ಅಮೂಲ್‌ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡಿದಲ್ಲಿ ರಾಜ್ಯದ ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ ಗೂಳಿಗೌಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಡ್ಯ : ಅಮೂಲ್‌ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡಿದಲ್ಲಿ ರಾಜ್ಯದ ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ ಗೂಳಿಗೌಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕೆಎಂಎಫ್‌ ಹಾಗೂ ಅದರಡಿ ಬರುವ ಎಲ್ಲ ಒಕ್ಕೂಟಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಅಮೂಲ್‌ ಜೊತೆ ವಿಲೀನ ಅಥವಾ ಒಪ್ಪಂದ ಮಾಡಿಕೊಳ್ಳಬಾರದು ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನಿಲುವು ವ್ಯಕ್ತಪಡಿಸಿದ್ದಾರೆ.

ಅಮೂಲ್‌ ಹಾಲಿನ ಉತ್ಪನ್ನಗಳನ್ನು ರಾಜ್ಯಕ್ಕೆ ತರುತ್ತಿರುವುದನ್ನು ನೋಡಿದರೆ ಭವಿಷ್ಯದಲ್ಲಿ ಅಮುಲ್‌ ಜೊತೆ ಕೆಎಂಎಫ್‌ ವಿಲೀನಗೊಳಿಸುವ ಮುನ್ಸೂಚನೆಯಂತೆ ಕಂಡುಬರುತ್ತಿದೆ. ಈ ಪ್ರಕ್ರಿಯೆಯಿಂದ ನಮ್ಮ ರಾಜ್ಯದ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ರೈತರ ಅಸ್ಮಿತೆಗೆ ಹೊಡೆತ ಬೀಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಎಂಎಫ್‌ ರಾಜ್ಯದ ಹೆಮ್ಮೆಯ ಸಂಸ್ಥೆ. ಲಕ್ಷಾಂತರ ಕೃಷಿಕರು, ಕೃಷಿ ಕೂಲಿಕಾರರ ಬದುಕಿಗೆ ಈ ಸಂಸ್ಥೆ ಬೆಳಕಾಗಿದೆ. ಹಾಲನ್ನು ಖರೀದಿಸುವ ಮೂಲಕ ಹೈನುಗಾರಿಕೆಗೆ ಪೋ›ತ್ಸಾಹ ನೀಡುತ್ತಿದೆ. ಈ ಮೂಲಕ ಕೃಷಿಗೂ ಸಹಕಾರಿಯಾಗಿದೆ. ಮಾತ್ರವಲ್ಲ, ರಾಜ್ಯದ ಕೋಟ್ಯಂತರ ಜನರ ಹಾಲು ಹಾಗೂ ಹಾಲಿನ ಬೇಡಿಕೆಗಳನ್ನು ಈಡೇರಿಸುತ್ತಿದೆ. ಅಲ್ಲದೆ, ಜನರಿಗೆ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ನೀಡುವ ಮೂಲಕ ಹೊರ ರಾಜ್ಯಗಳಲ್ಲೂ ಪ್ರಸಿದ್ಧವಾಗಿದೆ ಎಂದಿದ್ದಾರೆ.

