ರಾಯಚೂರು(ಜು.22): ಡೆಡ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆಗಸ್ಟ್ 2 ರಿಂದ 8 ರವರೆ ಶ್ರೀಮಠದಲ್ಲಿ ನಡೆಯಲಿರುವ ರಾಯರ ಆರಾಧನಾ ಮಹೋತ್ಸವಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡದಿರಲು ಶ್ರೀಮಠದ ಆಡಳಿತ ಮಂಡಳಿ ನಿರ್ಧರಿಸಿದೆ. 

ಆಗಸ್ಟ್ 2 ರಿಂದ 8 ರವರೆ ಶ್ರೀಮಠದಲ್ಲಿ 349ನೇ ವರ್ಷದ ರಾಯರ ಆರಾಧನಾ ಮಹೋತ್ಸವ ನಡೆಯಲಿದೆ. ಸಂಪ್ರದಾಯದಂತೆ ಶ್ರೀಮಠದಲ್ಲಿ ರಾಯರ ಆರಾಧನಾ ಮಹೋತ್ಸವ ನಡೆಯಲಿದ್ದು, ಶ್ರೀಮಠದ ಸಿಬ್ಬಂದಿ ಹಾಗೂ ಅರ್ಚಕರಿಂದಲೇ ಮಾತ್ರ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ.

ಆರಾಧನಾ ಮಹತೊತ್ಸವದಲ್ಲಿ 50 ಕ್ಕೂ ಕಡಿಮೆ ಜನರು ಸೇರಿ ಆರಾಧನಾ ಮಹೋತ್ಸವ ನಡೆಸಲು ಯೋಜನೆ  ರೂಪಿಸಲಾಗಿದೆ. ಈ ಬಾರಿಯ ಆರಾಧನಾ ಮಹೋತ್ಸವದಲ್ಲಿ ಭಕ್ತರಿಗೆ ಅವಕಾಶ ಇರುವುದಿಲ್ಲ. ಶ್ರೀಮಠದ ಮಂತ್ರಾಲಯ ವಾಹಿನಿ ಮೂಲಕ  ಆರಾಧನಾ ಮಹೋತ್ಸವ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಈ ಬಾರಿ ಭಕ್ತರು ಟಿವಿ ಮೂಲಕವೇ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನ ವೀಕ್ಷಿಸಬಹುದಾಗಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ. 

ಸೂರ್ಯಗ್ರಹಣ: ಮಂತ್ರಾಲಯದ ರಾಯರ ಮಠದಲ್ಲಿ ವಿಶೇಷ ಹೋಮ

ಕೊರೋನಾ ಸೋಂಕು ಕಡಿಮೆಯಾದ ಬಳಿಕ ಶ್ರೀಮಠದಲ್ಲಿ ಭಕ್ತರಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಆರಾಧನಾ ಸಂಸ್ಮರಣೋತ್ಸವ ಎಂಬ ಹೆಸರಿನ ಕಾರ್ಯಕ್ರಮವನ್ನ ಅಯೋಜಿಸಲಾಗುವುದು ಎಂದು ತಿಳಿಸಿದೆ. ಆರಾಧನಾ ಮಹೋತ್ಸವ ವೇಳೆ ಶ್ರೀಮಠದಲ್ಲಿ ಯಾವುದೇ ವಸತಿ ಸೌಕರ್ಯವೂ ಇರುವುದಿಲ್ಲ. ಹೀಗಾಗಿ ಆರಾಧನಾ ಮಹೋತ್ಸವಕ್ಕೆ ಭಕ್ತರು ಬರದಂತೆ ಶ್ರೀಮಠ ಮನವಿ ಮಾಡಿಕೊಂಡಿದೆ.