Asianet Suvarna News Asianet Suvarna News

ಲಾಕ್‌ಡೌನ್‌ ಮಧ್ಯೆ ಕಳ್ಳಭಟ್ಟಿ ಮಾರಾಟ ಜೋರು: ಕುಡುಕರ ಆರೋಗ್ಯ ಮೂರಾಬಟ್ಟೆ

30-40 ಗಳಿಗೆ ಸಿಗುತ್ತಿದ್ದ ಕಳ್ಳಭಟ್ಟಿಗೆ ಭಾರೀ ಬೇಡಿಕೆ| ಏಜೆಂಟರು ಹುಟ್ಟಿಕೊಂಡಿದ್ದು ಸದ್ಯ ದುಪ್ಪಟ್ಟು ಬೆಲೆಗೆ ಮಾರಾಟ| ಆತಂಕದಲ್ಲಿ ಜನತೆ| ಅಬಕಾರಿ ಆಧಿಕಾರಿಯನ್ನು ಕೂಡಲೇ ಜಮಖಂಡಿ ತಾಲೂಕಿನಿಂದ ಬೇರೆಡೆ ವರ್ಗಾಯಿಸಬೇಕು: ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ|

Arrack Selling in  Jamakhandi in Bagalkot district during India LockDown
Author
Bengaluru, First Published Apr 20, 2020, 10:43 AM IST

ಗುರುರಾಜ ವಾಳ್ವೇಕರ 

ಜಮಖಂಡಿ(ಏ.20): ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಬಂದ್‌ ಆಗಿರುವುದರಿಂದ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದ್ದು ಹಾಗೆಯೇ ಕಳ್ಳಭಟ್ಟಿ ಮಾರಾಟ ದಂಧೆಯೂ ಎಗ್ಗಿಲ್ಲದೇ ನಡೆಯುತ್ತಿರುವುದು ತಾಲೂಕಿನಲ್ಲಿ ಆತಂಕವನ್ನು ಸೃಷ್ಟಿಸಿದೆ.

ತಾಲೂಕಿನ ಗೋಠೆ, ಹಿರೇಪಡಸಲಗಿ, ಲಿಂಗನೂರ ಹಾಗೂ ಸಮೀಪದ ಬಬಲಾದಿ ಸೇರಿ ಕೆಲ ಗ್ರಾಮಗಳಲ್ಲಿ ಅಕ್ರಮವಾಗಿ ವ್ಯಾಪಕ ಕಳ್ಳಭಟ್ಟಿತಯಾರಿಸಲಾಗುತ್ತಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರು ಬಂದು ಕಳ್ಳಭಟ್ಟಿ ಸಾರಾಯಿ ತೆಗೆದುಕೊಂಡು ಹೋಗುತ್ತಿರುವ ಮಾಹಿತಿ ಇದ್ದರೂ ಅಬಕಾರಿ ಇಲಾಖೆ ಸಿಬ್ಬಂದಿ ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೇ ಅಕ್ರಮ ದಂಧೆಯಲ್ಲಿ ಇಲಾಖೆಯೂ ಶಾಮೀಲಾಗಿರುವುದರ ಬಗ್ಗೆ ಅನುಮಾನ ಮೂಡಿಸುವುದರೊಂದಿಗೆ ಕಳ್ಳಭಟ್ಟಿಧಂದೆ ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಚರಂಡಿಯಲ್ಲಿ ಬಚ್ಚಿಟ್ಟು ಸಾರಾಯಿ ಮಾರಾಟ..!

