ಚಿತ್ರದುರ್ಗ ಜಿಲ್ಲೆಯ ಗೋಪನಹಳ್ಳಿ ಗ್ರಾಮದಲ್ಲಿ ಮಕ್ಕಳು ಆಟವಾಡುವಾಗ ಮಣ್ಣಿನಲ್ಲಿ ಹಳೆಯ ಕಾಲದ ನಾಣ್ಯಗಳಿದ್ದ ಕುಡಿಕೆ ಪತ್ತೆಯಾಗಿದೆ. ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಐತಿಹಾಸಿಕ ಮಹತ್ವ ತಿಳಿಯಲು ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಚಿತ್ರದುರ್ಗ: ಕರ್ನಾಟಕದ ಇತಿಹಾಸವೆಂದರೆ ಕೋಟೆ, ರಾಜರ ಯುದ್ಧಗಳ ಕಥೆಯಷ್ಟೇ ಅಲ್ಲ, ಜನಸಾಮಾನ್ಯರು ಬಳಸುತ್ತಿದ್ದ ವಸ್ತುಗಳು ಇತಿಹಾಸವನ್ನು ನೆನಪಿಸುತ್ತವೆ. ಹಳೆಯ ನಾಣ್ಯಗಳು ಕೇವಲ ವ್ಯಾಪಾರದ ಮಾಧ್ಯಮಗಳಲ್ಲ. ಅವು ಅಂದಿನ ಸಾಮ್ರಾಜ್ಯದ ಆರ್ಥಿಕ ಸ್ಥಿತಿಗತಿ ಮತ್ತು ಇತಿಹಾಸವನ್ನು ತಿಳಿಸುವ ಜ್ಞಾನದ ನಿಧಿ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಅಪರೂಪದ ಹಳೆಯ ಕಾಲದ ನಾಣ್ಯಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮಕ್ಕಳು ಆಟವಾಡುವಾಗ ನಡೆದ ಅಕಸ್ಮಿಕ ಘಟನೆಯೊಂದು ಐತಿಹಾಸಿಕ ನಿಧಿಯ ಶೋಧಕ್ಕೆ ಕಾರಣವಾಗಿದೆ.
ಗೋಪನಹಳ್ಳಿ ಗ್ರಾಮದ ನಿವಾಸಿ ರಂಗಮ್ಮ ಎಂಬುವರ ಮನೆಯ ಅಂಗಳದಲ್ಲಿ ಈ ಘಟನೆ ನಡೆದಿದೆ. ರಂಗಮ್ಮ ಅವರ ಮನೆಯಲ್ಲಿದ್ದ ಮಕ್ಕಳು ಆಮೆ ಆಟವಾಡುತ್ತಾ ಮನೆಯ ಅಂಗಳದಲ್ಲಿ ನೆಲವನ್ನು ಅಗೆಯುತ್ತಿದ್ದರು. ಈ ವೇಳೆ ಮಣ್ಣಿನ ಅಡಿಯಲ್ಲಿ ಸಣ್ಣ ಕುಡಿಕೆಯೊಂದು ಸಿಕ್ಕಿದೆ. ಕುಡಿಕೆಯನ್ನು ತೆಗೆದು ಪರಿಶೀಲಿಸಿದಾಗ ಅದರೊಳಗೆ ಪುರಾತನ ಕಾಲದ ನಾಣ್ಯಗಳು ಇರುವುದು ಕಂಡುಬಂದಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ
ವಿಷಯ ತಿಳಿದ ತಕ್ಷಣ ಚಳ್ಳಕೆರೆ ತಾಲೂಕು ತಹಸೀಲ್ದಾರ್ ರಹೆನ್ ಪಾಶಾ ಅವರು ಸಿಬ್ಬಂದಿಯೊಂದಿಗೆ ಗೋಪನಹಳ್ಳಿಯ ರಂಗಮ್ಮ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಮಾಹಿತಿ ಪಡೆದ ಅಧಿಕಾರಿಗಳು, ನಾಣ್ಯಗಳಿದ್ದ ಕುಡಿಕೆಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಪುರಾತತ್ವ ಇಲಾಖೆಗೆ ಮಾಹಿತಿ ರವಾನೆ
ಈ ನಾಣ್ಯಗಳು ಯಾವ ಕಾಲಘಟ್ಟಕ್ಕೆ ಸೇರಿದವು, ಯಾವ ಲೋಹದಿಂದ ಮಾಡಲ್ಪಟ್ಟಿವೆ ಮತ್ತು ಇವುಗಳ ಐತಿಹಾಸಿಕ ಮಹತ್ವವೇನು ಎಂಬುದನ್ನು ಕಂಡುಕೊಳ್ಳಲು ಕಂದಾಯ ಇಲಾಖೆಯು ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ರವಾನಿಸಿದೆ. ಪುರಾತತ್ವ ತಜ್ಞರು ಸ್ಥಳಕ್ಕೆ ಆಗಮಿಸಿ ವೈಜ್ಞಾನಿಕ ಪರಿಶೀಲನೆ ನಡೆಸಿದ ಬಳಿಕವಷ್ಟೇ ಈ ನಾಣ್ಯಗಳ ಹಿಂದಿನ ರಾಜವಂಶ ಹಾಗೂ ಇತಿಹಾಸ ಸ್ಪಷ್ಟವಾಗಲಿದೆ.
ರಾಜ್ಯದಲ್ಲಿ ಹಲವು ಮಂದಿ ನಾಣ್ಯ ಸಂಗ್ರಹಕಾರರಿದ್ದಾರೆ. ಹಳೆಯ ನೋಟುಗಳ ಸಂಗ್ರಹಕಾರರೂ ಇದ್ದಾರೆ. ಕರ್ನಾಟಕವನ್ನು ಆಳಿದ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಅಳುಪರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ಅರಸರ ಕಾಲದ ನಾಣ್ಯಗಳು, ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಕಾಲದ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳು, ಶಾತವಾಹನರು, ಕ್ಷತ್ರಪರು, ಗುಪ್ತರು, ಕುಶಾನರು, ಇಂಡೋ-ಗ್ರೀಕರು, ಇಂಡೋ-ಪಾರ್ಥಿಯನ್ನರು, ರೋಮನ್ನರು ಸೇರಿ ವಿವಿಧ ರಾಜವಂಶಗಳ ನಾಣ್ಯಗಳು, ಪ್ರಾಚೀನ ಬೆಳ್ಳಿ ಮುದ್ರೆಯ ನಾಣ್ಯಗಳು, ದೆಹಲಿ ಸುಲ್ತಾನರು, ಮೊಘಲರು, ಬಹಮನಿ ಹಾಗೂ ವಿಜಯಪುರ ಸುಲ್ತಾನರ ಕಾಲದ ನಾಣ್ಯ, ಬ್ರಿಟಿಷರ ಆಳ್ವಿಕೆಯ ಕಾಲದ ನಾಣ್ಯಗಳು ಈಗ ಇತಿಹಾಸ.







