ವರದಿ :  ಆತ್ಮಭೂಷಣ್‌

ಮಂಗಳೂರು (ಡಿ.16):  ವಿವಿಧ ಸ್ವಾದದ ಚಾಕಲೇಟ್‌ ಮೆಲ್ಲುತ್ತಿರುವವರಿಗೆ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಶುಭ ಸುದ್ದಿಯನ್ನು ನೀಡಿದೆ. ಭವಿಷ್ಯದಲ್ಲಿ ಅಡಕೆಯಿಂದಲೇ ಚಾಕಲೇಟ್‌ ಉತ್ಪಾದಿಸುವ ಸಾಹಸಕ್ಕೆ ಕ್ಯಾಂಪ್ಕೋ ಕೈಹಾಕಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಅಡಕೆ ಫ್ರೆಶ್ನರ್‌ ಬಳಿಕ ಅಡಕೆಯದ್ದೇ ಚಾಕಲೇಟ್‌ ಕೂಡ ಬಾಯಿಚಪ್ಪರಿಸಲು ಸಿದ್ಧಗೊಳ್ಳಲಿದೆ.

ಒಂದೊಮ್ಮೆ ಗುಟ್ಕಾ, ಪಾನ್‌ ಹೆಸರಿನಲ್ಲಿ ಕೇವಲ ತಿಂದು ಉಗುಳುವುದಕ್ಕೆ ಸೀಮಿತವಾಗಿದ್ದ ಅಡಕೆ ನಂತರ ಕಾಜು ಸುಪಾರಿ ವರೆಗೆ ವಿವಿ ರೀತಿಯ ಮೌಲ್ಯವರ್ಧಿತ ಉತ್ಪನ್ನವಾಗಿ ಹೊರಹೊಮ್ಮಿತ್ತು. ಕೆಲವು ವರ್ಷ ಹಿಂದೆ ಅಡಕೆ ಸಿಪ್ಪೆಯಿಂದ ಮೌತ್‌ ಫ್ರೆಶ್ನರ್‌ ಅಭಿವೃದ್ಧಿಪಡಿಸಿದ್ದ ಕ್ಯಾಂಪ್ಕೋ, ಈಗ ಅಡಕೆಯಿಂದಲೇ ಮೌತ್‌ ಫ್ರೆಶ್ನರ್‌ ತಯಾರಿಸಿ ಆರೋಗ್ಯಕ್ಕೂ ಹಿತಕರ ಎಂಬುದನ್ನು ಶ್ರುತಪಡಿಸಲು ಮುಂದಾಗಿದೆ.

ಕ್ಯಾಂಪ್ಕೋದ ಮುಂದಿನ ಯೋಜನೆಗಳ ಕುರಿತು ಕ್ಯಾಂಪ್ಕೋ ನೂತನ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮಂಗಳವಾರ ‘ಕನ್ನಡಪ್ರಭ’ ಜೊತೆ ಮಾತನಾಡಿದರು.

ಗಂಟೆಗೆ 100 ಕೆಜಿ ಅಡಿಕೆ ಸುಲಿವ ಕಡಿಮೆ ದರದ ಯಂತ್ರ ಇಲ್ಲಿದೆ : ಬೇಕಿದ್ದವರು ಸಂಪರ್ಕಿಸಿ ...

ಮೂರು ವರ್ಷ ಹಿಂದೆ ಅಡಕೆ ಸಿಪ್ಪೆಯಿಂದ ಮೌತ್‌ ಫ್ರೆಶ್ನರ್‌ ಸಿದ್ಧಪಡಿಸಿ, ಅದನ್ನು ಚೀನಾಗೆ ಪ್ರಾಯೋಗಿಕವಾಗಿ ಮಾರಾಟ ಮಾಡಲಾಯಿತು. ಬಳಿಕ ಅದರ ಮುಂದುವರಿದ ಭಾಗವಾಗಿ ಅಡಕೆಯಿಂದಲೇ ಮೌತ್‌ ಫ್ರೆಶ್ನರ್‌ ತಯಾರಿಸಲಾಗಿದೆ. ಅಡಕೆ ಸಿಪ್ಪೆಯ ಮೌತ್‌ ಫ್ರೆಶ್ನರ್‌ನ್ನು ತಿಂದು ಉಗುಳಬೇಕಾಗುತ್ತಿತ್ತು. ಆದರೆ ಕಾಯಿ ಹಾಗೂ ಹಣ್ಣು ಅಡಕೆಯಿಂದಲೇ ತಯಾರಿಸುವ ಈ ಮೌತ್‌ ಫ್ರೆಶ್ನರ್‌ನ್ನು ನುಂಗಬಹುದು. ಇದುನ್ನು ನೈಸರ್ಗಿಕವಾಗಿ ತಯಾರಿಸಲಾಗಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಈ ನಿಟ್ಟಿನಲ್ಲಿ ಅಂತಿಮ ಪ್ರಯೋಗ ನಡೆಯುತ್ತಿದೆ. ಕೆಲವೇ ತಿಂಗಳಲ್ಲಿ ತಿನ್ನುವ ಮೌತ್‌ ಫ್ರೆಶ್ನರ್‌ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಕಿಶೋರ್‌ ಕೊಡ್ಗಿ ತಿಳಿಸಿದರು.