ಕ್ವಾಟರ್‌ನಿಂದ ಲೀಟರ್‌ ಮಾಪ್‌ಗೆ:

ಮದ್ಯ ಬಂದ್‌ ಬಂದಾದ ನಂತರ ಕಳ್ಳಭಟ್ಟಿಗೆ ಭಾರಿ ಬೇಡಿಕೆ ಬಂದಿದ್ದು, ಎಲ್ಲಿ ನೋಡಿದರು ಕಳ್ಳಭಟ್ಟಿಪಾಕೇಟ್‌ಗಳು ಕಂಡು ಬರುತ್ತಿರುವುದು ಮದ್ಯವ್ಯಸನಿಗಳ ಆರೋಗ್ಯಬಗ್ಗೆ ಆತಂಕ ಸೃಷ್ಟಿಸುವಂತೆ ಮಾಡಿದೆ. ತಾಲೂಕಿನಾದ್ಯಂತ ಅದರಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಮದ್ಯ ವ್ಯಸನಿಗಳು ತಾಂಡಾಗಳಿಗೆ ತೆರಳಿ ಕಳ್ಳಭಟ್ಟಿಖರೀದಿಸುತ್ತಿದ್ದಾರೆ. ಸಾರಾಯಿಯನ್ನು ಕ್ವಾಟರ್‌ ಮಾಪದಲ್ಲಿ ಕುಡಿಯುತ್ತಿದ್ದವರು ಕಳ್ಳಭಟ್ಟಿಯನ್ನು ಲೀಟರ್‌ ಮಾಪದಲ್ಲಿ ಕುಡಿಯುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ತಯಾರಿಸುವ ಪ್ರತಿ ಲೀಟರ್‌ ಕಳ್ಳಭಟ್ಟಿಗೆ ಮೊದಲು ಅಷ್ಟೊಂದು ಬೇಡಿಕೆ ಇರಲಿಲ್ಲ. .30-40 ಗಳಿಗೆ ಸಿಗುತ್ತಿದ್ದು, ಮದ್ಯ ಬಂದ್‌ ಆಗಿರುವುದರಿಂದ .100-150ಗೆ ಮಾರಾಟವಾಗುತ್ತಿದೆ. ಇದನ್ನು ಖರೀದಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಏಜೆಂಟರು ಹುಟ್ಟಿಕೊಂಡಿದ್ದು ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ರಾತ್ರಿ ಬಾರ್‌-ಅಂಗಡಿ ಓಪನ್‌?

ಜಮಖಂಡಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನಿಗದಿತ ದರಕ್ಕಿಂತ ಎರಡು-ಮೂರು ಪಟ್ಟು ಹೆಚ್ಚಿಗೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನು ಕೆಲ ಪ್ರಭಾವಿ ನಾಯಕರ ಬಾರ್‌ಗಳಿಂದ ಸರಬರಾಜಾ ಗುತ್ತಿದ್ದು, ರಾತ್ರಿ ಬಾರ್‌-ಅಂಗಡಿಗಳನ್ನು ತೆಗೆದು ಸಾರಾಯಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಗಂಭೀರ ಆರೋಪ.

ರಾಜ್ಯ ಇನ್ನೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಅಬಕಾರಿ ಇಲಾಖೆಗೆ ಆದೇಶಿಸಿದರೂ, ಅಬಕಾರಿ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಳ್ಳಬಟ್ಟೆಯನ್ನು ರಾಜಾರೋಷÜವಾಗಿ ಮಾರಾಟ ಮಾಡುತ್ತಿದ್ದು, ಈ ದಂಧೆಯನ್ನು ಬಂದ್‌ ಮಾಡಿಸಲು ಗ್ರಾಮಸ್ಥರ ಒತ್ತಾಯ.

ಹಲವಾರು ಕೇಸ್‌ಗಳಿದ್ದರೂ ಕಳ್ಳಭಟ್ಟಿ ಮಾರಾಟ!

