ಶಿಕ್ಷಣ ಸಚಿವರೇ.. 25 ಪುಟಾಣಿಗಳಿರುವ ಅಂಗನವಾಡಿಗೆ ಶಿಕ್ಷಕಿಯೂ ಇಲ್ಲ, ಸಹಾಯಕಿಯೂ ಇಲ್ಲ!

ಶಿಕ್ಷಣ ಎಲ್ಲರ ಮೂಲಭೂತ ಹಕ್ಕು ಎಂದು ನಮ್ಮ ಸಂವಿಧಾನದಲ್ಲಿಯೇ ಬರೆದುಕೊಂಡಿದ್ದೇವೆ. ಆದರೆ ಐಟಿಡಿಪಿ ಇಲಾಖೆ ಎಡವಟ್ಟಿನಿಂದಾಗಿ ಈಗ ತಾನೆ ಶಾಲಾ ಪೂರ್ವ ಶಿಕ್ಷಣಕ್ಕೆ ಕಾಲಿಡುತ್ತಿರುವ ಈ ಪುಟಾಣಿಗಳಿಗೆ ಕಲಿಸುವ ಶಿಕ್ಷಕಿಯೇ ಇಲ್ಲ. 

Anganawadi in Kodagu district with 25 children has neither a teacher nor a helper gvd

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.09): ಶಿಕ್ಷಣ ಎಲ್ಲರ ಮೂಲಭೂತ ಹಕ್ಕು ಎಂದು ನಮ್ಮ ಸಂವಿಧಾನದಲ್ಲಿಯೇ ಬರೆದುಕೊಂಡಿದ್ದೇವೆ. ಆದರೆ ಐಟಿಡಿಪಿ ಇಲಾಖೆ ಎಡವಟ್ಟಿನಿಂದಾಗಿ ಈಗ ತಾನೆ ಶಾಲಾ ಪೂರ್ವ ಶಿಕ್ಷಣಕ್ಕೆ ಕಾಲಿಡುತ್ತಿರುವ ಈ ಪುಟಾಣಿಗಳಿಗೆ ಕಲಿಸುವ ಶಿಕ್ಷಕಿಯೇ ಇಲ್ಲ. ಇಂತಹ ನಾಚಿಕೆಗೇಡಿನ ಸಂಗತಿ ಇರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ದಿಡ್ಡಳ್ಳಿ ಪುನರ್ವಸತಿ ಗ್ರಾಮ ಬ್ಯಾಡಗೊಟ್ಟದಲ್ಲಿ. ಕಾಡಿನಲ್ಲಿ ಇದ್ದರೆ ನೀವು ಎಂದೆಂದಿಗೂ ಶಿಕ್ಷಣ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತೀರಾ ಎಂದು 2016 ರಲ್ಲಿ ಅಂದೂ ಕೂಡ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ಹಾಡಿಯಲ್ಲಿ ವಾಸಿಸುತ್ತಿದ್ದ 500 ಕ್ಕೂ ಹೆಚ್ಚು ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದರು. 

