ಹದಿನೆಂಟು ಅಡಿ ಎತ್ತರದ ನ್ಯೂಯಾರ್ಕ್ ಕ್ಯಾಥಡ್ರಲ್‌ ಚರ್ಟ್‌, ಆಕರ್ಷಿಸುವ ಹಿಮಕರಡಿ, ಭಾರತದ ಕೋಗಿಲೆ ಲತಾ ಮಂಗೇಶ್ಕರ್‌, ಫಿಫಾ ವರ್ಲ್ಡ್‌ ಕಪ್‌ ಗೆದ್ದ ಮೆಸ್ಸಿ.. ನಗರದ ಸೇಂಟ್‌ ಜೋಸೆಫ್‌ ಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿರುವ ‘48ನೇ ವಾರ್ಷಿಕ ಕೇಕ್‌ ಶೋ’ದಲ್ಲಿ ಜನರ ಕಣ್ಮನ ಸೆಳೆಯುತ್ತಿರುವ ಕಲಾಕೃತಿಗಳಿವು.

ಬೆಂಗಳೂರು (ಡಿ.25): ಹದಿನೆಂಟು ಅಡಿ ಎತ್ತರದ ನ್ಯೂಯಾರ್ಕ್ ಕ್ಯಾಥಡ್ರಲ್‌ ಚರ್ಚ್‌, ಆಕರ್ಷಿಸುವ ಹಿಮಕರಡಿ, ಭಾರತದ ಕೋಗಿಲೆ ಲತಾ ಮಂಗೇಶ್ಕರ್‌, ಫಿಫಾ ವರ್ಲ್ಡ್‌ ಕಪ್‌ ಗೆದ್ದ ಮೆಸ್ಸಿ.. ನಗರದ ಸೇಂಟ್‌ ಜೋಸೆಫ್‌ ಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿರುವ ‘48ನೇ ವಾರ್ಷಿಕ ಕೇಕ್‌ ಶೋ’ದಲ್ಲಿ ಜನರ ಕಣ್ಮನ ಸೆಳೆಯುತ್ತಿರುವ ಕಲಾಕೃತಿಗಳಿವು. ಶುಗರ್ಸ್‌ ಸ್ಕಲ್ಫ್ಟ್‌ ಅಕಾಡೆಮಿಯಿಂದ ಆಯೋಜಿಸಿರುವ ಈ ಪ್ರದರ್ಶನ ಜ.1ರವರೆಗೆ ನಡೆಯಲಿದೆ. ಈ ಬಾರಿ 25ಕ್ಕೂ ಹೆಚ್ಚಿನ ಕಲಾಕೃತಿಗಳನ್ನು ರೂಪಿಸಲಾಗಿದ್ದು, ಪ್ರತಿನಿತ್ಯ ಸಾವಿರಾರು ಜನ ಇವುಗಳನ್ನು ಕಣ್ತುಂಬಿ ಕೊಂಡು ಕೇಕ್‌ ಆರ್ಚ್‌ ಕಲಾವಿದರ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬೇಲೂರಿನಲ್ಲಿರುವ ಶ್ರೀರಾಮ-ಆಂಜನೇಯರನ್ನು ಒಳಗೊಂಡ ಪುತ್ಥಳಿ ವಿಶೇಷವಾಗಿ ಗಮನ ಸೆಳೆಯುತ್ತಿದೆ. 20 ದಿನಗಳ ಕಾಲಾವಧಿಯಲ್ಲಿ ರೂಪಿಸಲಾಗಿರುವ ಈ ಕೇಕ್‌ ಕಲಾಕೃತಿ 465 ಕೆ.ಜಿ. ತೂಕವಿದ್ದು, ಐದು ಅಡಿ ಎತ್ತರವಿದೆ. 410 ಕೆ.ಜಿ. ಸಕ್ಕರೆ ಬಳಸಿ ತಯಾರಿಸಿದ ಹಿಮ ಕರಡಿ 4.5 ಅಡಿ ಎತ್ತರವಿದೆ. 7 ಅಡಿ ಎತ್ತರದ ಉಕ್ರೇನ್‌ನ ಸ್ವಾತಂತ್ರ್ಯದ ಸಂಕೇತವಾದ ಸ್ಲಾವಿಕ್‌ ದೇವತೆಯ ಕೇಕ್‌ ಶಿಲ್ಪ ಆಕರ್ಷಕವಾಗಿದೆ.

