ಮೋದಿ ಕನಸು ಈಡೇರಿಸಲು ನಾನು ಬದ್ಧ: ರೈತರಿಗೆ ಸಾಲದಿಂದ ಮುಕ್ತಿ ಕೊಡಿಸಲು ಯತ್ನ
- ಕೇಂದ್ರ ಸಚಿವೆಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
- ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿ ಅಧಿಕಾರ ಸ್ವೀಕಾರ
- ರೈತರನ್ನು ಸಾಲದಿಂದ ಮುಕ್ತಿಗೊಳಿಸುವುದು ಮತ್ತು ಅವರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ
ನವದೆಹಲಿ (ಜು.09): ಕೇಂದ್ರ ಸಚಿವೆಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದ ಶೋಭಾ ಕರಂದ್ಲಾಜೆ ಅವರು ಗುರುವಾರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದರು. ರೈತರನ್ನು ಸಾಲದಿಂದ ಮುಕ್ತಿಗೊಳಿಸುವುದು ಮತ್ತು ಅವರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆಯನ್ನು ಈ ಸಂದರ್ಭದಲ್ಲಿ ಶೋಭಾ ನೀಡಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ರೈತರ ಆದಾಯ ದ್ವಿಗುಣಗೊಳಿಸುವುದು ಮೋದಿ ಅವರ ಕನಸು. ಇದಕ್ಕೆ ನಾವು ಕಟಿಬದ್ಧವಾಗಿದ್ದೇವೆ. ರೈತರನ್ನು ಸಾಲದಿಂದ ಮುಕ್ತಿ ಮಾಡುವ ಮತ್ತು ಅವರ ಸಂಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಇದರ ಜತೆಗೆ, ಮೂರು ಹೊಸ ಕಾಯ್ದೆಗಳ ಕುರಿತು ರೈತರಿಗೆ ಅರಿವೂ ಮೂಡಿಸಬೇಕಿದೆ. ಅವರ ಭಾವನೆ ಅರಿತು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಮಗಳು ಕೇಂದ್ರ ಮಂತ್ರಿ : ಕನಸು ಈಡೇರಿದ ಖುಷಿಯಲ್ಲಿ ಶೋಭಾ ತಾಯಿ .
ಸಿಹಿ ತಿನ್ನಿಸಿದ ತಾಯಿ: ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ತಾಯಿ ಪೂವಕ್ಕ ಅವರು ಪುತ್ರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು. ಈ ವೇಳೆ ಶೋಭಾ ಅವರು ತಾಯಿಯ ಕಾಲುಮುಟ್ಟಿಆಶೀರ್ವಾದ ಪಡೆದರು.