Asianet Suvarna News Asianet Suvarna News

ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ ; ಬೇಸತ್ತು ತಾವೇ ರಸ್ತೆ ನಿರ್ಮಿಸಿಕೊಂಡ ಗ್ರಾಮಸ್ಥರು!

 ಜನಪ್ರತಿನಿಧಿಗಳು, ಅಧಿಕಾರಿಗಳು ಯಾರಿಗೆ ಹೇಳಿದರೂ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಊರಿನ ರಸ್ತೆಗೆ ಹಳ್ಳಿಗರೇ ಗುಡ್ಡದಿಂದ ಮೂರು ಲೋಡ್ ಕಲ್ಲು ತಂದು ರಸ್ತೆಯನ್ನ ದುರಸ್ಥಿ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. 

appealed to government bt no use  the villagers built the road themselves
Author
First Published Oct 1, 2022, 11:55 AM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಅ.1) : ಜನಪ್ರತಿನಿಧಿಗಳು, ಅಧಿಕಾರಿಗಳು ಯಾರಿಗೆ ಹೇಳಿದರೂ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಊರಿನ ರಸ್ತೆಗೆ ಹಳ್ಳಿಗರೇ ಗುಡ್ಡದಿಂದ ಮೂರು ಲೋಡ್ ಕಲ್ಲು ತಂದು ರಸ್ತೆಯನ್ನ ದುರಸ್ಥಿ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.  ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಇಲ್ಲಿನ ಜನ ಇಂದಿಗೂ ಓಡಾಡೋದಕ್ಕೆ ಸೂಕ್ತ ರಸ್ತೆ ಇಲ್ಲದೆ ತೊಂದರೆ ಪಡುತ್ತಿದ್ದರು. ರಸ್ತೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಇದುವರೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಹಾಗಾಗಿ ತಾವೇ ಗುಡ್ಡದಿಂದ ಮೂರು ಲೋಡ್ ಕಲ್ಲು ತಂದು ಊರಿನ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗೆ ತುಂಬಿದ್ದಾರೆ. 

Chikkamagaluru; ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ನಡು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

ಪ್ರತಿ ಮಳೆಗಾಲ ಮುಗಿದ ಕೂಡಲೇ ಇವರು ಈ ಕೆಲಸ ಮಾಡದಿದ್ದರೆ ಇವರಿಗೆ ಓಡಾಡೋದಕ್ಕೆ ರಸ್ತೆ ಇಲ್ಲದಂತಾಗುತ್ತೆ. ಹೊಸೂರು ಗ್ರಾಮ ಕುದುರೆಮುಖದ ತಪ್ಪಲಿನರುವ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕುಟುಂಬಗಳಿವೆ. ಸುತ್ತಮುತ್ತಲಿನ ಹಳ್ಳಿಗಳೆಲ್ಲಾ ಸೇರಿ 100ಕ್ಕೂ ಅಧಿಕ ಮನೆಗಳಿವೆ. ಆದಿವಾಸಿಗಳೇ ಹೆಚ್ಚು. ಮಳೆಗಾಲದಲ್ಲಿ ಇಲ್ಲಿ ಭಾರೀ ಮಳೆ ಸುರಿಯುತ್ತೆ. ಮಳೆ ಅಬ್ಬರಕ್ಕೆ ರಸ್ತೆಗಳೇ ಕೊಚ್ಚಿ ಹೋಗಿರುತ್ತೆ. ರಸ್ತೆ ಅಕ್ಕಪಕ್ಕದ ಗುಡ್ಡದ ಮಣ್ಣು ಜರಿದು ಮಳೆ ಮುಗಿಯುವಷ್ಟರಲ್ಲಿ ರಸ್ತೆಗಳೇ ಮಾಯವಾಗಿರುತ್ತೆ. ಮಳೆ ಮುಗಿದ ಕೂಡಲೇ ಈ ಮಾರ್ಗದಲ್ಲಿ ಓಡಾಡುವ ಜನರೇ ರಸ್ತೆ ದುರಸ್ತಿಗೆ ಮುಂದಾಗಬೇಕು.

