ಬೆಂಗಳೂರು(ಜು.19): ನಗರದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಿಬಿಎಂಪಿ ಚಿತಾಗಾರದ ಮುಂದೆ ಶವಸಂಸ್ಕಾರಕ್ಕೆ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಪ್ರತಿದಿನ ಕೊರೋನಾ ಸೋಂಕಿನಿಂದ ಸುಮಾರು 70ಕ್ಕೂ ಹೆಚ್ಚು ಮಂದಿ ಮೃತ ಪಡುತ್ತಿದ್ದಾರೆ. ಅದರೊಂದಿಗೆ ಸಾಮಾನ್ಯ ಆರೋಗ್ಯ ಸಮಸ್ಯೆ ಹಾಗೂ ಸಹಜ ಸಾವಿಗೆ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಮೃತಪಡುವ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಚಿತಾಗಾರದ ಮುಂದೆ ಸಾರ್ವಜನಿಕರು ಅಂತ್ಯಕ್ರಿಯೆಗೆ ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಸ್ಕಾಂ 8 ಸಿಬ್ಬಂದಿಗೆ ಸೋಂಕು, 1912 ಸಹಾಯವಾಣಿ ಸಿಗಲ್ಲ, ಈ ನಂಬರ್‌ಗೆ ವಾಟ್ಸಾಪ್ ಮಾಡಿ

ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ 12 ಚಿತಾಗಾರದಲ್ಲಿ ಪ್ರತಿ ದಿನಕ್ಕೆ ಸುಮಾರು 80 ಮೃತ ದೇಹಗಳ ಅಂತ್ಯ ಸಂಸ್ಕಾರಕ್ಕೆ ಬುಕ್ಕಿಂಗ್‌ ಆಗುತ್ತಿವೆ. ಅದರ ಜೊತೆಗೆ ವಿವಿಧ ಸ್ಮಶಾನದಲ್ಲಿ ಸಹ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಆದರೂ ಬಿಬಿಎಂಪಿಯ ಚಿತಾಗಾರದ ಮುಂದೆ ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಚಿತಾಗಾರದಲ್ಲಿ ಒಂದು ಶವ ಸಂಸ್ಕಾರಕ್ಕೆ 1ರಿಂದ ಒಂದುವರೆ ಗಂಟೆ ಸಮಯ ಬೇಕು.

ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದ ರೋಗಿ

ಈ ಕುರಿತು ಪ್ರತಿಕ್ರಿಯೆ ನೀಡಿದ ವಿಶೇಷ ಆಯುಕ್ತ ಡಿ.ರಂದೀಪ್‌, ಬಿಬಿಎಂಪಿಯ 12 ಚಿತಾಗಾರದಲ್ಲಿ ಕೊರೋನಾ ಸೋಂಕಿತರ ಮೃತದೇಹ ಅಂತ್ಯಕ್ರಿಯೆಗೆ ಸೂಚನೆ ನೀಡಲಾಗಿದೆ. ಅಲ್ಲದೇ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಸಮಯ ನಿಗದಿ ಪಡಿಸಲಾಗಿದೆ. ಸಮಯ ಹೆಚ್ಚಳದ ಕುರಿತು ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.