Christmas 2022: ಜಗ​ಕೆ ಮನು​ಷ್ಯತ್ವದ ಪಾಠ ಹೇಳಿದ ಯೇಸು​ ಕ್ರಿ​ಸ್ತ

ನ್ಯೂ ಇಯರ್‌ ಡೂಡಲ್‌ ಕಲಾಕೃತಿಗೆ 140 ಕೆ.ಜಿ. ಸಕ್ಕರೆ, ಲತಾ ಮಂಗೇಶ್ಕರ್‌ ಕಲಾಕೃತಿಯನ್ನು 230 ಕೆ.ಜಿ. ಸಕ್ಕರೆ ಬಳಸಿ ರೂಪಿಸಲಾಗಿದೆ. ಇನ್ನು, ಸಮುದ್ರದ ಒಳಭಾಗ ಕೋರಲ್‌ ರೀಫ್‌, ಪ್ರಾಚೀನ ವೈದ್ಯ ಶುಶ್ರೂತ ಋುಷಿಮುನಿ, ಕಪ್‌ ಕೇಕ್‌ ಬಳಸಿ ರೂಪಿಸಿರುವ ಕ್ರಿಸ್ಮಸ್‌ ಟ್ರೀ, ಗೋಲ್ಡನ್‌ ಎಗ್‌, ಪರಿಸರ ಸ್ನೇಹಿ ಕಾರು, ಮಕ್ಕಳಿಗಾಗಿ ರೂಪಿಸಿರುವ ಎನ್‌ಕ್ಯಾಂಟೊ ಕ್ಯಾಸಿಟಾ ಸಿಟಿ, ಅಂತರಿಕ್ಷದ ರಾಕ್ಷಸ, ಅಂಬಾರಿ ಹೊತ್ತ ಆನೆ, ರಾಷ್ಟ್ರ ಲಾಂಛನದ ಕೇಕ್‌ ಕಲಾಕೃತಿ ಜನತೆಯ ಮೆಚ್ಚುಗೆ ಗಳಿಸುತ್ತಿದೆ. 

ವರ್ಷದ ಡೂಡಲ್‌ ಎಂದು ರೂಪಿಸಲಾದ ಕೇಕ್‌ನಲ್ಲಿ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌, ಪ್ರಧಾನಿ ಮೋದಿ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಈಚೆಗೆ ಉದ್ಘಾಟನೆಯಾದ ಕೆಂಪೆಗೌಡ ಪುತ್ಥಳಿಯನ್ನು ಚಿತ್ರಿಸಲಾಗಿದೆ. ‘ಆರು ತಿಂಗಳ ಹಿಂದೆಯೇ ಕೇಕ್‌ ಶೋ ಯೋಜನೆ ರೂಪಿಸಿಕೊಂಡಿದ್ದೆವು. 3 ತಿಂಗಳಿಂದ ಕಲಾಕೃತಿಯನ್ನು ರೂಪಿಸಲು ತಯಾರಿ ಮಾಡಿಕೊಂಡಿದ್ದೇವೆ. ಒಂದೊಂದು ಕಲಾಕೃತಿ ರೂಪಿಸಲು 15-20 ದಿನವಾಗಿದೆ. 20ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ರೂಪಿಸಿದ್ದಾರೆ. ಜನತೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಸಂತೋಷ ತಂದಿದೆ’ ಎಂದು ಆಯೋಜಕರು ತಿಳಿಸಿದರು.

4000 ಕೆಜಿ ಸಕ್ಕರೆ ಬಳಸಿ ಅಮೆರಿಕ ಚರ್ಚ್‌ ಸೃಷ್ಟಿ: ಈ ಬಾರಿಯ ವಿಶೇಷ ಎನಿಸಿರುವುದು ಅಮೆರಿಕದ ಕ್ಯಾಥೆಡ್ರಲ್‌ ಬೆಸಿಲಿಕಾ ಆಫ್‌ ದಿ ಸೇಕ್ರೆಡ್‌ ಹಾರ್ಚ್‌ ಚರ್ಚ್‌ನ ಬೃಹತ್‌ ಕಲಾಕೃತಿ. 15 ಅಡಿ ಅಗಲ, 15ಅಡಿ ಉದ್ದ ಹಾಗೂ 18 ಅಡಿ ಎತ್ತರವಿರುವ ಈ ಕೇಕ್‌ಗೆ ಬರೋಬ್ಬರಿ 4 ಸಾವಿರ ಕೆಜಿ ಸಕ್ಕರೆ ಬಳಸಲಾಗಿದೆ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಬೇಕಿಂಗ್‌ ಆ್ಯಂಡ್‌ ಕೇಕ್‌ ಆರ್ಚ್‌ ತರಬೇತಿ ಸಂಸ್ಥೆಯ ಮನೀಶ್‌ ಗೌರ್‌ ತಿಳಿಸಿದರು.

ಏಸುವಿನ ಜನ್ಮದಿನ ವಿಜೃಂಭಣೆ: ಇಂದು ರಾತ್ರಿಯಿಂದಲೇ ಕ್ರಿಸ್ಮಸ್‌ ಆಚರಣೆಗೆ ಸಿದ್ಧತೆ

ಏನೇನಿದೆ?
- 465 ಕೆ.ಜಿ. ಸಕ್ಕರೆ ಬಳಸಿ ತಯಾರಿಸಲಾದ ಬೇಲೂರಿನ ಶ್ರೀರಾಮ- ಆಂಜನೇಯ ಪುತ್ಥಳಿ
- 410 ಕೆ.ಜಿ.ಯಿಂದ ಸಿದ್ಧಪಡಿಸಲಾದ 4.5 ಅಡಿ ಎತ್ತರದ ಹಿಮಕರಡಿ
- 230 ಕೆ.ಜಿ. ಸಕ್ಕರೆ ಬಳಸಿ ತಯಾರಿಸಲಾದ ಲತಾ ಮಂಗೇಶ್ಕರ್‌ ಕಲಾಕೃತಿ