ಅಪ್ಪನಿಂದಲೇ 11 ವರ್ಷದ ಪುತ್ರಿಗೆ ಕೊರೋನಾ ಸೋಂಕು
ವಿಜಯಪುರದ ಚಪ್ಪರಬಂದ್ ಬಡಾವಣೆಯ ಸುತ್ತ ಗಿರಕಿ ಹೊಡೆಯುತ್ತಿರುವ ಕೊರೋನಾ ಮಹಾಮಾರಿ|ಸೋಂಕಿತರ ಸಂಖ್ಯೆ 49ಕ್ಕೇರಿಕೆ| ಈ ಬಾಲಕಿ ವಿಜಯಪುರದ ಚಪ್ಪರಬಂದ ಬಡಾವಣೆಯ ನಿವಾಸಿಯಾಗಿದ್ದಾಳೆ| ಧೂಳಖೇಡ ಬಳಿ ಒನ್ ಎಂಟ್ರಿ, ಒನ್ ಎಕ್ಸಿಟ್ ಚೆಕ್ ಪೋಸ್ಟ್‌ಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಭೇಟಿ ನೀಡಿ ಪರಿಶೀಲನೆ|
ವಿಜಯಪುರ(ಮೇ.10): ಕಳೆದ ಎರಡು ದಿನಗಳ ಬಳಿಕ ಮತ್ತೆ ಬಾಲಕಿಯೊಬ್ಬಳಿಗೆ ಕೊರೋನಾ ಸೋಂಕು ದೃಢ ಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 49ಕ್ಕೇರಿದೆ. ಗುಮ್ಮಟನಗರಿ ಜನ ಕಳೆದ ಎರಡು ದಿನಗಳಿಂದ ಯಾವುದೇ ಕೊರೋನಾ ಸೋಂಕು ವರದಿಯಾಗಿರಲಿಲ್ಲ. ಇನ್ನೇನು ಕೊರೋನಾ ನಿಧಾನವಾಗಿ ವಿಜಯಪುರದಲ್ಲಿ ಹತೋಟಿಗೆ ಬರುತ್ತಿದೆ ಎಂದು ಜನರು ಸಮಾಧಾನದ ನಿಟ್ಟುಸಿರು ಬಿಡುವ ಮುನ್ನವೇ ಪೇಸೆಂಟ್ ನಂ. 769ರ 11 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಪೇಸೆಂಟ್ ನ. 510 ಬಾಲಕಿಯ ತಂದೆಯ ಸಂಪರ್ಕದಿಂದ ಈ ಪುತ್ರಿಗೆ ಕೊರೋನಾ ಸೋಂಕು ಹರಡಿದೆ.
ಬಾಲಕಿಯ ತಂದೆಗೆ ಕೊರೋನಾ ಪಾಸಿಟಿವ್ ಬಂದ ಕೂಡಲೇ 11 ವರ್ಷದ ಪುತ್ರಿಗೂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಆದರೆ, ಈ ಬಾಲಕಿ ಗಂಟಲು ದ್ರವ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಈ ಬಾಲಕಿ ವಿಜಯಪುರದ ಚಪ್ಪರಬಂದ ಬಡಾವಣೆಯ ನಿವಾಸಿಯಾಗಿದ್ದು, ಕೊರೋನಾ ವೈರಸ್ ಚಪ್ಪರಬಂದ ಬಡಾವಣೆಯ ಸುತ್ತ ಮುತ್ತಲೂ ಗಿರಕಿ ಹೊಡೆಯುತ್ತಿದೆ. ಜಿಲ್ಲೆಯ ವಿಜಯಪುರದ ಚಪ್ಪರಬಂದ ಬಡಾವಣೆ, ಬಾರಾಕಮಾನ ಹಾಗೂ ತಿಕೋಟ ತಾಲೂಕಿನ ರತ್ನಾಪುರ ಹೊರತು ಪಡಿಸಿ ಜಿಲ್ಲೆಯಲ್ಲಿ ಎಲ್ಲಿಯೂ ಕೊರೋನಾ ಸೋಂಕು ಇಲ್ಲ. ವಿಜಯಪುರದ ಬಾರಾಕಮಾನ ಪ್ರದೇಶದಲ್ಲಾಗಲಿ, ತಿಕೋಟ ತಾಲೂಕಿನ ರತ್ನಾಪುರ ಗ್ರಾಮದಲ್ಲಾಗಲಿ ಹೊಸದಾಗಿ ಕೊರೋನಾ ಸೋಂಕು ಹರಡಿಲ್ಲ. ಆದರೆ ಸುಮಾರು 2 ತಿಂಗಳಿಂದಲೂ ಚಪ್ಪರಬಂದ ಬಡಾವಣೆಯಿಂದ ಕೊರೋನಾ ಮಹಾಮಾರಿ ಜಾಗ ಖಾಲಿ ಮಾಡುತ್ತಿಲ್ಲ. ಇದರಿಂದಾಗಿ ನಗರದ ಜನತೆಯಲ್ಲಿ ಆತಂಕ ಮುಂದುವರೆದಿದೆ.
