ಅರಸಾಪುರ: ರಸ್ತೆ ಅಗಲೀಕರಣಕ್ಕೆ ಶಾಲಾ ಕೊಠಡಿ ಬಲಿ
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜ್ಞಾನ ದೇಗುಲದಲ್ಲಿ ಹಲವು ಎಡರು ತೊಡರುಗಳಿಂದ ವಿದ್ಯಾರ್ಥಿಗಳ ಗುಣಮಟ್ಟ ಶಿಕ್ಷಣಕ್ಕೆ ಅಡಚಣೆಯಾಗುತ್ತಿದ್ದು, ಅಂತಹದೇ ಘಟನೆಯೊಂದು ಕೊರಟಗೆರೆ ತಾಲೂಕಿ ಅರಸಾಪುರದಲ್ಲಿ ನಡೆದಿದೆ. ರಸ್ತೆ ಅಗಲೀಕರಣಕ್ಕೆ ಶಾಲೆ ನೆಲಸಮವಾದ ಕಾರಣ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವ ಅನಿವಾರ್ಯ ಎದುರಾಗಿದೆ.
ಜಿ.ಎಲ್. ಸುರೇಶ್
ಕೊರಟಗೆರೆ : ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜ್ಞಾನ ದೇಗುಲದಲ್ಲಿ ಹಲವು ಎಡರು ತೊಡರುಗಳಿಂದ ವಿದ್ಯಾರ್ಥಿಗಳ ಗುಣಮಟ್ಟ ಶಿಕ್ಷಣಕ್ಕೆ ಅಡಚಣೆಯಾಗುತ್ತಿದ್ದು, ಅಂತಹದೇ ಘಟನೆಯೊಂದು ಕೊರಟಗೆರೆ ತಾಲೂಕಿ ಅರಸಾಪುರದಲ್ಲಿ ನಡೆದಿದೆ. ರಸ್ತೆ ಅಗಲೀಕರಣಕ್ಕೆ ಶಾಲೆ ನೆಲಸಮವಾದ ಕಾರಣ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವ ಅನಿವಾರ್ಯ ಎದುರಾಗಿದೆ.
ತಾಲೂಕಿನ ಅರಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಊರಲ್ಲಿ ಸಮರ್ಪಕ ಶಾಲಾ ಕೊಠಡಿಗಳಿಲ್ಲದೆ ಮರದ ಕೆಳಗಡೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೋಧನೆ ನಡೆಸುತ್ತಿದ್ದರೆ, 4 ಹಾಗೂ 5ತರಗತಿ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಗೊಂದಲದ ನಡುವೆ ಪಾಠ ಪ್ರವಚನ ಕೇಳುವ ಅನಿವಾರ್ಯತೆ ಒದಗಿರುವುದು ಶೋಚನೀಯ ಸಂಗತಿ.
ಈ ಶಾಲೆಯು ಗೌರಿಬಿದನೂರು ಹಾಗೂ ಮಧುಗಿರಿ ಎನ್ಎಚ್ 4 ಚತುಷ್ಪಥ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಶಾಲೆಯ ಮೂರು ಕೊಠಡಿಗಳ ಜೊತೆಗೆ ಕಾಂಪೌಂಡ್ ನಾಶವಾದ ಕಾರಣ, ಪ್ರೌಢಶಾಲೆಯ ಕೊಠಡಿಗಳನ್ನು ಬಳಸಿಕೊಳ್ಳುತ್ತಿದ್ದು ಜೊತೆಗೆ ಉರ್ದು ಶಾಲೆಯ ಕೊಠಡಿಯನ್ನು ಬಳಸಿದರೂ 1, 2, 3 ಹಾಗೂ 7 ನೇ ತರಗತಿ ವಿದ್ಯಾರ್ಥಿಗಳು ಮರದ ಕೆಳಗೆ ಕುಳಿತು ಪಾಠ ಪ್ರವಚನ ಕೇಳಿದರೆ, 4 ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಗೊಂದಲದ ನಡುವೆ ಪಾಠ ಕೇಳುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಮಾರಕವಾಗಿದೆ.
