ಮಂಗಳೂರು(ಆ.09): ಕರ್ನಾಟಕ ಅಂಚೆ ವೃತ್ತವು ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್‌ ಸೇವಕ್‌ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ನೇಮಕಾತಿಗೆ ಆದೇಶಿದೆ. ಅದರಂತೆ ಮಂಗಳೂರು ವಿಭಾಗದಲ್ಲಿ 43 ಹುದ್ದೆ ಹಾಗೂ ಪುತ್ತೂರು ವಿಭಾಗದಲ್ಲಿ 71 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಸಂದರ್ಶನ ಇಲ್ಲದೆಯೇ ಆಯ್ಕೆಯಾಗುವ ಅಪೂರ್ವ ಅವಕಾಶವನ್ನು ಅಂಚೆ ಇಲಾಖೆ ಕಲ್ಪಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ, ಆಯ್ಕೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಆನ್‌ಲೈನ್‌ ಮೂಲಕ ಎಸ್‌ಎಸ್‌ಎಲ್‌ಸಿ ಮೆರಿಟ್‌ ಆಧಾರದಲ್ಲಿಯೇ ಆಯ್ಕೆ ನಡೆಯಲಿದೆ ಎಂದರು.

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2019ರ ಆಗಸ್ಟ್‌ 5ಕ್ಕೆ ಅನ್ವಯವಾಗುವಂತೆ 18ರಿಂದ 40 ವರ್ಷ ವಯೋಮಿತಿಯೊಳಗಿನವರಾಗಿರಬೇಕು. ಅನುಸೂಚಿತ ಜಾತಿ ಮತ್ತು ಇತರ ವರ್ಗಗಳಿಗೆ ಐದು ವರ್ಷಗಳ ವಿನಾಯಿತಿ, ಒಬಿಸಿ ಅಂದರೆ ಹಿಂದುಳಿದ ವರ್ಗಗಳಿಗೆ ಮೂರು ವರ್ಷಗಳ ವಿನಾಯಿತಿ ಇರುತ್ತದೆ ಎಂದು ಅವರು ಹೇಳಿದರು.

ಡಾಕ್‌ ಸೇವಕ್‌ ಹುದ್ದೆಯಲ್ಲಿ ಉಪ ಅಂಚೆ ಕಚೇರಿಗಳಲ್ಲಿ ಪ್ಯಾಕರ್‌ ಹುದ್ದೆಗಳನ್ನು ನಿರ್ವಹಿಸಬೇಕಾಗುತ್ತದೆ. ಆಯಾ ಅಂಚೆ ಕಚೇರಿಗಳಿಗಿರುವ ಉಪ ಅಂಚೆ ಪಾಲಕರಿಗೆ ಕಚೇರಿಯ ನಿರ್ವಹಣೆಯಲ್ಲಿ ಹಾಗೂ ವ್ಯವಹಾರ ಅಭಿವೃದ್ಧಿಯಲ್ಲಿ ಸಹಕರಿಸುವ ಕೆಲಸವನ್ನು ಡಾಕ್‌ ಸೇವಕರು ಹೊಂದಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಶಾಖಾ ಅಂಚೆ ಪಾಲಕರಾಗಿದ್ದಲ್ಲಿ 25,000 ರು. ಗಳ ಬಾಂಡ್‌, ಉಪ ಶಾಖಾ ಅಂಚೆ ಪಾಲಕ, ಡಾಕ್‌ ಸೇವಕರಾಗಿದ್ದಲ್ಲಿ 10 ಸಾವಿರ ರು.ಗಳ ಬಾಂಡ್‌ ಸಲ್ಲಿಸಬೇಕಾಗುತ್ತದೆ. ಈ ಬಾಂಡ್‌ಗಳನ್ನು ಕನಿಷ್ಟನಿಗದಿತ ಪ್ರೀಮಿಯಂನೊಂದಿಗೆ ಸಹಕಾರಿ ಸೊಸೈಟಿಗಳಿಂದ ಪಡೆಯಬಹುದಾಗಿದೆ. 10ನೇ ತರಗತಿಯಲ್ಲಿ ಕನ್ನಡದಲ್ಲಿ ತೇರ್ಗಡೆ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಶ್ರೀಹರ್ಷ ತಿಳಿಸಿದರು.

ನೇರ ನಗದು ವರ್ಗಾವಣೆ, ವಿದ್ಯುತ್‌ ಬಿಲ್‌ ಪಾವತಿ ಸೌಲಭ್ಯ

ಅಂಚೆ ಇಲಾಖೆಯು ಡಿಜಿಟಲ್‌ ವ್ಯವಸ್ಥೆಗೂ ತನ್ನನ್ನು ತೊಡಗಿಸಿಕೊಂಡಿದ್ದು, ನೇರ ನಗದು ವರ್ಗಾವಣೆ, ವಿದ್ಯುತ್‌ ಬಿಲ್‌ ಪಾವತಿ, ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಂತಹ ಸೌಲಭ್ಯವನ್ನೂ ಸಾರ್ವಜನಿಕರಿಗೆ ಒದಗಿಸುತ್ತಿದೆ.

ಮಂಗಳೂರು ವಿಭಾಗದಲ್ಲಿನ 2 ಪ್ರಧಾನ ಅಂಚೆ ಕಚೇರಿಗಳು, 51 ಉಪ ಅಂಚೆ ಕಚೇರಿಗಳು ಹಾಗೂ 96 ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.

ಅಂಚೆ ಕಚೇರಿಯ ಉಳಿತಾಯ ಖಾತೆಗಳ ಹಾಗೂ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಖಾತೆಗಳ ಮೂಲಕ ನೇರ ನಗದು ವರ್ಗಾವಣೆ ನಡೆಯುತ್ತಿದ್ದು, ಅಂಚೆ ಕಚೇರಿಯಲ್ಲಿ ವಿದ್ಯುತ್‌ ಬಿಲ್‌ಗಳನ್ನು ಪಾವತಿಸುವ ಅವಕಾಶವೂ ಇದೆ. ಗ್ರಾಮೀಣ ಅಂಚೆ ಜೀವ ವಿಮೆ ಅತ್ಯಂತ ಕಡಿಮೆ ಪ್ರೀಮಿಯಂ, ಗರಿಷ್ಠ ಬೋನಸ್‌ ಹೊಂದಿರುವ ವಿಮೆ ಎಂದು ಅವರು ತಿಳಿಸಿದರು.

ನನ್ನ ಅಂಚೆ ಚೀಟಿ: ತಮ್ಮ ಭಾವಚಿತ್ರ ಹೊಂದಿರುವ ಅಂಚೆ ಚೀಟೀಯನ್ನು ಅಂಚೆ ಕಚೇರಿಯಲ್ಲಿ ಕ್ಷಣ ಮಾತ್ರದಲ್ಲಿ ಮಾಡಿಸುವ ಅವಕಾಶವಿದೆ. ಇದಕ್ಕೆ ಮೈ ಸ್ಟಾಂಪ್‌ (ನನ್ನ ಅಂಚೆ ಚೀಟಿ) ಎಂದು ಕರೆಯಲಾಗುತ್ತದೆ. ಕೇವಲ 300 ರು. ಮತ್ತು ವಿಳಾಸದ ದಾಖಲೆ, ಫೋಟೋ ನೀಡಿದರೆ ನನ್ನ ಅಂಚೆ ಚೀಟಿಯನ್ನು ಪಡೆಯಬಹುದು ಎಂದು ಅವರು ಹೇಳಿದರು.