ಮಡಿಕೇರಿಯಲ್ಲಿ ಭಾರಿ ಮಳೆ: ಮೂವರು ಸಾವು, 2 ಕುಟುಂಬ ನಾಪತ್ತೆ
ಮೇಘತಾಳು ಗ್ರಾಮದಲ್ಲಿ ಗುಡ್ಡಕುಸಿತವುಂಟಾಗಿ ಎರಡು ಕುಟುಂಬ ನಾಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ
ಮಡಿಕೇರಿ[ಆ.16]: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಮೂವರು ಮೃತಪಟ್ಟು2 ಕುಟುಂಬ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕಾಟಕೇರಿಯ ಸಮೀಪ ಮಣ್ಣು ಕುಸಿದು ಯಶವಂತ್,ವೆಂಕಟರಮಣ,ಪವನ್ ಎಂಬುವವರು ಮೃತಪಟ್ಟಿದ್ದಾರೆ. ಮೇಘತಾಳು ಗ್ರಾಮದಲ್ಲಿ ಗುಡ್ಡಕುಸಿತವುಂಟಾಗಿ ಎರಡು ಕುಟುಂಬ ನಾಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಆತಂಕ ವ್ಯಕ್ತವಾಗಿದೆ.
ಉಮೇಶ್,ಚಂದ್ರಾವತಿ ರೈ,ಚಂದುಗೋಪಾಲ್,ಹೊನ್ನಮ್ಮ ಕಣ್ಮರೆಯಾದವರು.ಇದೇ ಗ್ರಾಮದ ಬೆಟ್ಟದ ಮೇಲೆ ಸುಮಾರು 30 ಕುಟುಂಬಗಳಿಂದ ರಕ್ಷಣೆಗಾಗಿ ಮೊರೆಯಿಡುತ್ತಿದ್ದು ಹೆಲಿಕಾಪ್ಟರ್ ಮೂಲಕ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಮಂಜು, ಭಾರೀ ಮಳೆಯಿಂದ ಹೆಲಿಕಾಪ್ಟರ್ ಕಾರ್ಯಾಚರಣೆಗೂ ಅಡ್ಡಿಯಾಗುವ ಸಾಧ್ಯತೆಯಿದೆ.
ತಾಲೂಕಿನ ಹೆಬ್ಬಟ್ಟಗೇರಿ, ದೇವಸ್ತೂರು ಮತ್ತಿತರ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು ಸಹಾಯಕ್ಕಾಗಿ ಗ್ರಾಮಸ್ಥರು ಮೊರೆಯಿಡುತ್ತಿದ್ದಾರೆ. ಹಲವು ಕಡೆ ಹೊಳೆಯಲ್ಲಿ ಮನೆಗಳು ಕೊಚ್ಚಿ ಹೋಗಿವೆ.