ಕೆಎಂಎಫ್‌ನಿಂದ ರಾಜ್ಯದ ಲಕ್ಷಾಂತರ ಕೃಷಿಕರು, ಕೃಷಿ ಕೂಲಿಕಾರರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ತಿಂಗಳ ಜೀವನ ನಿರ್ವಹಣೆಗೆ ಹಾಲು ಮಾರಾಟದ ಹಣ ನೆರವಾಗುತ್ತಿದೆ. ಇದರಿಂದ ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ದೊರೆಯಲು ಕೆಎಂಎಫ್‌ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಈಗ ಏಕಾಏಕಿ ಮಾರುಕಟ್ಟೆಗೆ ಅಮುಲ್‌ ಹಾಲು ಮತ್ತು ಮೊಸರು ಪ್ರವೇಶ ಮಾಡಿದರೆ ಇದರಿಂದ ರಾಜ್ಯದ ಹೈನುಗಾರಿಕೆæಗೆ ಹೊಡೆತ ಬೀಳಲಿದೆ. ಮಂಡ್ಯ ಜಿಲ್ಲೆಯಲ್ಲಂತೂ ಹೈನುಗಾರಿಕೆಯನ್ನೇ ನಂಬಿಕೊಂಡು ರೈತರು ಜೀವನ ಸಾಗಿಸುತ್ತಿದ್ದಾರೆ. ಈಗ ಅಭಿವೃದ್ಧಿ, ಪೈಪೋಟಿ ಹೆಸರಿನಲ್ಲಿ ಇಂತಹ ಕ್ರಮಗಳನ್ನು ಕೈಗೊಂಡರೆ ರೈತರ ಜೀವನಕ್ಕೆ ಕೊಳ್ಳಿ ಇಟ್ಟಂತಾಗುವುದು. ಹೀಗಾಗಿ ಇಂತಹ ಯಾವುದೇ ಪ್ರಯತ್ನಗಳಿಗೂ ಅವಕಾಶವನ್ನು ಮಾಡಿಕೊಡಬಾರದು ಎಂದು ದಿನೇಶ್‌ ಗೂಳಿಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಮೂಲ್ ನಂದಿನಿ ವಿಲೀನ ಇಲ್ಲ

ವಿಧಾನ ಪರಿಷತ್‌(ಫೆ.22):  ಕೆಎಂಎಫ್‌ನ ‘ನಂದಿನಿ ಬ್ರ್ಯಾಂಡ್‌’ ಅನ್ನು ಅಮೂಲ್‌ ಜತೆಗೆ ವಿಲೀನಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಮಂಗಳವಾರ ವಿಧಾನಷರಿಷತ್ತಿನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಅವರು, ‘ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ ಅನ್ನು ಅಮೂಲ್‌ ಜತೆಗೆ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿಲೀನಗೊಳಿಸುವಂತೆ ಹೇಳಿಲ್ಲ. ಹೆಚ್ಚು ಬೇಡಿಕೆಯಿರುವ ಕಡೆ ಏಕರೂಪದ ಬ್ರ್ಯಾಂಡ್‌ ಮಾರಾಟದ ಬಗ್ಗೆ ಮಾತನಾಡಿದ್ದರು. ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಹೀಗಾಗಿ ಈ ಬ್ರ್ಯಾಂಡ್‌ ಅನ್ನು ಅಮೂಲ್‌ ಜತೆಗೆ ವಿಲೀನಗೊಳಿಸುವುದಿಲ್ಲ’ ಎಂದು ವಿರೋಧ ಪಕ್ಷಗಳಿಗೆ ಸ್ಪಷ್ಟಪಡಿಸಿದರು.

KMF, ಅಮುಲ್ ವಿಲೀನ ಇಲ್ಲ: ಸಿದ್ದರಾಮಯ್ಯ, ಎಚ್ಡಿಕೆ ವಿರುದ್ದ ಅಶ್ವತ್ಥ್‌ನಾರಾಯಣ್ ಗರಂ

ಈ ವೇಳೆ ಜೆಡಿಎಸ್‌ ಸದಸ್ಯ ಟಿ.ಎ.ಶರವಣ ಮಾತನಾಡಿ, ಎಚ್‌.ಡಿ.ರೇವಣ್ಣ ಅವರು ಕೆಎಂಎಫ್‌ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ‘ರೇವಣ್ಣ ಕಣ್ಣು ಬಿಡುವುದಕ್ಕೂ ಮುಂಚೆ ನಾನು ಐದೂವರೆ ವರ್ಷ ಕೆಎಂಎಫ್‌ ಅಧ್ಯಕ್ಷನಾಗಿದ್ದೆ. ಎರಡು ವರ್ಷ ಅಧ್ಯಕ್ಷರಾಗಿದ್ದ ಎಚ್‌.ಡಿ.ರೇವಣ್ಣ ಅವರು ಕೆಎಂಎಫ್‌ನ ಹಾಲಿನ ಪೌಡರ್‌ ಘಟಕ, ಫೀಡ್‌ ಘಟಕವನ್ನು ಹಾಸನಕ್ಕೆ ಕೊಂಡೊಯ್ದಿದ್ದೇ ಸಾಧನೆಯಾಗಿದೆ’ ಎಂದು ತಿರುಗೇಟು ನೀಡಿದರು.