ಬಳಿಕ ಕುಶಾಲನಗರ ತಾಲ್ಲೂಕಿನ ಬ್ಯಾಡಗೊಟ್ಟದಲ್ಲಿ 375 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂರು ಒದಗಿಸಲಾಗಿತ್ತು. ಇದೀಗ ಬ್ಯಾಡಗೊಟ್ಟದಲ್ಲಿ ಅಂಗನವಾಡಿಗೆ ಹೋಗುವ 25 ಕ್ಕೂ ಹೆಚ್ಚು ಪುಟಾಣಿಗಳಿದ್ದಾರೆ. ವಿಪರ್ಯಾಸವೆಂದರೆ ಅಂಗನವಾಡಿಗೆ ಶಿಕ್ಷಕಿಯಾಗಲಿ, ಸಹಾಯಕಿಯಾಗಲಿ ಇಲ್ಲ. ಬದಲಾಗಿ ಪಕ್ಕದ ಊರಿನಲ್ಲಿರುವ ಅಂಗನವಾಡಿ ಶಿಕ್ಷಕಿಗೆ ಬ್ಯಾಡಗೊಟ್ಟದ ಅಂಗನವಾಡಿಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಆ ಶಿಕ್ಷಕಿ ವಾರದಲ್ಲಿ ಮೂರು ದಿನ ಮಾತ್ರವೇ ಈ ಅಂಗನವಾಡಿಗೆ ಬರಲು ಸಾಧ್ಯವಾಗುತ್ತಿದೆ. ಇನ್ನು ಬ್ಯಾಡಗೊಟ್ಟ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಇರುವುದರಿಂದ ಈ ಶಿಕ್ಷಕಿ ಅಂಗನವಾಡಿಗೆ ಬಂದರೂ ಗರ್ಭಿಣಿಯರು, ಬಾಣಂತಿಯರನ್ನು ಭೇಟಿಯಾಗುವುದರಲ್ಲೇ ಸಮಯ ಮುಗಿಯುತ್ತಿದೆ. 

ಇಬ್ಬರು ಸಿಂಗ್‌ಗಳಿಂದ ಬಿಜೆಪಿಗೆ ದುಸ್ಥಿತಿ: ಶಾಸಕ ಬಸನಗೌಡ ಯತ್ನಾಳ್‌

ಜೊತೆಗೆ ಅಂಗನವಾಡಿಗೆ ಸಹಾಯಕಿಯೂ ಇಲ್ಲದೆ ಇರುವುದರಿಂದ ಈ ಪುಟಾಣಿಗಳಿಗೆ ವಿತರಿಸಬೇಕಾಗಿರುವ ಆಹಾರ ಸಿದ್ಧಪಡಿಸುವುದನ್ನೂ ಇವರೇ ಮಾಡಬೇಕಾಗಿದೆ. ಇದರಿಂದ ಪುಟಾಣಿಗಳಿಗೆ ಕಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳು ಇಂದಿಗೂ ಶಾಲಾ ಪೂರ್ಣ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ವಿಪರ್ಯಾಸವೆಂದರೆ ಐಟಿಡಿಪಿ ಇಲಾಖೆಯಿಂದ ಅಂಗನವಾಡಿಗೆಂದು ಕಳೆದ 6 ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಿದ್ದರೂ ಅದರ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ, ಬಣ್ಣ ಬಳಿದಿಲ್ಲ. ಕೂಡಿಗೆ ಗ್ರಾಮ ಪಂಚಾಯಿತಿಗೆ ಅಂಗನವಾಡಿ ಕಟ್ಟಡವನ್ನು ಹಸ್ತಾಂತರಿಸಬೇಕಾಗಿದ್ದು ಇಂದಿಗೂ ಹಸ್ತಾಂತರಿಸಿಲ್ಲ. ಪರಿಣಾಮವಾಗಿ ಅಂಗನವಾಡಿಯಲ್ಲಿ ಕನಿಷ್ಟ ಮಕ್ಕಳಿಗೆ ಕುಳಿತುಕೊಳ್ಳುವುದಕ್ಕೆ ಚಾಪೆಯೂ ಇಲ್ಲ. ಆಹಾರ ಸೇವಿಸುವುದಕ್ಕೆ ಪ್ಲೇಟು, ಲೋಟಗಳೂ ಇಲ್ಲ. 

