ಸಿದ್ಧಲಿಂಗಸ್ವಾಮಿ ವೈ.ಎಂ.

ಬಳ್ಳಾರಿ(ಏ.17): ಇಡೀ ವಿಶ್ವದಲ್ಲೇ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್‌ ಮಹಾಮಾರಿಯು ಮನುಷ್ಯನ ಪ್ರಾಣವನ್ನಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳ ಜೀವಕ್ಕೂ ಕುತ್ತನ್ನು ತಂದೊಡ್ಡಿದೆ. ಬಿಸಿಲನಾಡು ಎಂದೇ ಖ್ಯಾತಿ ಪಡೆದ ಬಳ್ಳಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸದಾ ಕಾಲ ಇದ್ದೇ ಇರುತ್ತದೆ. ಅದರಲ್ಲೂ ಈ ಬೇಸಿಗೆ ಸಮಯದಲ್ಲಿ ನೀರಿನ ಹಾಹಾಕಾರ ಎಲ್ಲೆಡೆ ಅಧಿಕವಿರುತ್ತದೆ. ಅದರಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಸದ್ಯ ಎಲ್ಲೆಡೆ ಲಾಕ್‌ಡೌನ್‌ ಇರುವುದರಿಂದ ಇತ್ತ ಆಹಾರವೂ ಇಲ್ಲದೇ ಕುಡಿಯಲು ನೀರೂ ದೊರೆಯದೇ ಮೂಕ ಪ್ರಾಣಿಗಳು, ಪಕ್ಷಿಗಳ ರೋಧನೆ ಹೇಳತೀರದಾಗಿದೆ.

ಲಾಕ್‌ಡೌನ್‌ನಿಂದಾಗಿ ಜನದಟ್ಟಣೆ ಹಾಗೂ ವಾಹನಗಳ ಓಡಾಟ, ಶಬ್ಧ ತೀರಾ ಕಡಿಮೆಯಾಗಿರುವುದರಿಂದ ಮಾಲಿನ್ಯವೂ ಕಡಿಮೆಯಾಗುತ್ತಿದೆ. ಇದರಿಂದ ಗುಬ್ಬಿಗಳು, ಮೈನಾ, ಪಾರಿವಾಳ, ಗಿಳಿ, ಕೋಗಿಲೆ, ಅಳಿಲು, ಕಾಗೆಗಳು ಸೇರಿದಂತೆ ಪ್ರಕೃತಿಯಲ್ಲಿನ ನಾನಾ ಪಕ್ಷಿಗಳಿಗೆ ಒಂದು ಕಡೆ ಸಂತಸ ತಂದೊಡಿದ್ದರೆ ಮತ್ತೊಂದೆಡೆ ತಿನ್ನಲು ಆಹಾರದ ಕೊರತೆ ತೀವ್ರತರವಾಗಿದೆ.

ಲಾಕ್‌ಡೌನ್‌ ಲೆಕ್ಕಿಸದೆ ಕದ್ದುಮುಚ್ಚಿ ವ್ಯಾಪಾರ: ಸಾರ್ವಜನಿಕರಲ್ಲಿ ಮೂಡದ ಅರಿವು

ಕೊರೋನಾ ವೈರಸ್‌ ಭೀತಿಯಿಂದಾಗಿ ಲಾಕ್‌ಡೌನ್‌ ಇರುವುದರಿಂದ ಜನರು ಮನೆಯಿಂದ ಹೊರಬರುತ್ತಿಲ್ಲ. ಹೀಗಾಗಿ, ಬೀದಿ ನಾಯಿಗಳು, ಬಿಡಾಡಿ ದನಗಳಿಗೂ ಸಹ ತಿನ್ನಲು ಆಹಾರವಿಲ್ಲದೇ ಅವುಗಳ ಗೋಳು ಹೇಳತೀರದಾಗಿದೆ. ಬೀದಿಬದಿಯಲ್ಲಿ ಬಿದ್ದಿದ್ದ ತರಕಾರಿ, ಹಣ್ಣು, ಆಹಾರವನ್ನೇ ತಿಂದು ಬದುಕುತ್ತಿದ್ದವು. ಆದರೀಗ, ಆಹಾರ ದೊರೆಯುತ್ತಿಲ್ಲವಾದ್ದರಿಂದ ಮೂಕ ಪ್ರಾಣಿಗಳು ಹಸಿವಿನಿಂದ ಬಳಲುತ್ತಿರುವುದು ಮನಕಲುಕುವಂತಿದೆ.