ವಿಜಯಪುರದಲ್ಲಿ ಮಹಾಮಾರಿ ಕೊರೋನಾ ವೈರಸ್ ಬಗ್ಗುಬಡಿದ ಹಸುಗೂಸು..!
ಇನ್ನೇನು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕೇವಲ 21 ಸಕ್ರಿಯ ರೋಗಿಗಳಿದ್ದಾರೆ. ಬರುವ ವಾರದಲ್ಲಿ ಅವರೆಲ್ಲರೂ ಗುಣಮುಖರಾದರೆ ಕೊರೋನಾ ಮಹಾಮಾರಿಯಿಂದ ಪಾರಾಗಬಹುದು ಎಂಬ ಜನರ ನಂಬಿಕೆಗೆ ತಣ್ಣೀರು ಎರಚಿದೆ.
ಚಪ್ಪರಬಂದ ಬಡಾವಣೆಗೆ ಕೊರೋನಾದಿಂದ ಮುಕ್ತಿ ಇಲ್ಲವೆ? ಎನ್ನುವ ಪ್ರಶ್ನೆಯನ್ನು ಗುಮ್ಮಟನಗರಿ ಜನರು ಕೇಳುವಂತಾಗಿದೆ. ನಾಳೆ, ನಾಡಿದ್ದು ಎಷ್ಟುಪ್ರಕರಣಗಳು ವರದಿಯಾಗುತ್ತವೆಯೋ, ಬೇಗನೆ ಕೊರೋನಾದಿಂದ ಬಿಡುಗಡೆಯೇ ಇಲ್ಲವೇ? ಎಂದು ಜನರು ಚಿಂತೆಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 49 ಮಂದಿ ಸೋಂಕಿತರಿದ್ದಾರೆ. ಈ ಪೈಕಿ 25 ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನೂ 21 ಸಕ್ರಿಯ ಪ್ರಕರಣಗಳು ಇವೆ.
ಧೂಳಖೇಡ ಚೆಕ್‌ಪೋಸ್ಟ್‌ಗೆ ಡಿಸಿ, ಎಸ್ಪಿ, ಸಿಎಸ್ ಭೇಟಿ, ಪರಿಶೀಲನೆ
ಧೂಳಖೇಡ ಬಳಿ ಒನ್ ಎಂಟ್ರಿ, ಒನ್ ಎಕ್ಸಿಟ್ ಚೆಕ್ ಪೋಸ್ಟ್‌ಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ವಿವಿಧ ರಾಜ್ಯಗಳಿಂದ ಈ ಚೆಕ್ ಪೋಸ್ಟ್‌ನಿಂದಲೇ ಜನರು ಅನುಮತಿ ಪತ್ರ ಪಡೆದುಕೊಂಡು ಕರ್ನಾಟಕ ಪ್ರವೇಶಿಸುತ್ತಿದ್ದಾರೆ. ಆದ್ದರಿಂದ ಈ ಚೆಕ್‌ಪೋಸ್ಟ್‌ನಲ್ಲಿ ಜಿಲ್ಲೆಗೆ ಆಗಮಿಸುವ ಎಲ್ಲರಿಗೂ ವಿಚಾರಣೆ, ತಪಾಸಣೆ ನಡೆಸಿ ಅವರ ಸ್ವಗ್ರಾಮ, ಸ್ವಜಿಲ್ಲೆ, ಸ್ವರಾಜ್ಯಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಈ ಚೆಕ್‌ಪೋಸ್ಟ್‌ಗೆ ಏಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆಯೋ ಇಲ್ಲವೋ ಎಂಬುವುದನ್ನು ಪರಿಶೀಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಇದ್ದರು.