ಅಡಕೆ ಚಾಕಲೇಟ್‌!:

ಅಡಕೆಯಿಂದ ಮೌತ್‌ ಫ್ರೆಶ್ನರ್‌ ತಯಾರಿಸಿದ ಬಳಿಕ ಈಗ ಚಾಕಲೇಟ್‌ ಸಿದ್ಧಪಡಿಸುವುದು ಕ್ಯಾಂಪ್ಕೋದ ಹೊಸ ಕಲ್ಪನೆ. ಈಗಾಗಲೇ ಅಡಕೆಯಿಂದ ವಿವಿಧ ಕಡೆಗಳಲ್ಲಿ ಟೀ, ಕಷಾಯ, ಲಡ್ಡು ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನ ಹೊರಬರುತ್ತಿರಬೇಕಾದರೆ ಚಾಕಲೇಟ್‌ನ್ನು ಕೂಡ ಯಾಕೆ ತಯಾರಿಸಬಾರದು ಎಂಬ ಚಿಂತನೆ ನಡೆಸಿದೆ. ಅಡಕೆ ಮೌತ್‌ ಫ್ರೆಶ್ನರ್‌ ತಯಾರಿಸಿರುವುದರಿಂದ ಅದರ ಮುಂದುವರಿದ ಭಾಗವಾಗಿ ಅಡಕೆ ಚಾಕಲೇಟ್‌ ಆವಿಷ್ಕಾರಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸತೊಡಗಿದೆ. ಆದರೆ ಇದು ಯಾವ ಹಂತದಲ್ಲಿದೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅಧ್ಯಕ್ಷ ಕಿಶೋರ್‌ ಕೊಡ್ಗಿ.

ಚಾಕಲೇಟ್‌ ಟೌನ್‌: ಅಡಕೆ ಹಾಗೂ ಪೆಪ್ಪರ್‌ಗೆ ಮಾಸ್ಟರ್‌ ಗೋದಾಮು ನಿರ್ಮಾಣವಾಗುತ್ತಿರುವ ಪುತ್ತೂರು ಹೊರವಲಯದ ಕಾವು ಎಂಬಲ್ಲಿ ವಿಶಾಲವಾದ ‘ಚಾಕಲೇಟ್‌ ಟೌನ್‌’ ತಲೆ ಎತ್ತಲಿದೆ. ಇದು ಚಾಕಲೇಟ್‌ನ ಪ್ರವಾಸಿ ಹಾಟ್‌ಸ್ಪಾಟ್‌ ಆಗಿ ರೂಪುಗೊಳ್ಳಲಿದೆ.

ಅಲ್ಲಿ ಚಾಕಲೇಟ್‌ ಉತ್ಪಾದನೆ ವರೆಗಿನ ಸಮಗ್ರ ಚಿತ್ರಣ ಪ್ರವಾಸಿಗರಿಗೆ ಸಿಗಲಿದೆ. ಚಾಕಲೇಟ್‌ ತಯಾರಿಕೆಯ ಡೆಮೋ ಕೂಡ ಇರುತ್ತದೆ. ಪುಟಾಣಿಗಳನ್ನು ಆಕರ್ಷಿಸಲು ಪಾರ್ಕ್, ಹೊಟೇಲ್‌, ಚಾಕಲೇಟ್‌ ಔಟ್‌ಲೆಟ್‌ ಸೇರಿದಂತೆ ಪ್ರವಾಸಿ ತಾಣವಾಗಿ ಮಾರ್ಪಡಲಿದೆ. ಮಾಚ್‌ರ್‍ ವೇಳೆಗೆ ಇದು ಸಿದ್ಧಗೊಳ್ಳಲಿದೆ ಎಂದರು.