ಮಳೆಗಾಲದಲ್ಲಿ ಜನರ ಬದುಕು ನರಕಯಾತನೆ

ಈ ಗ್ರಾಮದಿಂದ ಮುಖ್ಯ ರಸ್ತೆಗೆ ಎರಡರಿಂದ ಮೂರು ಕಿ.ಮೀ. ದೂರವಿದೆ. ಕಲ್ಕೋಡು, ಕಾರ್ಲೆ, ಅಬ್ಬಿಕೂಡಿಗೆ, ಹೊರನಾಡು ಸೇರಿದಂತೆ ಹಲವು ಕುಗ್ರಾಮಗಳಿಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತೆ. ಈ ಮಾರ್ಗದ ಗ್ರಾಮದ ಜನ  ಅನಿವಾರ್ಯವಾಗಿ ಎದ್ದು ಬಿದ್ದು ಓಡಾಡ್ತಿದ್ದಾರೆ. ಭತ್ತ, ಅಡಿಕೆ, ಕಾಫಿ, ಮೆಣಸು ಯಾವುದೇ ಬೆಳೆ ಇದ್ದರೂ ಎರಡ್ಮೂರು ಕಿ.ಮೀ. ಹೊತ್ತುಕೊಂಡೇ ಬರಬೇಕು. ಎಲ್ಲ ತಂದು ರಸ್ತೆಗೆ ಹಾಕಿಕೊಂಡು ಆಮೇಲೆ ಗಾಡಿಯಲ್ಲಿ ಕೊಂಡಯ್ಯಬೇಕು. ಹೊಲ-ಗದ್ದೆ-ತೋಟಗಳಿಗೆ ಹೋಗೋದು ಕಷ್ಟೆ. ಮಳೆಗಾಲದಲ್ಲಂತೂ ಇಲ್ಲಿನ ಜನರ ಬದುಕು ನರಕಯಾತನೆ. ರಸ್ತೆ ಸರಿ ಇಲ್ಲದ ಕಾರಣಕ್ಕೆ ಹೆತ್ತವರು ಮಕ್ಕಳನ್ನ ಶಾಲೆಗೆ ಕಳಿಸೋದಕ್ಕೂ ಮೀನಾಮೇಷ ಎಣಿಸುತ್ತಾರೆ. ಯಾರಿಗಾದರೂ ಆರೋಗ್ಯ ಹದಗೆಟ್ಟರೆ ತುಂಬಾ ಕಷ್ಟ. ಜೀಪು ಬರಬೇಕು, ಇಲ್ಲದಿದ್ರೆ ಜೋಳಿಗೆ ಕಟ್ಟಿ ಹೊತ್ತುಕೊಂಡು ಹೋಗಬೇಕು. ಅದರಲ್ಲೂ ಜೀಪಿನವರು ಡಬಲ್ ಹಣ ಕೇಳುವುದರಿಂದ ಈ ಗ್ರಾಮದ ಜನ ಕಾಯಿಲೆ ಬಂದವರನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಹೋಗುವುದೇ ಹೆಚ್ಚು. ಇದು ಎರಡುಮೂರು ದಶಕಗಳಿಂದ ನಡೆದುಕೊಂಡು ಬಂದಿದೆ.

ಸ್ಮಶಾನ ಜಾಗ ಇಲ್ಲದ್ದಕ್ಕೆ ಗ್ರಾಮ ಪಂಚಾಯತಿ ಎದುರೇ ಶವ ಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!

ಕುಗ್ರಾಮವೊಂದು ಇಷ್ಟೆಲ್ಲ ತೊಂದರೆಗಳನ್ನು ಅನುಭವಿಸುತ್ತಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಕುರುಡಾಗಿದ್ದಾರೆ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಯಾವುದೇ ಕೆಲಸಕ್ಕೆ ಮುಂದಾಗಿಲ್ಲ. ಗ್ರಾಮದ ಜನರ ನೋವಿಗೆ ಯಾರೊಬ್ಬರು ಸ್ಪಂದಿಸದಿರುವುದು ನಾಚಿಕೆಗೇಡು.

Follow Us:
Download App:
  • android
  • ios