ರಾಮನಗರ: ರೈಲು ಹೊಡೆತಕ್ಕೆ ಕುರಿಗಳ ಮಾರಣ ಹೋಮ
ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ದಾರುಣ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರ, [ಡಿ. 23]: ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ಘಟನೆ ಇಂದು [ಭಾನುವಾರ] ಚನ್ನಪಟ್ಟಣದ ಮುದಗೆರೆ ಸಮೀಪ ನಡೆದಿದೆ.
ಕುರಿಗಳು ಮುದಗೆರೆಯ ದೇಸಿಗೌಡ ಎಂಬವರಿಗೆ ಸೇರಿವೆ. ಕುರಿಗಳು ಹಳಿ ದಾಟುತ್ತಿದ್ದ ವೇಳೆ ದಿಡೀರ್ ಆಗಿ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿವೆ.
ರೈಲಿನ ರಭಸದ ಹೊಡೆತಕ್ಕೆ ಕುರಿಗಳ ದೇಹದ ಭಾಗಗಳು ಛಿದ್ರ-ಛಿದ್ರವಾಗಿ ಎಲ್ಲೊಂದರಲ್ಲಿ ಬಿದ್ದಿವೆ.ಕುರಿಗಳ ಮಾರಣಹೋಮದಿಂದ ಲಕ್ಷಾಂತರ ರು. ನಷ್ಟವಾಗಿದ್ದು, ಮಾಲೀಕ ಮುದಗೆರೆಯ ದೇಸಿಗೌಡಗೆ ದಿಕ್ಕು ತೋಚದಂತಾಗಿದೆ.