ಆನ್‌ಲೈನ್‌ನಲ್ಲಿ ಈಗ ಕ್ಯಾಂಪ್ಕೋ ಚಾಕಲೇಟ್‌: ಪ್ರಸಿದ್ಧ ಆನ್‌ಲೈನ್‌ ವಹಿವಾಟು ತಾಣ ಅಮೆಜಾನ್‌ನಲ್ಲಿ ಈಗ ಅಡಕೆಯಲ್ಲದೆ 10 ವಿಧದ ಚಾಕಲೇಟ್‌ಗಳನ್ನು ಖರೀದಿಸಬಹುದು. ಅರ್ಧ ಮತ್ತು ಒಂದು ಕಿಲೋ ಕ್ಯಾಂಪ್ಕೋ ಬ್ರಾಂಡ್‌ ಅಡಕೆಯನ್ನು ಅಮೆಜಾನ್‌ ಮೂಲಕ ಆನ್‌ಲೈನ್‌ ವಹಿವಾಟಿಗೆ ಮೊದಲು ಪರಿಚಯಿಸಲಾಗಿತ್ತು. ನಂತರ ಈಗ ಕ್ಯಾಂಪ್ಕೋ ಚಾಕಲೇಟ್‌ನ್ನು ಅಮೆಜಾನ್‌ನಲ್ಲಿ ಖರೀದಿಗೆ ಅವಕಾಶ ಮಾಡಲಾಗಿದೆ. ಇದಕ್ಕೆ ದೇಶ, ವಿದೇಶಗಳಿಂದ ಅಪಾರ ಬೇಡಿಕೆ ವ್ಯಕ್ತವಾಗುತ್ತಿದ್ದು, ಕ್ಯಾಂಪ್ಕೋ ಬ್ರಾಂಡ್‌ ಪಸರಿಸಲು ಸುಲಭ ಸಾಧ್ಯವಾಗಿದೆ ಎನ್ನುತ್ತಾರೆ ಕೊಡ್ಗಿ.

ಪುತ್ತೂರಿನಲ್ಲಿರುವ ಕ್ಯಾಂಪ್ಕೋ ಚಾಕಲೇಟ್‌ ಫ್ಯಾಕ್ಟರಿಯಲ್ಲಿ ಚಾಕಲೇಟ್‌ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಯೋಚನೆ ಹೊಂದಲಾಗಿದೆ. ಮುಂದಿನ ಐದು ವರ್ಷದಲ್ಲಿ 15 ಸಾವಿರ ಮೆಟ್ರಿಕ್‌ ಟನ್‌ ಕೋಕೋ ಪುಡಿ ಉತ್ಪಾದಿಸುವ ಗುರಿ ಹೊಂದಿದ್ದು, ಮಾರುಕಟ್ಟೆಗೆ ವಿವಿಧ ಬಗೆಯ ನೈಸರ್ಗಿಕ ಚಾಕಲೇಟ್‌ ಬಿಡುಗಡೆಗೊಳಿಸುವ ಇಂಗಿತವನ್ನು ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳುತ್ತಾರೆ.

ಜನವರಿ ಮಧ್ಯಂತರ ಬಳಿಕ ಅಡಕೆ ಧಾರಣೆ ಏರಿಕೆ

2021 ಜನವರಿ ಮಧ್ಯಂತರ ಬಳಿಕ ಅಡಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯಾಗುವ ನಿರೀಕ್ಷೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕೊಡ್ಗಿ ವ್ಯಕ್ತಪಡಿಸುತ್ತಾರೆ.

ಈ ವರ್ಷವೇ ಅಡಕೆ ಕಿಲೋಗೆ 400 ರು. ದಾಟಿದ ಗರಿಷ್ಠ ಧಾರಣೆ ದಾಖಲಾಗಿದೆ. ಸದ್ಯಕ್ಕೆ ಅಡಕೆ ಧಾರಣೆ ಇಳಿಮುಖವಾಗಿದೆ. ಈಗ ಮತ್ತೆ ಧಾರಣೆಯಲ್ಲಿ ಚೇತರಿಕೆ ಕಾಣುತ್ತಿದೆ. ಜನವರಿ ಮಧ್ಯಭಾಗದಲ್ಲಿ ಅಡಕೆ ಮಾರುಕಟ್ಟೆಸ್ಥಿರತೆಗೆ ಕಿಲೋಗೆ 501ರ ಬದಲು 300 ರು. ಬೆಂಬಲ ಬೆಲೆ ಧಾರಣೆಯನ್ನು ನಿಗದಿಪಡಿಸುವಂತೆ ಕೇಂದ್ರಕ್ಕೆ ನಿಯೋಗ ಮೂಲಕ ಮನವಿ ಸಲ್ಲಿಸಲಾಗುವುದು. ತಕ್ಷಣಕ್ಕೆ ವಿದೇಶಿ ಆಮದು ಸಂಪೂರ್ಣ ನಿರ್ಬಂಧಕ್ಕೆ ಕೇಂದ್ರ ಸರ್ಕಾರಕ್ಕೆ ಪತ್ರ ಮುಖೇನ ಆಗ್ರಹಿಸಲಾಗಿದೆ. ಅದೇ ರೀತಿ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ಬಗ್ಗೆ ಅಡಕೆ ಮಾರುಕಟ್ಟೆಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯ ವರದಿ ಸಿಪಿಸಿಆರ್‌ಐ ಮತ್ತು ಸ್ಪೈಸ್‌ ಬೋರ್ಡ್‌ ಜರ್ನಲ್‌ಗಳಲ್ಲಿ ಪ್ರಕಟವಾಗಿದೆ. ಇದರ ಆಧಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲಾಗುವುದು ಎಂದು ಕಿಶೋಕ್‌ ಕೊಡ್ಗಿ ಹೇಳಿದರು.