Asianet Suvarna News Asianet Suvarna News

ಜೆಡಿಎಸ್‌ - ಬಿಜೆಪಿ ನಡುವೆ ಮತ್ತೊಂದು ಕ್ರೆಡಿಟ್‌ ಕದನ!

ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ ತಾಲೂಕಿಗೆ 3 ಸಾವಿರ ಮನೆ ಮಂಜೂರಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮತ್ತೊಂದು ಕ್ರೆಡಿಟ್‌ ವಾರ್‌ ಆರಂಭವಾಗಿದೆ.

Another credit war   between JDS  BJP  snr
Author
First Published Nov 15, 2022, 11:48 AM IST

 -ವಿಜಯ್‌ ಕೇಸರಿ

 ಚನ್ನಪಟ್ಟಣ (ನ.15): ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ ತಾಲೂಕಿಗೆ 3 ಸಾವಿರ ಮನೆ ಮಂಜೂರಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮತ್ತೊಂದು ಕ್ರೆಡಿಟ್‌ ವಾರ್‌ ಆರಂಭವಾಗಿದೆ.

ತಾಲೂಕಿನ ವಸತಿ ರಹಿತರಿಗೆ ನೆರವಾಗುವ ಉದ್ದೇಶದಿಂದ ರಾಜೀವ್‌ ಗಾಂಧಿ ವಸತಿ ನಿಗಮದಿಂದ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ 3 ಸಾವಿರ ಮನೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಮನವಿ ಮೇರೆಗೆ ಮಂಜೂರಾದ ಮನೆಗಳು ಎಂದು ಬಿಜೆಪಿಗರು (BJP)  ಹೇಳುತ್ತಿದ್ದಾರೆ. ಆದರೆ, ಇನ್ನೊಂದು ಕಡೆ ತಾಲೂಕಿನ ವಸತಿ ರಹಿತರಿಗೆ 3200 ಮನೆ ಮಂಜೂರು ಮಾಡುವಂತೆ ಕ್ಷೇತ್ರದ ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy)  ವಸತಿ ಸಚಿವರಿಗೆ ಮನವಿ ಸಲ್ಲಿಸಿದ್ದು, ಅವರ ಮನವಿ ಮೇರೆಗೆ ಮನೆ ಮಂಜೂರು ಮಾಡಲಾಗಿದೆ ಎಂದು ಜೆಡಿಎಸ್‌ ಹೇಳುತ್ತಿದ್ದು, ಮತ್ತೊಂದು ಸುತ್ತಿನ ಕ್ರೆಡಿಟ್‌ವಾರ್‌ಗೆ ಮುನ್ನುಡಿ ಬರೆದಂತಾಗಿದೆ.

ಸಿಪಿವೈ ಮನವಿ ಮೇರೆಗೆ ಮಂಜೂರು:

ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದ ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಸತತ ಮಳೆಯಿಂದ ನೂರಾರು ಮಂದಿ ನಿರಾಶ್ರಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಸೆ.18ರಂದು ವಸತಿ ಸಚಿವ ವಿ.ಸೋಮಣ್ಣಗೆ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪತ್ರ ಬರೆದಿದ್ದರು. ತಾಲೂಕಿನಲ್ಲಿ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿಸಿದ್ದು, ಸಾಕಷ್ಟುಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಮಳೆಯಿಂದ ಸಾಕಷ್ಟುಹಾನಿಯಾಗಿದ್ದು, ಸಾವಿರಾರು ಜನರ ಮನೆ ಕಳೆದುಕೊಂಡಿದ್ದಾರೆ. ಆದ್ದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಾಲೂಕಿಗೆ ಬಸವ ಕಲ್ಯಾಣ ಯೋಜನೆಯಲ್ಲಿ 3 ಸಾವಿರ ಮನೆಗಳನ್ನು ತ್ವರಿತವಾಗಿ ಮಂಜೂರು ಮಾಡಬೇಕು ಎಂದು ವಸತಿ ಸಚಿವರಿಗೆ ಮನವಿ ಮಾಡಿದ್ದರು. ಯೋಗೇಶ್ವರ್‌ ಮನವಿ ಮೇರೆಗೆ ಚನ್ನಪಟ್ಟಣದ ಗ್ರಾಮೀಣ ಪ್ರದೇಶಕ್ಕೆ ಮೂರು ಸಾವಿರ ಮನೆ ಮಂಜೂರು ಮಾಡುವಂತೆ ವಸತಿ ಸಚಿವರು ಆದೇಶ ಹೊರಡಿಸಿದ್ದಾರೆ. ಆದೇಶ ಯೋಗೇಶ್ವರ್‌ ಮನವಿ ಪತ್ರದ ಉಲ್ಲೇಖಿವಿರುವುದೇ ಇದು ಸಿಪಿವೈ ಮನವಿ ಮೇರೆಗೆ ಮಂಜೂರಾದ ಯೋಜನೆ ಎಂದು ಸಾರಿ ಹೇಳುತ್ತದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ.

