ವಿಘ್ನೇಶ್ ಎಂ.ಭೂತನಕಾಡು

ಮಡಿಕೇರಿ [ಆ.21]: ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕೊಡಗು ಜಿಲ್ಲೆಯಲ್ಲಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿಲ್ಲ. ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್‌ ಅವರು ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನ ದೊರಕದಿದ್ದಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ ದೊರಕದ ಹಿನ್ನೆಲೆಯಲ್ಲಿ ನೂತನ ಸಚಿವ ಸಂಪುಟದ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಶಾಸಕ ರಂಜನ್‌ ಗೈರಾಗಿದ್ದಾರೆ. ಈ ಬಗ್ಗೆ  ಮಾತನಾಡಿರುವ ಶಾಸಕ ರಂಜನ್‌, ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಇದ್ದೇ ಇದೆ. ಸತತ ಐದು ಬಾರಿ ಶಾಸಕನಾಗಿ ಗೆಲುವು ಸಾಧಿಸಿದ್ದೇನೆ. ಆದರೂ ನನ್ನನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಸಚಿವ ಸ್ಥಾನ ವಂಚಿತರ ಕಣ್ಣು ಎತ್ತ? ಮತ್ತೊಂದು ಆಫರ್

ನಾನು ಮಡಿಕೇರಿಯಿಂದ ಮೂರು ಬಾರಿ ಹಾಗೂ ಸೋಮವಾರಪೇಟೆ ಕ್ಷೇತ್ರದಿಂದ ಗೆದ್ದಿದ್ದೇನೆ. ಅದರೂ ನನಗೆ ಸ್ಥಾನ ನೀಡದಿರುವುದು ವಿಪರ್ಯಾಸ ಎಂದಿರುವ ರಂಜನ್‌, ಸಂಘ ಪರಿವಾರದೊಂದಿಗೆ ಹಾಗೂ ಹೈಕಮಾಂಡ್‌ನೊಂದಿಗೆ ಮಾತುಕತೆ ನಡೆಸಿ ಯಾಕೆ ಹೀಗಾಯಿತು ಎಂದು ಪ್ರಶ್ನಿಸಲಾಗುವುದು. ಕೊಡವ ಜನಾಂಗಕ್ಕೆ ನಾನೊಬ್ಬನೇ ಶಾಸಕ ಇದ್ದೆ. ಆದರೂ ಸಚಿವ ಸ್ಥಾನ ದೊರಕದಿರುವುದು ಬೇಸರ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪುನರ್ವಿಂಗಡಿತ ಕ್ಷೇತ್ರದಲ್ಲಿ ಇಬ್ಬರೂ ಶಾಸಕರು ಹ್ಯಾಟ್ರಿಕ್‌!

2008ರಲ್ಲಿ ಪುನರ್ವಿಂಗಡನೆಗೊಂಡ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೊಡಗಿನ ಇಬ್ಬರು ಶಾಸಕರು ಹ್ಯಾಟ್ರಿಕ್‌ ಸಾಧನೆ ಮಾಡಿ ದಾಖಲೆ ಮಾಡಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆ.ಜಿ.ಬೋಪಯ್ಯ 2008, 2013, 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 2008ರಲ್ಲಿ ಪುನರ್ವಿಂಗಡನೆಗೊಂಡ ಎರಡೂ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರು ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.

ನಾನು ಸಚಿವ ಸ್ಥಾನ ಕೇಳಿಲ್ಲ

ಸಚಿವ ಸ್ಥಾನವನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್‌ ಚರ್ಚೆ ಮಾಡಿ ಮಾಡಿದ್ದಾರೆ. 105 ಮಂದಿಯೂ ಅರ್ಹತೆ ಇರುವವರು. ನಾನು ಸಚಿವ ಸ್ಥಾನ ಕೇಳಿಲ್ಲ. ಸಚಿವ ಸ್ಥಾನ ದೊರಕದಿದ್ದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಮೇಲೆ ದೊಡ್ಡ ಸವಾಲಿದೆ. ಆದ್ದರಿಂದ ಕಾರ್ಯಕರ್ತರು ಅಸಮಾಧಾನಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ.

 ಕೆ.ಜಿ. ಬೋಪಯ್ಯ, ವಿರಾಜಪೇಟೆ ಕ್ಷೇತ್ರದ ಶಾಸಕ