ಪ್ರಾಣಿ, ಪಕ್ಷಿ ಪ್ರೇಮಿಗಳಿಂದ ಆಹಾರ

ನಗರದಲ್ಲಿ ಕೆಲ ಪ್ರಾಣಿ ಪಕ್ಷಿ ಪ್ರೇಮಿಗಳು ಮಾನವೀಯತೆ ಮೆರೆದು ಪಕ್ಷಿಗಳಿಗಾಗಿ ತಮ್ಮ ಮನೆಗಳ ಮೇಲ್ಚಾವಣಿಗಳಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ಇಡುತ್ತಿದ್ದಾರೆ. ಹಾಗೆ ನಾನಾ ವಿಧದ ಧಾನ್ಯಗಳನ್ನು ತಟ್ಟೆಗಳಲ್ಲಿ ಹಾಕಿ ಇಡುತ್ತಿದ್ದಾರೆ. ಜೊತೆಗೆ ಇನ್ನೂ ಕೆಲವರು ಬೆಳಗಿನ ಜಾವ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳಿಲು, ಪಕ್ಷಿಗಳಿಗೆ ಗೋಧಿ ಸೇರಿದಂತೆ ನಾನಾ ಕಾಳುಕಡಿಗಳನ್ನು ಹಾಕುವುದು ಕಂಡುಬರುತ್ತಿದೆ. ಆಹಾರಕ್ಕಾಗಿ ಎದುರು ನೋಡುವ ಬೀದಿನಾಯಿಗಳಿಗೆ ಶ್ವಾನಪ್ರಿಯರು ಬಿಸ್ಕೆಟ್‌, ಆಹಾರವನ್ನು ಹಾಕುತ್ತಿದ್ದಾರೆ.

ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಿ:

ಸ್ಥಳೀಯರು ತಮ್ಮ ತಮ್ಮ ಮನೆಯ ಸುತ್ತಮುತ್ತಲಿರುವ ಸಾಕು ಪ್ರಾಣಿ, ಪಕ್ಷಿಗಳಿಗೆ ಕೈಲಾದಷ್ಟು ಆಹಾರ, ನೀರು ನೀಡಲು ಸ್ವಯಂಪ್ರೇರಣೆಯಿಂದ ಮುಂದಾಗಬೇಕಾಗಿದೆ, ಇದರಿಂದ ಅವುಗಳ ಜೀವವನ್ನೂ ಉಳಿಸಿದಂತಾಗುತ್ತದೆ ಎಂದು ಪ್ರಾಣಿ, ಪಕ್ಷಿ ಪ್ರೇಮಿಗಳು ಕೋರಿ​ದ್ದಾ​ರೆ.

ಮೊದಲಿನಿಂದಲೂ ಪಕ್ಷಿ, ಸಾಕು ಪ್ರಾಣಿಗಳಿಗೆ ನೀರು, ಆಹಾರ ನೀಡುವುದೆಂದರೆ ನನಗೆ ಇಷ್ಟದ ಕೆಲಸ. ಕೊರೋನಾ ವೈರಸ್‌ ಎಫೆಕ್ಟ್ನಿಂದ ಆಹಾರ ದೊರೆಯದೇ ಸಾಕು ಪ್ರಾಣಿ ಪಕ್ಷಿಗಳು ಪ್ರಾಣಬಿಡುತ್ತಿವೆ. ಹೀಗಾಗಿ, ಎಲ್ಲರೂ ಸ್ವಯಂ ಪ್ರೇರಣೆಯಿಂದ ಸಾಕು ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ನೀಡಲು ಮುಂದಾಗಬೇಕಾಗಿದೆ ಎಂದು ಬಳ್ಳಾರಿ ನಗರದ ಸ್ಥಳೀಯ ನಿವಾಸಿ ಎಸ್‌. ದ್ರಾಕ್ಷಾಯಣಿ ಹೇಳಿದ್ದಾರೆ. 
ತಮ್ಮ ಮನೆಗಳ ಮುಂಭಾಗ ಹಾಗೂ ಚಾವಣಿಗಳಲ್ಲಿ ನೀರು ಇಡುವುದು ಪುಣ್ಯದ ಕೆಲಸ ಇದರಿಂದ ಅನೇಕ ಪ್ರಾಣಿ ಪಕ್ಷಿಗಳ ಜೀವ ಉಳಿಸಿದಂತಾಗುತ್ತದೆ ಎಂದು ಬಳ್ಳಾ​ರಿ ನಿವಾಸಿ ಶಿವಕುಮಾರ್‌ ತಿಳಿಸಿದ್ದಾರೆ.