ಜೆಡಿಎಸ್‌ ವಾದವೇನು?:

ತಾಲೂಕಿನ ವಸತಿ ರಹಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 2019ರ ನವಂಬರ್‌ನಲ್ಲೇ ವಸತಿ ಸಚಿವರಿಗೆ ಪತ್ರ ಬರೆದು 3200 ಮನೆ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 100 ಮನೆಯಂತೆ 3200 ಮನೆ ಮಂಜೂರು ಮಾಡುವಂತೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ವಸತಿ ಸಚಿವರು ತಾಲೂಕಿನ ಮನೆಗಳನ್ನು ಮಂಜೂರು ಮಾಡುವ ಕುರಿತು ಕ್ರಮ ಕೈಗೊಳ್ಳುವಂತೆ ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಆದರೆ, ಕೊರೋನಾ ಕಾರಣದಿಂದ ಅದು ವಿಳಂಭವಾಗಿತ್ತು. ಇದೀಗ ಅದು ಮಂಜೂರಾಗಿದ್ದು, ಇದಕ್ಕೆ ಕುಮಾರಸ್ವಾಮಿಯವರ ಶ್ರಮವೇ ಕಾರಣ ಎಂದು ಹೇಳುತ್ತಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹರಿಯಬಿಟ್ಟಿದ್ದಾರೆ. ಇದು ಮತ್ತೊಂದು ಸುತ್ತಿನ ಕ್ರೆಡಿಟ್‌ವಾರ್‌ಗೆ ಕಾರಣವಾಗಿದೆ.

ನಿಲ್ಲದ ಜಟಾಪಟಿ

ತಾಲೂಕಿನ ಮಂಜೂರಾದ ಅನುದಾನಗಳ ವಿಚಾರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಬಿಜೆಪಿ ನಡುವೆ ಜಟಾಪಟಿ ನಡೆದಿರುವುದು ಹೊಸದೇನು ಅಲ್ಲ. ಈ ಹಿಂದೆಯೂ ಅನುದಾನಗಳಿಗೆ ಸಂಬಂಧಿಸಿದಂತೆ ಲಾಭ ಪಡೆಯುವ ನಿಟ್ಟಿನಲ್ಲಿ ಸಾಕಷ್ಟುಭಾರಿ ಜಟಾಪಟಿಗಳು ನಡೆದಿವೆ. ಈ ಹಿಂದೆ ಮಹೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಸುಮಾರು 183 ದೇವಾಲಯಗಳ ಅಭಿವೃದ್ಧಿ ಸರ್ಕಾರದಿಂದ 10 ಕೋಟಿ ರು. ಮಂಜೂರಾಗಿತ್ತು. ಆದರೆ, ಆ ಅನುದಾನವನ್ನು ಮಂಜೂರು ಮಾಡಿದ ಐದೇ ದಿನಕ್ಕೆ ಸರ್ಕಾರ ವಾಪಸ್‌ ಪಡೆದಿತ್ತು. ಅದೇ ರೀತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಂಬಂಧ ಬಿಡುಗಡೆಯಾಗಿದ್ದ ಅನುದಾನದ ವಿಚಾರದಲ್ಲೂ ಇಬ್ಬರ ನಡುವೆ ಜಟಾಜಟಿ ನಡೆದಿತ್ತು. ಇದಕ್ಕೆಲ್ಲ ಕಳಶವಿಟ್ಟಂತೆ ತಾಲೂಕಿನ ವಿವಿಧ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ 50 ಕೋಟಿ ರು.ಅನುದಾನ ಬಿಡುಗಡೆಯಾಗಿತ್ತು. ಈ ವಿಚಾರದ ಶಿಷ್ಟಾಚಾರ ಕದನ ತಾರಕಕ್ಕೇರಿ ಜೆಡಿಎಸ್‌ ಮತ್ತು ಬಿಜೆಪಿ ಮಧ್ಯೆ ಬೀದಿ ಕಾಳಗ ಏರ್ಪಟ್ಟು ಇಡೀ ರಾಜ್ಯವೇ ಇದನ್ನು ನೋಡಿದ್ದು, ಇದೀಗ ಮತ್ತೊಂದು ಜಟಾಪಟಿಗೆ ವೇದಿಕೆ ಸೃಷ್ಟಿಯಾಗಿದೆ.

