ನೆಲಮಂಗಲ/ಬೆಂಗಳೂರು (ನ.24):‘ಒಂದೇ ಕಂಪನಿ, ಒಂದೇ ಬಣ್ಣ, ಒಂದೇ ನೋಂದಣಿ ಸಂಖ್ಯೆ, 4 ಖಾಸಗಿ ಬಸ್‌ಗಳು, 3 ರಾಜ್ಯಗಳಲ್ಲಿ ಸಂಚಾರ!’

- ತೆರಿಗೆ ವಂಚಿಸಿ ಅಕ್ರಮವಾಗಿ ಸಂಚರಿಸುತ್ತಿರುವ ಖಾಸಗಿ ಬಸ್‌ಗಳ ವಿರುದ್ಧ ನೆಲಮಂಗಲ ಮತ್ತು ಯಶವಂತಪುರದ ಆರ್‌ಟಿಒ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆಗಿಳಿದ ವೇಳೆ ಬೆಳಕಿಗೆ ಬಂದಿರುವ ಆಘಾತಕಾರಿ ಸಂಗತಿಯಿದು. ಒಟ್ಟು ಮೂರು ನೋಂದಣಿ ಸಂಖ್ಯೆಯಲ್ಲಿ ಮೂರು ರಾಜ್ಯಗಳಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದು 7 ಬಸ್‌ಗಳನ್ನು ಪತ್ತೆ ಹಚ್ಚಿರುವ ಆರ್‌ಟಿಒ ಅಧಿಕಾರಿಗಳು ಒಟ್ಟು .41 ಲಕ್ಷ ದಂಡ ವಿಧಿಸಿದ್ದಾರೆ. ಈ ಪೈಕಿ 4 ಬಸ್‌ಗಳು ಒಂದೇ ನೋಂದಣಿ ಸಂಖ್ಯೆ ಹೊಂದಿದ್ದವು.

ನೆಲಮಂಗಲದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಆಯುಕ್ತ ಶಿವಕುಮಾರ್‌ ಈ ಬಗ್ಗೆ ಮಾಹಿತಿ ನೀಡಿದರು. ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಬಸ್‌ಗಳು ಎರಡು ಭಿನ್ನ ಕಂಪನಿಗಳಿಗೆ ಸೇರಿದ್ದಾಗಿದ್ದು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಸಂಚಾರ ಮಾಡುತ್ತಿದ್ದವು ಎಂದು ತಿಳಿಸಿದ್ದಾರೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ‘ನಿರ್ಭಯಾ ಆ್ಯಪ್‌’...! ...

ಕಾರ್ಯಾಚರಣೆ ವಿವರ: ನ.18ರಂದು ಆರ್‌ಜೆ 19- ಪಿಸಿ- 3131 ನೋಂದಣಿಯ ಸ್ಲೀಪರ್‌ ಬಸನ್ನು ದಾಬಸ್‌ ಪೇಟೆ- ನೆಲಮಂಗಲ ಮಧ್ಯೆ ದೇವನಾರಾಯಣ ಡಾಬಾ ಬಳಿ ನಿಲ್ಲಿಸಲಾಗಿತ್ತು. ಈ ವಾಹನದ ರಹದಾರಿ ಮತ್ತು ಪರವಾನಗಿ ತೆರಿಗೆ ಪಾವತಿ ಅ.31ಕ್ಕೆ ಮುಕ್ತಾಯವಾಗಿತ್ತು. ಆದರೆ ಆ ಬಳಿಕವೂ ತೆರಿಗೆ ಪಾವತಿಸದೇ ಜೋಧಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಸಾಗಣೆ ಮಾಡುತ್ತಿತ್ತು. ಆರ್‌ಟಿಒ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರಯಾಣಿಕರನ್ನು ನೆಲಮಂಗಲ ಹೊರವಲಯದಿಂದ ಹತ್ತಿಸಿಕೊಂಡು ನಂತರ ಜೋಧಪುರಕ್ಕೆ ಪ್ರಯಾಣ ಬೆಳೆಸುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಆರ್‌ಟಿಒ ಅಧಿಕಾರಿಗಳು ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿ ತನಿಖಾ ವರದಿಯನ್ನು ನೀಡಿದ್ದರು.

ಈ ಕಾರ್ಯಾಚರಣೆ ವೇಳೆ ಎನ್‌ಎಲ್‌ 01 ಬಿ 1794 ವಾಹನ ಆರ್‌ಟಿಒ ಅಧಿಕಾರಿಗಳ ತಂಡಕ್ಕೆ ಎದುರಾಗಿತ್ತು. ಆದರೆ ಆ ಬಸ್‌ ಆರ್‌ಟಿಒ ಅಧಿಕಾರಿಗಳಿಗೆ ಸಿಗದೆ ಪರಾರಿ ಆಗಿತ್ತು. ಆದರೆ ಅಧಿಕಾರಿಗಳು ಆ ಬಸನ್ನು ಹಿಂಬಾಲಿಸಲಾಗಿರಲಿಲ್ಲ. ಈ ಬಗ್ಗೆ ನೆಲಮಂಗಲ ಆರ್‌ಟಿಒ ಕಚೇರಿಗೆ ಕರೆ ಮಾಡಿ ವಿವರ ಹುಡುಕಿದಾಗ ನ.17ರಂದೇ ಅದೇ ಕಂಪನಿಯ ಅದೇ ನೋಂದಣಿ ಸಂಖ್ಯೆಯ ಮತ್ತೊಂದು ಬಸ್‌ ಅನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿರುವುದು ಬೆಳಕಿಗೆ ಬಂತು. ಈ ನಿಟ್ಟಿನಲ್ಲಿ ತನಿಖೆ ನಡೆಸಿ ಕಾರ್ಯಾಚರಣೆ ಮುಂದುವರಿಸಿದಾಗ ಒಟ್ಟಾರೆ 7 ಬಸ್‌ಗಳು ಪತ್ತೆಯಾಗಿದೆ. ಇದರಲ್ಲಿ ಒಂದೇ ಕಂಪನಿಯ ನಾಲ್ಕು ಬಸ್‌ಗಳು ತಲಾ 2 ನೋಂದಣಿಯಲ್ಲಿ ಸಂಚರಿಸುತ್ತಿದ್ದುದು ಪತ್ತೆಯಾಗಿದೆ. ಅವುಗಳಲ್ಲಿ 2 ಮಾತ್ರ ಪತ್ತೆಯಾಗಿದ್ದು ಇನ್ನುಳಿದ 2 ಬಸ್‌ಗಳು ಮುಂಬೈನಲ್ಲಿ ಇರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದೇ ರೀತಿ ಇನ್ನಷ್ಟುಬಸ್‌ಗಳು ಸಂಚರಿಸುತ್ತಿರಬಹುದೆಂಬ ಶಂಕೆಯಲ್ಲಿ ಪೊಲೀಸರು ಬಲೆ ಬೀಸಿದ್ದಾರೆ.

ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್‌, ಮೋಟಾರು ವಾಹನ ನಿರೀಕ್ಷಕರಾದ ಎಂ.ಎನ್‌.ಸುಧಾಕರ್‌, ಹಿರಿಯ ಮೋಟಾರ್‌ ವಾಹನ ನಿರೀಕ್ಷಕರಾದ ಎಚ್‌.ರಾಜಣ್ಣ, ಜೀ.ವಿ.ಕೃಷ್ಣಾನಂದ ಹಾಗೂ ಎಂ.ಶಿವಪ್ರಸಾದ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.