ಅಂಕೋಲಾ [ಅ.07]:  ಯಾವುದೇ ಸಿನಿಮಾ ಕತೆಗೂ ಕಡಿಮೆಯಿಲ್ಲದಂತೆ ಕುತೂಹಲ ಮೂಡಿಸಿರುವ ಅಂಕೋಲಾದ ವೆಂಕಟರಮಣ ನಾಯ್ಕ ಅವರ ಅಸಲಿ ಮಗ ಯಾರೆಂಬ ಪ್ರಕರಣ ಸದ್ಯಕ್ಕೆ ಸುಖಾಂತ್ಯ ಕಂಡಂತಿದೆ. ಇತ್ತೀಚೆಗೆ ತಾನೇ ನಿಮ್ಮ ಪುತ್ರ ಎಂದು ಹೇಳಿಕೊಂಡು ಬಂದಿರುವಾತನೇ ವೆಂಕಟರಮಣ ನಾಯ್ಕ ಅವರ ನಿಜವಾಜ 2ನೇ ಪುತ್ರ ಎಂದು ಊರವರು ಗುರುತಿಸಿದ್ದಾರೆ. ವೆಂಕಟರಮಣ ನಾಯ್ಕ ಅವರೂ ಈತನೇ ತನ್ನ ಪುತ್ರ ಎಂದು ಮನಸಾಕ್ಷಿ ಒಪ್ಪಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಳೆದೊಂದು ವಾರದಿಂದ 2ನೇ ಪುತ್ರನ ವಿಚಾರವಾಗಿ ಮೂಡಿದ್ದ ಗೊಂದಲ ನಿವಾರಣೆಯಾದಂತಾಗಿದ್ದು, ಹಾಗಿದ್ದರೆ 15 ವರ್ಷದಿಂದ ವೆಂಕಟರಮಣ ಅವರ ಜತೆಗಿದ್ದಾತ ಯಾರೆಂಬ ಕುತೂಹಲ ಗರಿಗೆದರಿದೆ.

30 ವರ್ಷಗಳ ಹಿಂದೆ ವೆಂಕಟರಮಣ ನಾಯ್ಕ ಅವರ ಪತ್ನಿ ಮಕ್ಕಳೊಂದಿಗೆ(ಇಬ್ಬರು ಗಂಡು-ಇಬ್ಬರು ಹೆಣ್ಣು) ಮನೆ ಬಿಟ್ಟು ಹೋಗಿದ್ದರು. ಕೆಲವೇ ಸಮಯದಲ್ಲಿ ಮೊದಲ ಪುತ್ರ ವಾಪಸಾಗಿದ್ದರೆ, 15 ವರ್ಷಗಳ ಹಿಂದೆ 2ನೇ ಪುತ್ರನೂ ವಾಪಸ್‌ ಬಂದಿದ್ದ. ಆದರೆ, ಕೆಲ ದಿನಗಳ ಹಿಂದೆ ಕಲಘಟಗಿಯಿಂದ ಬಂದಿದ್ದ ವ್ಯಕ್ತಿ ನಾನೇ ನಿಮ್ಮ 2ನೇ ಪುತ್ರ ಮಂಜುನಾಥ ಎಂದು ಹೇಳಿದ್ದು ವೆಂಕಟರಮಣ ಅವರನ್ನು ಗೊಂದಲಕ್ಕೆ ನೂಕಿತ್ತು. ಜತೆಗೆ, ತಮ್ಮ ಜತೆಗಿರುವ ಮತ್ತು ಈಗ ಬಂದಾತ ಇಬ್ಬರೂ ಡಿಎನ್‌ಎ ಪರೀಕ್ಷೆಗೆ ಸಿದ್ಧ ಎಂದಿರುವುದು ಅವರ ಗೊಂದಲ ಹೆಚ್ಚಿಸಿತ್ತು. ಹೀಗಾಗಿ ಭಾನುವಾರ ತಾನು ತನ್ನಿಬ್ಬರು ಸಹೋದರಿಯರೊಡನೆ ಅಂಕೋಲಾಗೆ ಬರುವುದಾಗಿ ಕಲಘಟಗಿಯ ಮಂಜುನಾಥ್‌ ಹೇಳಿಕೊಂಡಿದ್ದರು. ಅದರಂತೆ ಬೆಳಗ್ಗೆ ಆಗಮಿಸಿದ್ದ ಮಂಜುನಾಥ ಯಾನೆ ಮಹ್ಮದ್‌ ಅಲಿ ಹಾಗೂ ಸಹೋದರರು ಅಪ್ಪನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆನಪು ಬಿಚ್ಚಿಟ್ಟರು: ಮಂಜುನಾಥ ಹಾಗೂ ಸೋದರಿಯರು (ನೀಲಮ್ಮ ಹಾಗೂ ನಾಗಮ್ಮ) ಗ್ರಾಮಕ್ಕೆ ಆಗಮಿಸುವ ಸುದ್ದಿ ತಿಳಿಯುತ್ತಲೇ ಕೇಣಿ ಗ್ರಾಮದಲ್ಲಿ ನೂರಾರು ಜನ ಸೇರಿದ್ದರು. ಈ ವೇಳೆ ಮೂವರೂ ತಮ್ಮ ಬಾಲ್ಯದ ದಿನಗಳು, ಆಟವಾಡುತ್ತಿದ್ದ ಸ್ಥಳಗಳು ಹೀಗೆ ಎಲ್ಲ ವಿಚಾರವನ್ನು ಊರವರಿಗೆ ತೋರಿಸಿದ್ದಾರೆ. ತಾಯಿಯ ಸುಂಕಸಾಳದ ವಿಜಯಾ ಬ್ಯಾಂಕ್‌ನಲ್ಲಿರುವ ಬ್ಯಾಂಕ್‌ ಖಾತೆ, ಪೋಟೋಗಳು, ಜಮೀನಿನ ಪತ್ರ ಎಲ್ಲವನ್ನು ತೋರಿಸಿದ್ದಾರೆ. ಡಿಎನ್‌ಎ ಪರೀಕ್ಷೆಗೂ ನಾವು ಸಿದ್ಧ ಎಂದಿದ್ದಾರೆ.

