸೂರಿನಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮದ ಹಿನ್ನೆಲೆ ರೈತರು ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಹುದೆನ್ನುವ ಶಂಕೆಯಲ್ಲಿ ಪೋಲಿಸರು ರೈತ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ, ರೈತ ಮುಖಂಡರು ಪೊಲೀಸ್ ಠಾಣೆಯ ಎದುರು ಹಾಗೂ ಸಂತೇಮಾಳದ ಬಳಿ ರಸ್ತೆಯಲ್ಲಿ ತಡೆದು ಪ್ರತಿಭಟಿಸಿದರು.
ರೈತ ಮುಖಂಡರಾದ ನಾರಾಯಣ್, ಎಂ.ವಿ. ಕೃಷ್ಣಪ್ಪ, ಶಿವರಾಂ, ಅತ್ತಹಳ್ಳಿ ದೇವರಾಜು ಅವರನ್ನು ರಾತ್ರೋರಾತ್ರಿ ಪೊಲೀಸರು ಬಂಧಿಸಿದರು.
ಕಾರ್ಮಿಕ ಮುಖಂಡ ಶಿವರಾಜು ಮಾತಾಡಿ, ರೈತ ಪರ ಹೋರಾಟ ಮಾಡುವ ನಾಯಕರನ್ನು ಯಾವುದೇ ಸೂಚನೆ ನೀಡದೇ ಪೊಲೀಸರು ಏಕಾಏಕಿ ಮನೆಗಳಿಗೆ ನುಗ್ಗಿ ಬಂಧಿಸಿರುವುದು ಸರಿಯಲ್ಲ. ರೈತ ಮುಖಂಡರು ಯಾವುದೇ ದರೋಡೆಕೋರರಲ್ಲ. ಲೂಟಿ ಕೋರರಲ್ಲ ಇಲ್ಲವೇ ಕಳ್ಳತನ ಮಾಡಿದವರಲ್ಲ, ಹೀಗಿರುವಾಗ ರೈತ ಮುಖಂಡರನ್ನು ಮನೆಗಳಿಗೆ ನುಗ್ಗಿ ಬಂಧಿಸಿರುವುದು ಎಷ್ಟು ಸರಿ ಎಂದು ಪೋಲಿಸರ ಕ್ರಮವನ್ನು ಖಂಡಿಸಿ ಧಿಕ್ಕಾರ ಕೂಗಿದರು.
ಜನಪರವಾಗಿ ಶಾಂತಿಯಿಂದ ಪ್ರತಿಭಟನೆ ಮಾಡುವುದು ನಮಗೆ ಸಂವಿಧಾನ ನೀಡಿರುವ ಹಕ್ಕು. ಇಂದಿನ ಸರ್ಕಾರ ಆ ಹಕ್ಕಿಗೂ ಮೊಟಕುಗೊಳಿಸಿ ರೈತ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದೆ. ಹೀಗಾದರೆ ಜನಸಾಮಾನ್ಯರ ಪರವಾಗಿ ನಿಂತು ಮುಖಂಡತ್ವ ವಹಿಸುವುದೇ ತಪ್ಪೇ ಎಂದು ಪ್ರಶ್ನಿಸಿದರು. ಕೂಡಲೇ ಬಂಧಿತವಾಗಿರುವ ರೈತರನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ರಂಗಸ್ವಾಮಿ, ಅರುಣ, ನವೀನ, ಮಧು, ಕುಮಾರ, ಚೇತನ, ವೀರಭದ್ರ, ಮಹೇಶ, ಸಿದ್ದೇಶ, ಗೋಪಿ, ರಾಮಕೃಷ್ಣ, ಜಯರಾಂ, ಶಂಕರ, ಮಹೇಶ್, ರಮೇಶ್, ರಾಮ, ಪಾರ್ಥ, ನಿಂಗಣ್ಣ, ಚಿನ್ನಸ್ವಾಮಿ, ಚಂದ್ರು, ಕೃಷ್ಣ, ಗಣೇಶ್, ಹೊರಹಳ್ಳಿ ನಾರಾಯಣ್ ಸೇರಿದಂತೆ ಪ್ರಮುಖರು ಇದ್ದರು.