ಇಲ್ಲಿನ ಸ್ವಸಹಾಯ ಸಂಘಗಳ ಸಹಾಯದಿಂದ ಚಾಪೆ ಕೊಂಡು ಹಾಕದ್ದೇವೆ ಎನ್ನುತ್ತಾರೆ ಶಿಕ್ಷಕಿ ಶಾಲಿನಿ. ಇಂತಹ ದುಃಸ್ಥಿತಿಯಲ್ಲಿ ಪುಟಾಣಿಗಳಿದ್ದಾರೆ. ಅಂಗನವಾಡಿ ಕಟ್ಟಡವೆಂದು ಐಟಿಡಿಪಿ ಇಲಾಖೆ ಮಾಡಿದ್ದರೂ ಅದಕ್ಕೆ ವಿದ್ಯುತ್ ಸಂಪರ್ಕವಿಲ್ಲ. ಕಿಟಕಿಗಳು ಹೊಡೆದು ಹೋಗಿವೆ. ಶಿಕ್ಷಕಿ, ಸಹಾಯಕಿ ಯಾರೂ ಇಲ್ಲದೆ ಇರುವುದರಿಂದ ನಾವು ನಮ್ಮ ಮಕ್ಕಳನ್ನು ಅಂಗನವಾಡಿಯಲ್ಲಿ ಹೇಗೆ ಬಿಟ್ಟು ಹೋಗುವುದು. ಕೂಲಿ ಕೆಲಸಕ್ಕೆ ಹೋಗುವ ನಾವು ವಾಪಸ್ ಬರುವುದು ಸಂಜೆಯಾಗುತ್ತದೆ. ಹೀಗಿರುವಾಗ ವಾರದಲ್ಲಿ ಮೂರು ದಿನ ಬರುವ ಅಂಗನವಾಡಿ ಶಿಕ್ಷಕಿಯನ್ನು ನಂಬಿ ಬಿಟ್ಟು ಹೋಗುವುದು ಹೇಗೆ. 

ಶಾಸಕ ಯತ್ನಾಳ ಆರೋಪ ಸತ್ಯಕ್ಕೆ ದೂರ: ಸಚಿವ ಜಮೀರ್ ಅಹ್ಮದ್ ಖಾನ್

ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ಹಾದು ಹೋಗಿರುವ ಗ್ರಾಮದ ಒಳಚರಂಡಿ ಶೌಚಾ ಗುಂಡಿ ತುಂಬಿ ಹರಿಯುತ್ತಿದ್ದು ನಮ್ಮ ಮಕ್ಕಳಿಗೆ ಅನಾರೋಗ್ಯ ಕಾಡುವ ಆತಂಕ ಎದುರಾಗಿದೆ. ಈ ಕುರಿತು ಸಾಕಷ್ಟು ಬಾರಿ, ಪಂಚಾಯಿಗೆ ದೂರು ನೀಡಿದ್ದೇವೆ. ಆದರೆ ಪಂಚಾಯಿತಿಯವರು ಕಟ್ಟಡವನ್ನು ಐಟಿಡಿಪಿ ಇಲಾಖೆ ನಮಗೆ ಹಸ್ತಾಂತರ ಮಾಡಿಲ್ಲ. ಹೀಗಾಗಿ ನಾವು ಹೇಗೆ ಸ್ವಚ್ಛತೆ ಅಥವಾ ನಿರ್ವಹಣೆ ಮಾಡುವುದು ಎಂದು ಪ್ರಶ್ನಿಸುತ್ತಿದ್ದಾರೆ. ಇಲಾಖೆಗಳು ಮಾಡಿಕೊಂಡಿರುವ ಎಡವಟ್ಟಿಗೆ ನಾವು ನಮ್ಮ ಮಕ್ಕಳು ನರಳಾಡುವ ಸ್ಥಿತಿ ಬಂದಿದೆ ಎಂದು ಪೋಷಕರಾದ ಮೋಹನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅರಣ್ಯದಲ್ಲಿದ್ದರೆ ಇನ್ನೂ ಹಿಂದುಳಿಯುತ್ತೀರ ಎಂದು ಪುನರ್ವಸತಿ ಕಲ್ಪಿಸಿದ ಸರ್ಕಾರ ಅವರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Latest Videos
Follow Us:
Download App:
  • android
  • ios