ಮೂವರು ಮಕ್ಕಳು ಬಾಲ್ಯದ ನೆನಪು, ಸಾಕ್ಷ್ಯಾಧಾರಗಳನ್ನು ಬಿಚ್ಚಿಡುತ್ತಿದ್ದಂತೆ ಇಡೀ ಕುಟುಂಬ ಗದ್ಗದಿತರಾಗಿದ್ದು, ಪರಸ್ಪರ ಅಪ್ಪಿಕೊಂಡು ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗಿತ್ತು. ನಂತರ ತಾನು ಕಲಘಟಗಿಗೆ ತೆರಳಿ ಅಲ್ಲಿ ಈ ಮಕ್ಕಳೊಂದಿಗೆ ಇರುತ್ತೇನೆ. ಆಗಾಗ ಹಿರಿಯ ಮಗನನ್ನು ನೋಡಲು ಬರುತ್ತೇನೆ ಎಂದು ಗ್ರಾಮಸ್ಥರೆದುರು ವೆಂಕಟರಮಣ ಹೇಳಿಕೊಂಡಿದ್ದಾರೆ.

2ನೇ ಪುತ್ರನ ಕುರಿತು ಗೊಂದಲ ಸೃಷ್ಟಿಯಾದಾಗ ಶನಿವಾರ ತಾನು ಡಿಎನ್‌ಎ ಟೆಸ್ಟ್‌ಗೆ ಸಿದ್ಧ ಎಂದಿದ್ದ 15 ವರ್ಷದಿಂದ ಜತೆಗಿರುವ ಮಂಜುನಾಥ ಭಾನುವಾರ ಬೆಳ್ಳಂಬೆಳಗ್ಗೆ ಬೋಟ್‌ ಕೆಲಸಕ್ಕೆ ತೆರಳಿದ್ದರಿಂದ ಪ್ರಕರಣದ ಸುಖ್ಯಾಂತಕ್ಕೆ ಅಡ್ಡಿಯಾಗುವಂತಾಯಿತು. ಆದರೆ, ಕಲಘಟಗಿಯಿಂದ ಬಂದಿದ್ದ ಮಂಜುನಾಥ ಮಾತ್ರ ನಮಗೆ ಆಸ್ತಿ ಬೇಡ, ಮನೆಯಲ್ಲಿ ನನ್ನ ಹೆಸರು ಹೇಳಿಕೊಂಡು ಉಳಿದಿರುವ ಆತನನ್ನೂ ಹೊರ ಹಾಕಬೇಡಿ ಎಂದಿದ್ದಾರೆ.

ನನ್ನ ನಿಜವಾದ ಮಕ್ಕಳು ಇವರೇ ಎಂದು ನನ್ನ ಆತ್ಮಸಾಕ್ಷಿ ಒಪ್ಪಿದೆ. ಇರುವಷ್ಟುದಿನ ಕಲಘಟಗಿಯಲ್ಲಿ ಇವರೊಡನೆ ಇರುತ್ತೇನೆ. ಸುಳ್ಳು ಹೇಳಿಕೊಂಡು ಮಗನಂತೆ ನಟಿಸಿದ ಮಗ ಯಾರೆಂದು ಪತ್ತೆಯಾಗುವಂತಾಗಲಿ.

-ವೆಂಕಟರಮಣ ನಾಯ್ಕ, ತಂದೆ