ಬೆದರಿಸಿ ಲಕ್ಷ ಲಕ್ಷ ಸುಲಿಗೆ: ನಕಲಿ ಐಟಿ ಆಯುಕ್ತ ಬಂಧನ
ಆರ್‌ಟಿಒ ಅಧಿಕಾರಿಗೆ ಬೆದರಿಸಿ 15 ಲಕ್ಷ ಪಡೆದಿದ್ದ ಆರೋಪ| ಸ್ನಾತಕೋತ್ತರ ಪದವೀಧರನಾಗಿರುವ ಆರೋಪಿ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ| ಆರೋಪಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ|
ಬೆಂಗಳೂರು(ಫೆ.22): ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ ಲಕ್ಷಾಂತರ ರುಪಾಯಿ ವಸೂಲಿ ಮಾಡುತ್ತಿದ್ದ ಆರೋಪಿಯೊಬ್ಬ ಅಶೋಕನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೈಸೂರು ಮೂಲದ ನಂದಿನಿ ಲೇಔಟ್ ನಿವಾಸಿ ನಾಗೇಂದ್ರ ಅಲಿಯಾಸ್ ಮಂಜುನಾಥ್ ನಾಯಕ್ (40) ಬಂಧಿತ ಆರೋಪಿಯಾಗಿದ್ದಾನೆ.
ಸ್ನಾತಕೋತ್ತರ ಪದವೀಧರನಾಗಿರುವ ಆರೋಪಿ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಆರೋಪಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ. ಅಧಿಕಾರಿಗಳಿಗೆ ಜಂಟಿ ಆಯುಕ್ತರ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ವಿರುದ್ಧ ಅಕ್ರಮ ಸಂಪತ್ತು ಗಳಿಕೆ ಬಗ್ಗೆ ಐಟಿ ಇಲಾಖೆಗೆ ದೂರು ಬಂದಿದೆ. ನಿಮ್ಮ ಮನೆ ಮೇಲೆ ಐಟಿ ತಂಡ ದಾಳಿ ನಡೆಸಲಿದೆ. ದಾಳಿ ಮಾಡಬಾರದೆಂದರೆ ಹಣ ನೀಡಬೇಕು ಎನ್ನುತ್ತಿದ್ದ. ದಾಳಿಗೆ ಹೆದರಿ ಅಧಿಕಾರಿಗಳು ಆತ ಕೇಳಿದಷ್ಟು ಹಣ ನೀಡುತ್ತಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಫೆ.17ರಂದು ಬೆಂಗಳೂರಿನಲ್ಲಿ ವಾಸಿಸುವ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆರ್‌ಟಿಒ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದ ನಾಗೇಂದ್ರ, 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಆನಂದಯ್ಯ, ಅಷ್ಟು ಹಣ ಕೊಡಲು ಕಷ್ಟವಾಗುತ್ತದೆ ಎಂದು ಹೇಳಿದಾಗ, ಆರೋಪಿಯು ಎಂಟು ಲಕ್ಷ ಕೊಡುವಂತೆ ಸೂಚಿಸಿದ್ದ. ಕೊನೆಗೆ ಐದು ಲಕ್ಷ ಕೊಡುತ್ತೇನೆ ಎಂದು ಆನಂದಯ್ಯ ಹೇಳಿದ್ದರು.
ಫೆ.18ರಂದು ಬೆಳಗ್ಗೆ ಮತ್ತೆ ಕರೆ ಮಾಡಿದ ಆರೋಪಿ ಇಂದೇ ಹಣ ತೆಗೆದುಕೊಂಡು ಬೆಂಗಳೂರಿಗೆ ಬರಬೇಕು. ಇಲ್ಲದಿದ್ದರೆ ದಾಳಿ ಮಾಡಲಾಗುವುದು ಹೆದರಿಸಿದ್ದ. ಗರುಡಾ ಮಾಲ್‌ನಲ್ಲಿರುವ ಕಾಫಿ ಡೇಗೆ ಬರುವಂತೆ ಅಧಿಕಾರಿಗೆ ಸೂಚಿಸಿದ್ದ. ಮಧ್ಯಾಹ್ನ 3ಕ್ಕೆ ಗರುಡಾ ಮಾಲ್‌ಗೆ ಬಂದ ಆನಂದಯ್ಯ ಅವರಿಂದ ಐದು ಲಕ್ಷ ಪಡೆದುಕೊಂಡಿದ್ದ ನಾಗೇಂದ್ರ, ಎನ್‌ಒಸಿ ಫಾರಂ ಕೊಡುತೇನೆ ಎಂದು ಹೇಳಿ ಗರುಡಾ ಮಾಲ್‌ನಿಂದ ಹೊರ ಹೋದವನು ಮತ್ತೆ ವಾಪಾಸ್ ಬಂದಿರಲಿಲ್ಲ. ವಂಚನೆಗೆ ಒಳಗಾಗಿರುವುದನ್ನು ಕಂಡು ಅಧಿಕಾರಿ ಅಶೋಕನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.