ಮಂಗಳೂರು(ಅ.31):  ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳ ಪೈಕಿ 5 ಗಡಿ ರಸ್ತೆಗಳಲ್ಲಿ ಪುನಃ ಚೆಕ್‌ಪೋಸ್ಟ್‌ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ. ಇತರ ರಾಜ್ಯಗಳಿಂದ ಕೇರಳ ಪ್ರವೇಶಿಸುವ ಮಂದಿಯಲ್ಲಿ ಕೋವಿಡ್‌ ನೆಗೆಟಿವ್‌ ಆಗಿರುವ ಸರ್ಟಿಫಿಕೆಟ್‌ ಇಲ್ಲದಿದ್ದರೆ ಆಂಟಿಜೆನ್‌ ಟೆಸ್ಟ್‌ ನಡೆಸಲು ಸೌಲಭ್ಯ ಸಜ್ಜುಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅಧ್ಯಕ್ಷತೆಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ನಡೆದ ಕಾಸರಗೋಡು ಜಿಲ್ಲಾಮಟ್ಟದ ಕೊರೋನಾ ಕೋರ್‌ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ತಲಪಾಡಿ ಚೆಕ್‌ಪೋಸ್ಟ್‌(ಎನ್‌.ಎಚ್‌.66), ಅಡ್ಕಸ್ಥಳ, ಅಡ್ಯನಡ್ಕ ರಸ್ತೆ(ಎಸ್‌.ಎಚ್‌.55), ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ(ಎಸ್‌.ಎಚ್‌.55), ಪಾಣತ್ತೂರು-ಚೆಂಬೇರಿ-ಮಡಿಕೇರಿ (ಎಸ್‌.ಎಚ್‌.56), ಮಾಣಿಮೂಲೆ-ಸುಳ್ಯ ರಸ್ತೆಗಳಲ್ಲಿ ಚೆಕ್‌ಪೋಸ್ವ್‌ ಸಜ್ಜುಗೊಳಿಸಿ, ಆಂಟಿಜೆನ್‌ ಟೆಸ್ಟ್‌ ಸೌಲಭ್ಯ ಜಾರಿಗೊಳಿಸಲಾಗುವುದು.

ರಾಜ್ಯದ ಶ್ರೀಮಂತ ಕುಕ್ಕೆ ದೇಗುಲದಲ್ಲೊಂದು ಮಹತ್ವದ ಬದಲಾವಣೆ

ಈ ಚೆಕ್‌ಪೋಸ್ವ್‌ಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಆಂಟಿಜೆನ್‌ ಟೆಸ್ಟ್‌ ಸೌಲಭ್ಯ ಇರಲಿದೆ. ಈ ಚೆಕ್‌ಪೋಸ್ಟ್‌ ಮೂಲಕ ಇತರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕೋವಿಡ್‌ ನೆಗೆಟಿವ್‌ ಸರ್ಟಿಫಿಕೆಟ್‌ ಹಾಜರುಪಡಿಸಬೇಕು. 12 ಪಾಯಿಂಟ್‌ಗಳಲ್ಲಿ ಕೋವಿಡ್‌ ನೆಗೆಟಿವ್‌ ಸರ್ಟಿಫಿಕೆಟ್‌ ಹಾಜರುಪಡಿಸಬೇಕು.