ತಾಲೂಕಿನ ಕೆಲವು ಗ್ರಾಮಗಳಲ್ಲಿ ತಲೆ ತಲಾಂತರದಿಂದ 70-80 ಕುಟುಂಬಗಳು ಕಳ್ಳಭಟ್ಟಿತಯಾರಿಸಿ ಮಾರಾಟ ಮಾಡುತ್ತಿದ್ದು, ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿವೆ. ಅವರ ವಿರುದ್ಧ ಹಲವಾರು ಕೇಸ್‌ಗಳಿದ್ದರೂ ಕಳ್ಳಭಟ್ಟಿಮಾಡುವುದನ್ನು ನಿಲ್ಲಿಸಿಲ್ಲ. ಅಧಿಕಾರಿಗಳು ಹಫ್ತಾ ವಸೂಲಿ ಮಾಡಿ ಬಡವರ ಆರೋಗ್ಯದ ಜೊತೆ ಚಲ್ಲಾಟ ವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ತಾಲೂಕಿನ ಗೋಠೆ, ಹಿರೇಪಡಸಲಗಿ ಗ್ರಾಮಗಳಿಗೆ ಖುದ್ದಾಗಿ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕಳ್ಳಬಟ್ಟೆತಯಾರಿಕೆ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾ ಅಬಕಾರಿ ಡಿಸಿ ಅರುಣಕುಮಾರ ಜೊತೆ ಮಾತನಾಡಿದ್ದು ಜಮಖಂಡಿಯ ಅಬಕಾರಿ ಅಧಿಕಾರಿ ಮುರನಾಳ ಅನೇಕ ಪ್ರಕರಣಗಳನ್ನು ಮುಚ್ಚಿಹಾಕುತ್ತಿದ್ದಾರೆಂಬ ಮಾಹಿತಿ ಬಂದಿದೆ. ಅಧಿಕಾರಿ ಕೆಲವು ಏಜೆಂಟ್‌ರ ಮಾತು ಕೇಳಿ ರೇಡ್‌ ಹಾಕದೇ ಕಳ್ಳಭಟ್ಟಿತಯಾರಿಕೆದಾರರೊಂದಿಗೆ ಶಾಮೀಲಾಗಿದ್ದು ಬೆಳಕಿಗೆ ಬಂದಿದೆ. ಅಬಕಾರಿ ಆಧಿಕಾರಿಯನ್ನು ಕೂಡಲೇ ಜಮಖಂಡಿ ತಾಲೂಕಿನಿಂದ ಬೇರೆಡೆ ವರ್ಗಾಯಿಸಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಹೇಳಿದ್ದಾರೆ. 

ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುವ ಸ್ಥಳಕ್ಕೆ ದಾಳಿಮಾಡಿ ಎಚ್ಚರಿಕೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ದಂಧೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಅಧಿಕಾರಿಣಿ ಸುಹಾಸಿನಿ ದಳವಾಯಿ ತಿಳಿಸಿದ್ದಾರೆ.

ಗಸ್ತು ತಿರುಗುವ ಯೋಧರು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿನ ನಿವೃತ್ತ ಹಾಗೂ ರಜೆ ಮೇಲೆ ಬಂದ ಯೋಧರು ಸೇರಿಕೊಂಡು ಗ್ರಾಮದಲ್ಲಿ ನಡೆಯುವ ಕಳ್ಳಭಟ್ಟಿ ಸಾರಾಯಿ ಮಾರಾಟಗಾರರ ಹಾಗೂ ಖರೀದಿದಾರನ್ನು ಹಿಡಿಯುವ ಮೂಲಕ ತಮ್ಮೂರನ್ನು ವ್ಯಸನಮುಕ್ತ ಗ್ರಾಮವನ್ನಾಗಿಸಲು ಗಸ್ತು ತಿರುಗುತ್ತಿದ್ದಾರೆ. ಕಳೆದ ಸೋಮವಾರ ಕಳ್ಳಭಟ್ಟಿಪಡೆಯಲು ಗೋಠೆ ಗ್ರಾಮಕ್ಕೆ ಬಂದ ಬೆಳಗಾವಿ ಜಿಲ್ಲೆಯ ಮದ್ಯವ್ಯಸನಿಯರಿಂದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳುವುದಲ್ಲದೇ ಅವರನ್ನು ಚೆನ್ನಾಗಿ ಥಳಿಸಿ ಓಡಿಸುವ ಮೂಲಕ ಅಗತ್ಯ ಎಚ್ಚರಿಕೆಯನ್ನು ನೀಡಿರುವುದು ಗ್ರಾಮದಲ್ಲಿ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
 

Follow Us:
Download App:
  • android
  • ios