ಹುಬ್ಬಳ್ಳಿ(ಜೂ.15): ರಸ್ತೆಯಲ್ಲಿ ಅನಾಥೆಯಂತೆ ಓಡಾಡುತ್ತಿದ್ದ ವೃದ್ಧೆಯೊಬ್ಬರನ್ನು ಕರೆತಂದು ಬಿಸಿಎಂ ಹಾಸ್ಟೆಲ್‌ನಲ್ಲಿ ರಕ್ಷಣೆ ಒದಗಿಸಿದ್ದ ಹಾವೇರಿಯ ಪೊಲೀಸರಿಗೆ ಇದೀಗ ಆತಂಕ ಶುರುವಾಗಿದೆ. ಈ ವೃದ್ಧೆಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐ, ಎಎಸ್‌ಐ ಅನ್ನು ಹೋಂ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಮೇ 28ರಂದು ವೀರಾಪುರ ಓಣಿಯಲ್ಲಿ ಓಡಾ​ಡು​ತ್ತಿದ್ದ ದಾವ​ಣ​ಗೆರೆ ಮೂಲದ ವೃದ್ಧೆಯನ್ನು ಪೊಲೀ​ಸರು ರಕ್ಷಿಸಿ ಆಟೋರಿಕ್ಷಾ ಮೂಲಕ ಸ್ಥಳೀಯ ಬಿಸಿಎಂ ಹಾಸ್ಟೆಲ್‌ನಲ್ಲಿ ಆಶ್ರಯ ಕಲ್ಪಿಸಿದ್ದರು.

ಈಕೆಗೆ ಮೊದಲ ಬಾರಿ ಪರೀಕ್ಷೆ ಮಾಡಿದಾಗ ನೆಗೆಟಿವ್‌ ವರದಿ ಬಂದಿತ್ತು. ಆದರೆ, ಜೂ.10ರಂದು 2ನೇ ಬಾರಿ ಪರೀಕ್ಷೆ ಮಾಡಿಸಿದಾಗ ಕೋವಿಡ್‌-19 ದೃಢಪಟ್ಟಿದೆ.

ಧಾರವಾಡ: ಒಂದೇ ದಿನ 20 ಕೇಸ್‌, ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಕವಾಗಿ ಹಬ್ಬುತ್ತಿದೆ ಕೊರೋನಾ

ವೃದ್ಧೆಗೆ ಸೋಂಕು ಖಚಿತವಾಗುತ್ತಿದ್ದಂತೆ ಬೆಂಡಿಗೇರಿ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಅಲ್ಲದೆ ಸ್ವ್ಯಾಬ್‌ ಟೆಸ್ಟ್‌, ಮೊಬೈಲ್‌ ವೆಹಿಕಲ್‌ ತರಿಸಿ ಶನಿವಾರ 33 ಹಾಗೂ ಭಾನುವಾರ 2 ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಿದ್ದಾರೆ. ವರದಿ ಬರುವವರೆಗೆ ಮಹಿಳಾ ಪಿಎಸ್‌ಐ ಮತ್ತು ಎಎಸ್‌ಐ ಅವರನ್ನು ಹೋಂ ಕ್ವಾರಂಟೈನ್‌ ಆಗುವಂತೆ ತಿಳಿಸಿದ್ದಾರೆ.