ಬೆಂಗಳೂರು(ಫೆ.18): ಟ್ವಿಟ್ಟರ್ ಯುವಕ, ಯುವತಿಯರ ನೆಚ್ಚಿನ ಸಾಮಾಜಿಕ ಜಾಲತಾಣ. ಹೇಳಬೇಕಾದ್ದನ್ನು ಇಂತಿಷ್ಟೇ ಪದಗಳಲ್ಲಿ ಹೇಳುವ ಕಲೆ ಗೊತ್ತಿದ್ದವರಿಗಂತೂ ಟ್ವಿಟ್ಟರ್ ‘ನೆಕ್ಸ್ಟ್ ಟು ಗಾಡ್’ ಇದ್ದಂತೆ.

ಇದು ಸಾಮಾಜಿಕ ಜಾಲತಾಣಗಳ ಯುಗ. ಧಾವಂತದ ಬದುಕಲ್ಲಿ ಇಷ್ಟುದ್ದದ ಕತೆಗಳನ್ನು ಹೇಳಲು ಸಮಯ ಯಾರ ಬಳಿ ಇದೆ ಹೇಳಿ ನೋಡೋಣ. ಅದಕ್ಕೆ ಟ್ವಿಟ್ಟರ್ ಬಳಿ ಉತ್ತರವಿದ್ದು, ಶಾರ್ಟ್ ಆ್ಯಂಡ್ ಸ್ವೀಟ್ ಆಗಿ ಏನು ಬೇಕಾದ್ರೂ ಹೇಳಿ ಅಂತಾ ಮುಗುಳ್ನಗುತ್ತದೆ.

ಅದರಂತೆ ಭಾರತದಲ್ಲೂ ಕೋಟ್ಯಂತರ ಜನ ಟ್ವಿಟ್ಟರ್ ಬಳಸುತ್ತಿದ್ದು, ತನ್ನ ಪ್ರಮುಖ ಮಾರುಕಟ್ಟೆಯಾದ ಭಾರತದಲ್ಲಿ ‘ಟ್ವಿಟ್ಟರ್ ಇಂಡಿಯಾ’ ಹೌದು ಎನ್ನುವಂತ ಸಾಧನೆ ಮಾಡಿರುವುದು ಖಚಿತ.

ವಿಷ್ಯ ಟ್ವಿಟ್ಟರ್’ದಲ್ಲ ಬಿಡಿ. ಹೇಳಬೇಕಿರುವ ಅಸಲಿ ವಿಷ್ಯ ಏನಂದ್ರೆ, ಟ್ವಿಟ್ಟರ್ ಇಂಡಿಯಾ ಅಕೌಂಟ್’ಗೆ ಇಂದು ಕನ್ನಡ ನೆನಪಾಗಿದೆ. ಅದೇಕೊ ಏನೋ ‘ಏನ್ ಸಮಾಚಾರಾ..’ ಅಂತಾ ಕನ್ನಡದಲ್ಲಿ ಟ್ವೀಟ್ ಮಾಡಿದೆ.

ಹೌದು, ಟ್ವಿಟ್ಟರ್ ಇಂಡಿಯಾ ಅಕೌಂಟ್’ನಲ್ಲಿ ಇವತ್ತು ಕನ್ನಡ ಮಾರ್ಧನಿಸಿದ್ದು, ‘ಏನ್ ಸಮಾಚಾರಾ..’ ಎಂದು ಟ್ವೀಟ್ ಮಾಡುವ ಮೂಲಕ ಟ್ವಿಟ್ಟರ್ ಇಂಡಿಯಾ ತನ್ನ ಕನ್ನಡ ಗ್ರಾಹಕರನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡಿದೆ.

ಟ್ವಿಟ್ಟರ್ ಇಂಡಿಯಾದ ‘ಏನ್ ಸಮಾಚಾರಾ ಟ್ವೀಟ್’ಗೆ ಕನ್ನಡಿಗರು ಫಿದಾ ಆಗಿದ್ದು, ಅಸಂಖ್ಯ ಲೈಕ್’ಗಳು, ರಿಟ್ವೀಟ್’ಗಳ ಸುರಿಮಳೆಯಾಗುತ್ತಿದೆ. ಟ್ವಿಟ್ಟರ್’ನಲ್ಲಿ ಕನ್ನಡ ಬಳಸಿ  ಅಂತಾ ಹತ್ತಾರು ವರ್ಷಗಳಿಂದ ಬೊಂಬಡ ಬಜಾಯಿಸಿದ ಕನ್ನಡ ನಾಲಗೆಗಳಿಗೆ ಈ ಸಮಾಚಾರ ಖುಷಿ ಕೊಟ್ಟಿರಲಿಕ್ಕೂ ಸಾಕು.