ಬಂಧನ ಬಿಡುಗಡೆ
ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ರೈತ ಮುಖಂಡರನ್ನು ಪೊಲೀಸರು ಬಂಧಿಸಿ, ಸಂಜೆಯವರೆಗೆ ತಮ್ಮ ವಶದಲ್ಲಿ ಇರಿಸಿಕೊಂಡು ಸಂಜೆಯ ನಂತರ ಬಿಡುಗಡೆಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ.
ಹಾಗೆಯೇ, ಜಿಲ್ಲೆಯಾದ್ಯಂತ ರೈತ ಮುಖಂಡರ ಮನೆಗಳಿಗೆ ಕಾನೂನು ಬಾಹಿರವಾಗಿ ರೈತರನ್ನ ಬಂಧಿಸಿರುವುದನ್ನು ಖಂಡಿಸಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನ್ಯಾಯಾಲಯದ ಮುಂದೆ ಪ್ರತಿಭಟಿಸಲು ಹೊರಟಿದ್ದ ವೇಳೆ ನಜರ್ ಬಾದ್ ಠಾಣೆಯ ಪೊಲೀಸರು ಅವರನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ. ನಿಮ್ಮನ್ನು ಮುಂಜಾಗ್ರತ ಕ್ರಮವಾಗಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದಾಗ ಪೊಲೀಸರು ಹಾಗೂ ಅವರ ನಡುವೆ ವಾಗ್ವಾದ ಸಹ ನಡೆಯಿತು.
ಕಳೆದ ವಾರ ನಗರ ಪೊಲೀಸ್ ಆಯುಕ್ತರು, ಮುಖ್ಯಮಂತ್ರಿಗಳು ಮುಂದಿನ ಬಾರಿ ಮೈಸೂರಿಗೆ ಬಂದಾಗ ತಮ್ಮನ್ನು ಭೇಟಿ ಮಾಡಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಹೀಗಾಗಿ, ಅಂದಿನ ಪ್ರತಿಭಟನೆಯನ್ನು ಕೈಬಿಟ್ಟಿದ್ದೆವು. ಇದನ್ನು ಪ್ರಶ್ನಿಸಲು ಪೊಲೀಸ್ ಆಯುಕ್ತರ ಕಚೇರಿಗೆ ಹೋದ ಕುರುಬೂರು ಶಾಂತಕುಮಾರ್ ಅವರನ್ನು ಹಿಂಬಾಲಿಸಿಕೊಂಡು ಬಂದ ಪೊಲೀಸರು ಬಂಧಿಸಿದರು.
ಈ ವಿಷಯ ತಿಳಿದ ನ್ಯಾಯಾಲಯದ ಬಳಿ ಸೇರಿದ್ದ ಮೈಸೂರು ತಾಲೂಕಿನ ರೈತ ಮುಖಂಡರು, ಪೊಲೀಸ್ ಆಯುಕ್ತರ ಕಚೇರಿ ಬಳಿ ಬಂದು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಿದಾಗ ಅವರನ್ನು ಸಹ ಬಂಧಿಸಿದರು.
ರೈತ ಮುಖಂಡರಾದ ಬರಡನಪುರ ನಾಗರಾಜ್, ವೆಂಕಟೇಶ್, ನಂಜುಂಡಸ್ವಾಮಿ, ಗಿರೀಶ್, ಕಾಟೂರ ಮಹದೇವಸ್ವಾಮಿ, ನಾಗೇಶ್, ಶಿವಣ್ಣ ಸಿದ್ದರಾಮಯ್ಯ, ವಾಜಮಂಗಲ ಮಾದೇವ, ನೀಲಕಂಠಪ್ಪ ಅವರನ್ನ ಬಂಧಿಸಿ, ಡಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.
ಇಷ್ಟು ಮಾತ್ರವಲ್ಲದೆ ರೈತ ಮುಖಂಡ ಅತ್ತಹಳ್ಳಿ ದೇವರಾಜ್, ಕಿರಗೊಸೂರು ಶಂಕರ್ ಸೇರಿದಂತೆ ಹಲವು ರೈತ ಮುಖಂಡರು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು ಡಿಎಆರ್ ಮೈದಾನದಲ್ಲಿ ಇರಿಸಿದ್ದರು. ಸಂಜೆಯ ನಂತರ ಬಂಧಿತ ಎಲ್ಲಾ ರೈತರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.