ತಪ್ಪಿದ್ದಲ್ಲಿ ಅಕ್ರಮ ಪಡಿತರ ಹೊಂದಿದವರ ವಿರುದ್ಧ ಕಠಿಣ ಕ್ರಮ| ನ್ಯಾಯ ಬೆಲೆ ಅಂಗಡಿಯಿಂದ ಹಂಚಿಕೆ ಪಡೆದ ಆಹಾರಧಾನ್ಯಗಳ ಮೌಲ್ಯವನ್ನು ಮುಕ್ತ ಮಾರುಕಟ್ಟೆ ಬೆಲೆಯಲ್ಲಿ ದಂಡ ವಸೂಲಿ: ಜಿಲ್ಲಾಧಿಕಾರಿ ಮಾಲಪಾಟಿ| 

ಬಳ್ಳಾರಿ(ಏ.04): ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಮತ್ತು ಬಿಪಿಎಲ್‌ (ಆದ್ಯತಾ ಪಡಿತರ ಚೀಟಿ) ಪಡಿತರ ಚೀಟಿಗಳನ್ನು ಇಲಾಖೆ ಮಾನದಂಡಗಳ ಪ್ರಕಾರ ಮಾಹಿತಿ ನೀಡದೆ ಅಕ್ರಮವಾಗಿ ಬಿಪಿಎಲ್‌ ಪಡಿತರ ಚೀಟಿಗಳನ್ನು ಪಡೆದಿರುವುದು ಕಂಡುಬಂದಿದ್ದು, ಅಂತವರು ಕೂಡಲೇ ಸ್ವಯಂಪ್ರೇರಿತವಾಗಿ ಆಯಾ ತಾಲೂಕಿನ ತಹಸೀಲ್ದಾರರಿಗೆ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್‌) ಪಡಿತರ ಚೀಟಿಯನ್ನು ಏ. 15ರೊಳಗಾಗಿ ಹಿಂತಿರುಗಿಸಿ ಎಪಿಎಲ್‌ ಪಡಿತರ ಚೀಟಿಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಯಂ ನೌಕರರು ಅಂದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು, ನಿಗಮಗಳು/ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾತೆರಿಗೆ, ವ್ಯಾಟ್‌, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್‌ಗಿಂತ ಹೆಚ್ಚಿನ ಒಣ ಭೂಮಿ ಅಥಾವ ತತ್ಸಮಾನ ನೀರಾವರಿ ಭೂಮಿ ಹೊಂದಿರುವುದು, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯವು 1,20,000ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕುಚಕ್ರ ವಾಹನವನ್ನು ಹೊಂದಿರುವವರು ಮಾನದಂಡಗಳನ್ನು ಮೀರಿ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್‌) ಪಡಿತರ ಚೀಟಿಗಳನ್ನು ಪಡೆದಿರುತ್ತಾರೆ. ಇಂತಹ ಪಡಿತರ ಚೀಟಿದಾರರು ಸ್ವಯಂಪ್ರೇರಿತವಾಗಿ ಆಯಾ ತಾಲೂಕಿನ ತಹಸೀಲ್ದಾರರಿಗೆ ಅಂತ್ಯೋದಯ ಮತ್ತು ಆದ್ಯತಾ (ಬಿ.ಪಿ.ಎಲ್‌) ಪಡಿತರ ಚೀಟಿಗಳನ್ನು ಹಿಂದಿರುಗಿಸಿ ಎಪಿಎಲ್‌ ಪಡಿತರ ಚೀಟಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ: ಬಡವನಿಗೆ ಸೂರು ಕಲ್ಪಿಸಿಕೊಟ್ಟ ಡಾ. ರಾಜ್‌ ಅಭಿಮಾನಿಗಳು

2011ರ ಜನಗಣತಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ 5,38,665 ಕುಟುಂಬಗಳು ದಾಖಲಾಗಿದ್ದು, 2021ರ ಮಾರ್ಚ್‌ ತಿಂಗಳವರೆಗೆ ಜಿಲ್ಲೆಯಲ್ಲಿ 66,547 ಅಂತ್ಯೋದಯ ಅನ್ನ, 5,30,341 ಆದ್ಯತಾ (ಬಿ.ಪಿ.ಎಲ್‌) ಸೇರಿ ಒಟ್ಟು 5,96,888 ಕುಟುಂಬಗಳಿಗೆ ಆದ್ಯತಾ (ಬಿಪಿಎಲ್‌) ಪಡಿತರ ಚೀಟಿ ನೀಡಲಾಗಿದೆ. ಜೊತೆಗೆ 60,571 ಕುಟುಂಬಗಳಿಗೆ ಆದ್ಯತೇತರ (ಎಪಿಎಲ್‌) ಪಡಿತರ ಚೀಟಿಗಳನ್ನು ಸಹ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ

ಈ ಹಿನ್ನೆಲೆಯಲ್ಲಿ ಅರ್ಥಿಕವಾಗಿ ಸಬಲರು ಮತ್ತು ಇತರೆ ಅನರ್ಹರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಹಿಂದುರುಗಿಸಲು ಪದೇ ಪದೇ ಮನವಿ ಮಾಡಲಾಗಿದೆ. ಈ ಮನವಿಗೆ ಕೆಲವರು ಸ್ಪಂದಿಸಿ ಆದ್ಯತಾ ಪಡಿತರ ಚೀಟಿ ಹಿಂದುರುಗಿಸಿ ಆದ್ಯತೇತರ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಪ್ಪಿದ್ದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ ಹಾಗೂ ಐಪಿಸಿ ಕಲಂಗಳಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ, ಈ ಅವಧಿಯಲ್ಲಿ ನ್ಯಾಯ ಬೆಲೆ ಅಂಗಡಿಯಿಂದ ಹಂಚಿಕೆ ಪಡೆದ ಆಹಾರಧಾನ್ಯಗಳ ಮೌಲ್ಯವನ್ನು ಮುಕ್ತ ಮಾರುಕಟ್ಟೆ ಬೆಲೆಯಲ್ಲಿ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.