Kodagu: ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ, ಸರ್ಕಾರದ ಆದೇಶ ಪ್ರತಿ ಸುಟ್ಟ ಕಾರ್ಮಿಕರು
ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರಿಗೆ ಸರ್ಕಾರವೇ ಮಾರಕ ತಂದೊಡ್ಡಲು ಸಿದ್ದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ವಿವಿಧ ಕಾರ್ಮಿಕರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.1): ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರಿಗೆ ಸರ್ಕಾರವೇ ಮಾರಕ ತಂದೊಡ್ಡಲು ಸಿದ್ದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ವಿವಿಧ ಕಾರ್ಮಿಕರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಕಾರ್ಮಿಕರು, ಕಾರ್ಮಿಕ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ದಿನದ ಕೆಲಸದ ಅವಧಿಯನ್ನು 3 ಗಂಟೆ ಹೆಚ್ಚಳ ಮಾಡಿರುವುದು ಕಾರ್ಮಿಕರನ್ನು ಶೋಷಣೆಗೆ ಒಳಪಡಿಸಿ ಬಂಡವಾಳಗಾರರ ಲಾಭ ಹೆಚ್ಚಳಕ್ಕೆ ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರವು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಆದೇಶದ ಪ್ರತಿಯನ್ನು ಸುಟ್ಟ ಕಾರ್ಮಿಕ ಮುಖಂಡರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭ ಕಾರ್ಮಿಕ ಮುಖಂಡ ಪಿ.ಆರ್ ಭರತ್ ಅವರು ಮಾತನಾಡಿ ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿದೆ. ಅಲ್ಲದೆ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ - 1948ಕ್ಕೆ ತಿದ್ದುಪಡಿ ಮಾಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ನ್ನು ರಾಜ್ಯ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಮಾಡಿರುವುದು ಕಾರ್ಮಿಕ ವಿರೋಧಿಯಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಬಂಡವಾಳಗಾರರನ್ನು ಓಲೈಸುವ ಕ್ರಮವಾಗಿದೆ.
ಸಿಐಟಿಯು, ಕರ್ನಾಟಕ ರಾಜ್ಯ ಸಮಿತಿ ಈ ತಿದ್ದುಪಡಿ ವಿಧೇಯಕವನ್ನು ತೀವ್ರವಾಗಿ ವಿರೋಧಿಸುತ್ತದೆ. ಕೂಡಲೇ ಈ ವಿಧೇಯಕವನ್ನು ವಾಪಸ್ಸು ಪಡೆಯಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪ್ರಸ್ತುತ ಕಾಯ್ದೆಯಲ್ಲಿ ದಿನದ ಕೆಲಸದ ಅವಧಿಯ ಆರಂಭದಿಂದ ಗರಿಷ್ಠ 5 ಗಂಟೆಗೆ 30 ನಿಮಿಷ ವಿರಾಮವನ್ನು ನೀಡಬೇಕು.
ಕೊಡಗು: ಸರ್ಕಾರದ ಸೌಲಭ್ಯ ದುರ್ಬಳಕೆಗಾಗಿ ಬೋಗಸ್ ಕಾರ್ಮಿಕ ಕಾರ್ಡು!
ಆದರೆ ಈ ತಿದ್ದುಪಡಿ ವಿಧೇಯಕದಲ್ಲಿ ವಿರಾಮವಿಲ್ಲದೆ ದುಡಿಮೆ ಮಾಡುವ ಅವಧಿ ಗರಿಷ್ಠ 5 ಗಂಟೆಯಿಂದ 6 ಗಂಟೆಗೆ ಹೆಚ್ಚಿಸಿರುವುದು ಹಾಗೂ ಕಾರ್ಮಿಕರ ದಿನದ ಕೆಲಸದ ಗರಿಷ್ಠ ಅವಧಿ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವುದು ಕಾರ್ಮಿಕರ ಶೋಷಣೆಗೆ ಮತ್ತಷ್ಟು ಅವಕಾಶ ಕಲ್ಪಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಧೋರಣೆಯನ್ನು ಸಿಐಟಿಯು ಖಂಡಿಸುತ್ತದೆ ಎಂದರು. ಪ್ರಸ್ತುತ ಉದ್ಯೋಗದ ಕಡಿತ, ಕಡಿಮೆ ವೇತನಕ್ಕೆ ದುಡಿಮೆ, ಅಧಿಕ ಉತ್ಪಾದನೆ ಮಾಡಿಸಿಕೊಳ್ಳುವುದು ಹೆಚ್ಚಾಗಿದೆ.
ಬೆಂ-ಮೈ ಹೆದ್ದಾರಿ: ಬೆಂಗಳೂರು- ನಿಡಗಟ್ಟದವರೆಗೂ ಟೋಲ್ ಸಂಗ್ರಹ, ಪ್ರತಾಪ್ ಸಿಂಹ
ಈ ತಿದ್ದುಪಡಿಗಳು ಕಾರ್ಮಿಕರ ಮೇಲೆ ವಿರಾಮವಿಲ್ಲದೆ. ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡ, ಶೋಷಣೆ ಹೆಚ್ಚಿಸಲಿದೆ. ಹಲವು ಕಾರ್ಖಾನೆಗಳ ಮಾಲಿಕರಿಗೆ 6 ದಿನಗಳಲ್ಲಿ ಉತ್ಪಾದನೆ ಆಗುತ್ತಿದದ್ದು 4 ದಿನಗಳಲ್ಲೇ ಉತ್ಪಾದನೆ ಕಾರ್ಮಿಕರ ಶ್ರಮದ ಶೋಷಣೆಯಿಂದ ಸಿಗಲಿದೆ. ಮೂರು ಶಿಫ್ಟ್ ಗಳಿಗೆ ಒದಗಿಸ ಬೇಕಾದ ಸಾರಿಗೆ ಸೌಲಭ್ಯ ಹಾಗೂ ಕ್ಯಾಂಟೀನ್ ಮತ್ತು ಇನ್ನಿತರ ಸೌಲಭ್ಯಗಳನ್ನು ಉಳಿಸಲು ಇದು ಅವಕಾಶ ಕಲ್ಪಸುತ್ತದೆ. ಚಾರಿತ್ರಿಕ 8 ಗಂಟೆ ಕೆಲಸ 8 ಗಂಟೆ ವಿರಾಮ ಮತ್ತು 8 ಗಂಟೆ ಮನೋರಂಜನೆ ಎಂಬ ಜೀವಪರ ತಾತ್ವಿಕ ನೆಲೆಯನ್ನು ಕಳಚಿ ಹಾಕಿ ಬಂಡವಾಳಕ್ಕೆ ಲಾಭ ಮಾಡಿಕೊಡುವ ನವಉದಾರವಾದಿ ಆರ್ಥಿಕ ನೀತಿಯ ಜಾರಿಯ ನಿಟ್ಟಿನಲ್ಲಿ ಬಿಜೆಪಿ ಸರ್ಕಾರವು ಈ ತಿದ್ದುಪಡಿಗೆ ಕ್ರಮ ವಹಿಸಿದೆ ಎಂದರು.