ಬಾಕ್ಸ್‌...........

ಆತಂಕದಲ್ಲಿ ವಸತಿ ರಹಿತರು

ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಇಬ್ಬರು ಪ್ರಬಲ ನಾಯಕರ ನಡುವಿನ ಜಟಾಪಟಿಯಲ್ಲಿ ತಾಲೂಕಿಗೆ ಮಂಜೂರಾಗಿರುವ ಮನೆಗಳು ಮತ್ತೆಲ್ಲಿ ವಾಪಸ್‌ ಆಗುವುದೋ ಎಂಬ ಆತಂಕ ವಸತಿ ರಹಿತರನ್ನು ಕಾಡುತ್ತಿದೆ. ಇಬ್ಬರ ಜಟಾಪಟಿಯಿಂದಾಗಿ ಮಂಜೂರಾಗಿರುವ ಮನೆಗಳಿಗೆ ತಡೆ ಏನಾದರು ಉಂಟಾದರೆ ಮತ್ತೆ ಮಂಜೂರಾಗುವವರೆಗೆ ನಾವು ಕಾಯಬೇಕಲ್ಲ ಎಂಬ ಚಿಂತೆ ವಸತಿ ರಹಿತರನ್ನು ಕಾಡುತ್ತಿರುವುದು ಮಾತ್ರ ಸುಳ್ಳಲ್ಲ.

ಕೋಟ್‌.........

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲೂಕಿಗೆ 5 ಸಾವಿರ ಮನೆ ಬೇಕಿದ್ದರೂ ಮಂಜೂರು ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ಇದೀಗ ವಿಧಾನಪರಿಷತ್‌ ಸದಸ್ಯ ಯೋಗೇಶ್ವರ್‌ ಶ್ರಮದಿಂದ ತಾಲೂಕಿಗೆ 3 ಸಾವಿರ ಮನೆಗಳು ಮಂಜೂರಾಗಿದೆ. ಅದರ ಲಾಭ ಪಡೆಯಲು ಜೆಡಿಎಸ್‌ನವರು ಈ ರೀತಿ ಹೇಳುತ್ತಿರುವುದು ಸರಿಯಲ್ಲ.

-ಕೆ.ಟಿ.ಜಯರಾಮು, ಬಿಜೆಪಿ ತಾಲೂಕು ಅಧ್ಯಕ್ಷ

ಕ್ಷೇತ್ರದ ಶಾಸಕರು ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು 2019ರಲ್ಲೇ ತಾಲೂಕಿನ ವಸತಿ ರಹಿತರಿಗೆ ಮನೆ ಮಂಜೂರು ಮಾಡುವಂತೆ ವಸತಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಇದೀಗ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಇದು ನಮ್ಮಿಂದ ಆದದ್ದು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ.

-ಎಚ್‌.ಸಿ.ಜಯಮುತ್ತು, ಜೆಡಿಎಸ್‌ ತಾಲೂಕು ಅಧ್ಯಕ್ಷ

Follow Us:
Download App:
  • android
  • ios