Bellary Utsav 2023: ಬಳ್ಳಾರಿ ಉತ್ಸವದಲ್ಲಿ ಮೈನವಿರೇಳಿಸಿದ ಬೈಕ್‌ಸ್ಟಂಟ್
ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವದಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಿದ್ದ ಬೈಕ್‌ಸ್ಟಂಟ್ ನೋಡುಗರ ಮೈನವಿರೇಳಿಸುವಂತಿತ್ತು. ಸುಮಾರು ಒಂದು ಗಂಟೆಗಳ ಕಾಲ ಜನ ಮಂತ್ರಮುಗ್ದರಾಗಿ ಬೈಕ್ ಸ್ಟಂಟ್‌ಗಳನ್ನು ನೋಡಿ ಸಂಭ್ರಮಿಸಿದರು.
ರಾಮು ಅರಕೇರಿ
ಬಳ್ಳಾರಿ (ಜ.22) : ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವದಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಿದ್ದ ಬೈಕ್‌ಸ್ಟಂಟ್ ನೋಡುಗರ ಮೈನವಿರೇಳಿಸುವಂತಿತ್ತು. ಸುಮಾರು ಒಂದು ಗಂಟೆಗಳ ಕಾಲ ಜನ ಮಂತ್ರಮುಗ್ದರಾಗಿ ಬೈಕ್ ಸ್ಟಂಟ್‌ಗಳನ್ನು ನೋಡಿ ಸಂಭ್ರಮಿಸಿದರು.
ಮೂರು ತಂಡಗಳ ರೋಮಾಂಚಿತ ಪ್ರದರ್ಶನ:
ಅಕಿ ಡಿ ಹಾಟ್ ಫಿಸ್ಟೋಂಜ್ ಉಡುಪಿಯ 3 ಹಾಗೂ ಅದೇ ತಂಡದ ಗೋವಾ ಮೂಲದ ಇಬ್ಬರು. ಬಳ್ಳಾರಿ ನೋಪಾಸನಾ ಸಂಸ್ಥೆಯ 6 ಜನ ಸೇರಿ ಭಿನ್ನಭಿನ್ನವಾದ ಸ್ಟಂಟ್‌ಗಳ ಪ್ರದರ್ಶನ ಮಾಡಿದರು. ಮಾರ್ಚಿಂಗ್, ಸೆಲ್ಯೂಟ್, ಫಿರಾಮಿಡ್, ಅಪೋಸಿಟ್ ಪಾಸ್, ವ್ಹೀಲಿ, ಸ್ಟಾಪಿ, ಸ್ಟ್ಯಾಂಡಿಂಗ್, ರಿವರ್ಸ್, ಫೈರ್‌ರಿಂಗ್ ಸೇರಿದಂತೆ ಹಲವು ಪ್ರಕಾರದ ಸ್ಟಂಟ್‌ಗಳ ಪ್ರದರ್ಶನ ನೋಡುಗರನ್ನು ಮೈ ಮರೆಯುಂತೆ ಮಾಡಿತ್ತು. ಕ್ಷಣಕ್ಷಣಕ್ಕೂ ಜನ ಕೂಗು ಹಾಕಿ ಸ್ಟಂಟ್‌ಪಟುಗಳನ್ನು ಉತ್ತೇಜಿಸಿದ್ದು ಪ್ರದರ್ಶನಕ್ಕೆ ಮತ್ತಷ್ಟುರಂಗು ತಂದಿತ್ತು.
ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ, ಮುಖ್ಯ ಬೀದಿಗಳಲ್ಲಿ ರಂಗೋಲಿ ಚಿತ್ತಾರ
ಸುಮಾರು 10.30ಕ್ಕೆ ಆರಂಭವಾದ ಪ್ರದರ್ಶನ 11.30ರ ವರೆಗೆ ಜನರನ್ನು ಹಿಡಿದಿಟ್ಟಿತ್ತು. ಜಿಲ್ಲಾಡಳಿತ ಭನವದ ಮುಂದಿನ ಸೀಮಿತ ಜಾಗೆಯಲ್ಲಿ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು ವಿಶೇಷವಾಗಿತ್ತು. ನೋಪಾಸನ ಸಂಸ್ಥೆಯ ಶಕೀಬ್ ತಂಡದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸವಾರರು ರಾಷ್ಟ್ರಧ್ವಜ ಹಿಡಿದು ನಡೆಸಿದ ಸೆಲ್ಯೂಟ್ ನಿಜಕ್ಕೂ ಜನರನ್ನು ಅಭಿಮಾನದಿಂದ ಕೇಕೆ ಹಾಕುವಂತೆ ಮಾಡಿತ್ತು.
ಬಳ್ಳಾರಿಯ ನೋಪಾಸನಾ ಸಂಸ್ಥೆಯ ಸಾಂಪ್ರದಾಯಿಕ ಪ್ರದರ್ಶನ ಎನ್‌ಫೀಲ್ಡ್ ಬೈಕ್ ಪ್ರೇಮಿಗಳನ್ನು ಉತ್ತೇಜಿಸಿದ್ದರೆ, ಉಡುಪಿ ಹಾಗೂ ಗೋವಾಪಟುಗಳ ಕೆಟಿಎಂ ಹಾಗೂ ಆರ್15 ಬೈಕ್‌ಗಳ ಸ್ಟಂಟ್ ಯುವಕರನ್ನು ಹುಚ್ಚೆದ್ದು ಕುಣಿಯುಂತೆ ಮಾಡಿತು.
