*ಸೇಂಟ್‌ ಥಾಮಸ್‌ ಟೌನ್‌ನಲ್ಲಿ ಘಟನೆ: ಕಾರು ಹತ್ತಿಸಿ ನಾಯಿ ಸಾಯಿಸಲು ಯತ್ನ*ವಿಕೃತ ಮನಸ್ಥಿತಿಯ ಕಾರು ಚಾಲಕನ ಪತ್ತೆಗೆ ಪೊಲೀಸರ ಶೋಧ

ಬೆಂಗಳೂರು (ಫೆ. 07): ನಗರದ ಉದ್ಯಮಿ ಮೊಮ್ಮಗನೊಬ್ಬ ಜಯನಗರದಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಸಾಯಿಸಿದ್ದ ಪ್ರಕರಣ ಹಚ್ಚಹಸಿರಾಗಿರುವಾಗಲೇ ಸೇಂಟ್‌ ಥಾಮಸ್‌ ಟೌನ್‌ನ ವೀಲ​ರ್ಸ್ ರಸ್ತೆಯಲ್ಲಿ ದುರುಳನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.ಘಟನೆಯಲ್ಲಿ ಗಾಯಗೊಂಡಿದ್ದ ಬೀದಿ ನಾಯಿಗೆ ಸ್ಥಳೀಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ.

ಘಟನೆ ಸಂಬಂಧ ಸ್ಥಳೀಯ ನಿವಾಸಿ ಅರುಂಧತಿ ಸೋಮಯ್ಯ ಅವರು ನೀಡಿದ ದೂರಿನ ಮೇರೆಗೆ ಪುಲಕೇಶಿ ನಗರ ಠಾಣೆಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಘಟನಾ ಸ್ಥಳದ ಸಮೀಪದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಿರುವ ಪೊಲೀಸರು, ಕಾರು ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:Dog Run Over By Audi: ಅಮಾಯಕ ನಾಯಿ ಮೇಲೆ ಆದಿ ದರ್ಪಕ್ಕೆ ನಟಿ ರಮ್ಯಾ ಖಂಡನೆ!

ಘಟನೆ ವಿವರ: ಫೆ.2ರಂದು ರಾತ್ರಿ 9.40ರ ಸುಮಾರಿಗೆ ಸೇಂಟ್‌ ಥಾಮಸ್‌ ಟೌನ್‌ನ ವೀಲ​ರ್‍ಸ್ ರಸ್ತೆಯ ವಿಲೇಜ್‌ ಸೂಪರ್‌ ಮಾರ್ಕೆಟ್‌ ಎದುರು ಈ ಘಟನೆ ನಡೆದಿದೆ. ರಸ್ತೆ ಬದಿ ನಾಯಿ ನಡೆದು ಬರುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಏಕಾಏಕಿ ನಾಯಿಗೆ ಗುದ್ದಿದೆ. ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ.

ಡಿಕ್ಕಿಯ ರಭಸಕ್ಕೆ ಸುಮಾರು ಏಳೆಂಟು ಮೀಟರ್‌ ರಸ್ತೆಗೆ ಉಜ್ಜಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ನಾಯಿಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿ ಮೇರೆಗೆ ಪೊಲೀಸರು ಕಾರು ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:Animal Cruelty : ಬೀದಿ ನಾಯಿ ಮೇಲೆ ಆಡಿ ಕಾರು ಹತ್ತಿಸಿ ವಿಕೃತಿ, ಆದಿಕೇಶವಲು ಮೊಮ್ಮಗನ ಸಂಸ್ಕೃತಿ!

ಕಾರಿಗೆ ಬಲಿಯಾದ ಶ್ವಾನಕ್ಕೆ ಗಣ್ಯರ ವಿದಾಯ: ಉದ್ಯಮಿ ದಿವಂಗತ ಆದಿಕೇಶವುಲು ಮೊಮ್ಮಗ ಆದಿ ಕಾರು ಹತ್ತಿಸಿದ್ದರಿಂದ ಮೃತಪಟ್ಟಿದ್ದ ಬೀದಿ ನಾಯಿ ‘ಲಾರಾ’ ಮೃತದೇಹವನ್ನು ನಗರದ ಸುಮ್ಮನಹಳ್ಳಿಯ ಬಿಬಿಎಂಪಿ ಪ್ರಾಣಿ ಚಿತಾಗಾರದಲ್ಲಿ ಹಲವರ ಕಣ್ಣೀರ ನಡುವೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಮಾಜಿ ಸಂಸದೆ ಹಾಗೂ ಸ್ಯಾಂಡವುಲ್‌ ನಟಿ ರಮ್ಯಾ ಸೇರಿದಂತೆ ಹಲವು ಪ್ರಾಣಿಪ್ರಿಯರು ‘ಲಾರಾ’ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕಂಬನಿ ಮಿಡಿದಿದ್ದರು. 