ಚತುಷ್ಪಥ ರಸ್ತೆಯಿಂದ ವಾಹನಗಳ ದಟ್ಟತೆ ಹೆಚ್ಚಾಗಿದ್ದು, ಹಿರಿಯ ಪ್ರಾಥಮಿಕ ಪಾಠ ಶಾಲೆಯಾದ ಕಾರಣ, ಸಣ್ಣ ಪುಟ್ಟ ಮಕ್ಕಳು 1 ತರಗತಿಯಿಂದ 4 ತರಗತಿಯ ವಿದ್ಯಾರ್ಥಿಗಳು ರಸ್ತೆ ದಾಟಿ ಶಾಲೆಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಜೊತೆಗೆ ಈ ಹಿಂದೆ ಹಲವು ಬಾರಿ ರಸ್ತೆ ದಾಟುವಾಗ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಎರಡು ಮೂರು ಬಾರಿ ಅಪಘಾತ ಸಂಭವಿಸಿದ್ದರಿಂದ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಬಿಸಿಯೂಟಕ್ಕಾಗಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಿದ್ದಾರೆ. ಶಿಕ್ಷಕರದ್ದು ಇದೇ ಕತೆಯಾಗಿದೆ.
ಶೌಚಾಲಯಕ್ಕೆ ಪರದಾಟ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 3 ಮಹಿಳಾ ಶಿಕ್ಷಕರು ಸೇರಿದಂತೆ ನೂರಾರು ಜನ ವಿದ್ಯಾರ್ಥಿನಿಯರಿರುವ ಶೌಚಾಲಯಕ್ಕಾಗಿ ಪರಿತಪಿಸುತ್ತಿದ್ದು, ಶಾಲಾ ಕೊಠಡಿ ಕೊರತೆ ಒಂದೆಡೆಯಾದರೆ, ಶೌಚಾಲಯ ಕೊರತೆ ಸಹ ಈ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿದೆ.
ಅರಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರಸ್ತೆ ಅಗಲೀಕರಣದಿಂದ ಕಾಂಪೌಂಡ್, ಬಿಲ್ಡಿಂಗ್ ನೆಲಸಮವಾಗಿದೆ, ವಿದ್ಯಾರ್ಥಿಗಳು ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿದ್ದು, ಶಾಲೆಯನ್ನು ನಿರ್ಮಿಸಿ ಕೊಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಿತದೃಷ್ಟಿಯಿಂದ ಶಾಲಾ ಕಟ್ಟಡಗಳಿಗೆ ಅನುದಾನ ನೀಡಬೇಕು.
ದಿನೇಶ್, ಶಾಲ ಎಸ್‌ಡಿಎಂಸಿ ಉಪಾಧ್ಯಕ್ಷ
ಶಾಲೆ ಇತ್ತೀಚೆಗೆ ರಸ್ತೆ ಅಗಲೀಕರಣದಿಂದ ಶಾಲಾ ಕಾಂಪೌಂಡ್ ಹಾಗೂ ಶಾಲಾ ಕೊಠಡಿಗಳನ್ನು ಹೊಡೆಯಲಾಗಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಲ್ಲಿಯ ಪಕ್ಕದ ಸರ್ಕಾರಿ ಪ್ರೌಢಶಾಲೆ ಹಾಗೂ ಉರ್ದು ಶಾಲೆಗೆ ಸ್ಥಳಾಂತರಿಸಿದ್ದು, ಸಣ್ಣಪುಟ್ಟ ಅಡಚಣೆ ಬಿಟ್ಟರೆ ಯಾವುದೇ ತೊಂದರೆ ಇರುವುದಿಲ್ಲ.
ನಟರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ, ಕೊರಟಗೆರೆ.