ಸಣ್ಣ ಸ್ಥಳ, ಕಡಿಮೆ ಪ್ರೇಕ್ಷಕರು:
ಜಿಲ್ಲಾಡಳಿತ ಭವನದ ಮುಂದಿನ ಸ್ಥಳ ಬೈಕ್ ಸ್ಟಂಟ್‌ಗೆ ತೀರಾ ಚಿಕ್ಕದು ಎನ್ನುವಂತಿತ್ತು. ಮಾಹಿತಿ ಕೊರತೆಯಿಂದಲೋ ಏನೋ ಜನರೂ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಸೇರಿರಲಿಲ್ಲ. ಕೆಲ ಪೋಸ್ಟರ್‌ಗಳಲ್ಲಿ ಬಳ್ಳಾರಿ ಕೋಟೆ ಆವರಣದಲ್ಲಿ ಬೆಳಗಿನ 8 ಗಂಟೆಗೆ ನಡೆಯಲಿದೆ ಎಂದು ಪ್ರಚಾರವಾಗಿದ್ದು ಸಹ ಪ್ರೇಕ್ಷಕರ ಕೊರತೆಗೆ ಒಂದು ಕಾರಣ. ಕಾರ್ಯಕ್ರಮವು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿಯವರ ಉಪಸ್ಥಿತಿಯಲ್ಲಿ ಆರಂಭವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಾರ್ಯಕ್ರಮ ಆರಂಭವಾದ ಅರ್ಧಗಂಟೆ ನಂತರ ಆಗಮಿಸಿ ಕೆಲವೇ ನಿಮಿಷಗಳ ಕಾಲ ಉಪಸ್ಥಿತರಿದ್ದು ನಿರ್ಗಮಿಸಿದರು. ಕೆಲವರು ಕಾರ್ಯಕ್ರಮದ ಕೊನೆ ಘಟ್ಟದ ಒಂದೆರಡು ಪ್ರದರ್ಶನಗಳನ್ನು ನೋಡಿ ಪುಳಕಗೊಂಡರೆ ಇನ್ನೂ ಕೆಲವರು ಕಾರ್ಯಕ್ರಮ ಮುಗಿದ ಮೇಲೆ ಹಿಂತಿರುಗಿದರು. ಒಂದು ಸುಸಜ್ಜಿತ ಮೈದಾನದಲ್ಲಿ ಬೈಕ್ ಸ್ಟಂಟ್ ಆಯೋಜನೆ ಮಾಡಿದ್ದರೆ ಮತ್ತಷ್ಟುಆಕರ್ಷಣೀಯವಾಗಿರುತ್ತಿತ್ತು ಎಂದು ನೆರೆದವರು ಮಾತಾಡಿಕೊಳ್ಳುತ್ತಿದ್ದರು.
ಗಣಿ ಧಣಿಗಳಿಗೆ ಮಾತ್ರವಲ್ಲ- ಸಾಮಾನ್ಯರಿಗೂ ಹೆಲಿಕಾಪ್ಟರ್ ಹತ್ತುವ ಭಾಗ್ಯ: ಬಳ್ಳಾರಿಯ ಬೈ-ಸ್ಕೈ ಸೇವೆ
ನೋಪಾಸನಾ ಸಂಸ್ಥೆಯ ನೇತೃತ್ವದಲ್ಲಿ ಬೈಕ್ ಸ್ಟಂಟ್ ಆಯೋಜನೆ ಮಾಡಲಾಗಿದೆ. ಬೇರೆ ಜಿಲ್ಲೆ ,ರಾಜ್ಯದ ತಂಡಗಳು ಭಾಗವಹಿಸಿರುವುದರಿಂದ ಪ್ರೇಕ್ಷಕರ ಕುತೂಹಲ ಹೆಚ್ಚಿದೆ. ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ಮಾಡಿಕೊಟ್ಟು ಇಲ್ಲಿನ ಯುವಕರಿಗೂ ಪ್ರೇರಣೆ ನೀಡಲಾಗಿದೆ. ಏರ್ ಪೋರ್ಚ್‌ನಲ್ಲಿ ಆಯೋಜಿಸಿದ್ದರೆ ಸ್ಥಳಾವಕಾಶ ಹೆಚ್ಚು ಸಿಗುತ್ತಿತ್ತು. ಹೊಸ ಟಾರ್ ರೋಡ್ ಇರುವುದರಿಂದ ಇಲ್ಲಿಯೇ ಮಾಡಲಾಗಿದೆ.
-ಶಕೀಬ್, ನಿರ್ದೇಶಕರು ನೋಪಾಸನಾ ಸಂಸ್ಥೆ.ಬಳ್ಳಾರಿ
ಬೈಕ್ ಸ್ಟಂಟ್‌ಗಳ ಕುರಿತು ನಮಗೆ ಬಹಳ ಕುತೂಹಲವಿತ್ತು. ಗೋವಾ,ಬೆಂಗಳೂರು, ಮೈಸೂರುಗಳಲ್ಲಿ ನಡೆಯುತ್ತಿದ್ದ ಬೈಕ್ ಸ್ಟಂಟ್ ವಿಡಿಯೋ ನೋಡಿ ಖುಷಿ ಪಡ್ತಾ ಇದ್ವಿ. ಬಳ್ಳಾರಿ ಉತ್ಸವದಲ್ಲೇ ನೇರವಾಗಿ ನೋಡುವ ಭಾಗ್ಯ ಸಿಕ್ಕಿದ್ದು ತುಂಬಾ ಖುಷಿ ನೀಡಿದೆ. ನನ್ನಂತೆ ಅನೇಕ ಯುವಕರು ಇದರಿಂದ ಇನ್ಸ್‌ಪೈರ್ ಆಗಿದ್ದಾರೆ.
ಸಾಯಿ ಪ್ರಕಾಶ್, ಬೈಕ್ ಸ್ಟಂಟ್ ಪ್ರಿಯ.ಬಳ್ಳಾರಿ