ಕಳೆದ ತಿಂಗಳ 26ರಂದು ಆದಿ ಕಾರು ಹತ್ತಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಯಿ ಲಾರಾ ಅಂದು ಘಟನಾ ಸ್ಥಳದಿಂದ ನಾಪತ್ತೆಯಾಗಿತ್ತು. ದೂರದಾರ ಭದ್ರಿಪ್ರಸಾದ್‌ ಚಿಕಿತ್ಸೆ ಮಾಡಿಸಲು ಹುಡುಕಾಡಿದರೂ ಲಾರಾ ಪತ್ತೆಯಾಗಿರಲಿಲ್ಲ. ಬಳಿಕ ಸಿದ್ದಾಪುರ ಠಾಣೆ ಪೊಲೀಸರು ಲಾರಾಗಾಗಿ ಹುಡುಕಾಟ ಆರಂಭಿಸಿದ್ದರು. ಘಟನಾ ಸ್ಥಳದಿಂದ ಸುಮಾರು ಅರ್ಧ ಕಿಲೋ ಮೀಟರ್‌ ದೂರದಲ್ಲಿ ಸೋಮವಾರ ನಾಯಿ ಲಾರಾ ಮೃತದೇಹ ಪತ್ತೆಯಾಗಿತ್ತು.

ಬಳಿಕ ಲಾರಾ ಮೃತದೇಹವನ್ನು ಹೆಬ್ಬಾಳದ ಪಶು ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಕಾರಿನ ಚಕ್ರಗಳು ಲಾರಾ ಹೊಟ್ಟೆಯ ಮೇಲೆ ಹತ್ತಿದ್ದರಿಂದ ಗಂಭೀರವಾಗಿ ಗಾಯಗೊಂಡಿತ್ತು. ತೀವ್ರ ರಕ್ತಸ್ರಾವದಿಂದ ಲಾರಾ ನರಳಾಡಿ ಮೃತಪಟ್ಟಿತ್ತು.ಲಾರಾ ಮೃತದೇಹವನ್ನು ಹೆಬ್ಬಾಳದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಬಳಿಕ ಆ್ಯಂಬುಲೆನ್ಸ್‌ನಲ್ಲಿ ಲಾರಾ ಮೃತದೇಹವನ್ನು ಸುಮ್ಮನಹಳ್ಳಿಯ ಪ್ರಾಣಿ ಚಿತಾಗಾರಕ್ಕೆ ತರಲಾಯಿತು. ಈ ವೇಳೆ ನಟಿ ರಮ್ಯಾ ಸೇರಿದಂತೆ ಪ್ರಾಣಿ ಪ್ರಿಯರು ಲಾರಾ ಮೃತದೇಹಕ್ಕೆ ಹೂವಿಟ್ಟು ಅಂತಿಮ ನಮನ ಸಲ್ಲಿಸಿದರು. ಅಂತೆಯೇ ಸೇಂಟ್‌ ಪೀಟ​ರ್‍ಸ್ ಶಾಲೆಯ ಮಕ್ಕಳು ನಾಯಿ ಲಾರಾ ಮೃತದೇಹಕ್ಕೆ ಹೂಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು.

ಬೀದಿ ನಾಯಿಗಳ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡಿರುವ ಜಯನಗರದ ಗಾಯಿತ್ರಿ ಎಂಬುವವರು ನಾಯಿ ಲಾರಾ ಸಾವಿಗೆ ಕಣ್ಣೀರಿಟ್ಟರು. ಚಿಕ್ಕ ಮರಿಯಿಂದ ಈ ಲಾರಾಗೆ ಊಟ ಹಾಕಿ ಸಾಕಿದ್ದೆ. ನಮ್ಮ ಮನೆ ಬಳಿಯೇ ಇರುತ್ತಿತ್ತು. ಎರಡು ದಿನದಿಂದ ನಾಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಲಾರಾ ಮೇಲೆ ಕಾರು ಹತ್ತಿಸಿರುವುದು ಗೊತ್ತಾಯಿತು. ಇದೀಗ ಲಾರಾ ಮೃತಪಟ್ಟಿದೆ ಎಂದು ಲಾರಾ ಮೃತದೇಹದ ಬಳಿ ಕುಳಿತು ರೋಧಿಸಿದರು. ಈ ದೃಶ್ಯ ನೋಡುಗರ ಕಣ್ಣಾಲಿಗಳು ತುಂಬುವಂತೆ ಮಾಡಿತು.