ವಿಜಯಪುರ(ನ.24): ಬಿಜೆಪಿ ನಗರ ಘಟಕದ ಅಧ್ಯಕ್ಷ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಶನಿವಾರ ನಡೆದ ಪಕ್ಷದ ಸಭೆಯಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದ್ದು, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ.

ಬಿಜೆಪಿ ನಗರ ಘಟಕ ಅಧ್ಯಕ್ಷರಾಗಿ ಮಳುಗೌಡ ಪಾಟೀಲ ನೇಮಕಕ್ಕೆ ಯತ್ನಾಳ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದೇ ಉಭಯ ನಾಯಕರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿದೆ. ಬಿಜೆಪಿ ನಗರ ಘಟಕದ ಅಧ್ಯಕ್ಷ ಸ್ಥಾನ ನೇಮಕದ ವಿಷಯದಲ್ಲಿ ಯಾವುದೇ ಸಭೆ ನಡೆಸಿಲ್ಲ. ನಾಯಕರು ಹಾಗೂ ಕಾರ್ಯಕರ್ತರನ್ನು ವಿಚಾರಿಸಿಲ್ಲ. ದಿಢೀರನೆ ಏಕಪಕ್ಷೀಯವಾಗಿ ಮಳುಗೌಡ ಹೆಸರು ಘೋಷಿಸಿ, ನೇಮಕ ಮಾಡಲಾಗಿದೆ ಎಂದು ಶಾಸಕ ಯತ್ನಾಳ ಬೆಂಬಲಿಗರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರ ಶಾಸಕರ ಗಮನಕ್ಕೆ ತರದೇ ನಗರ ಮಂಡಲ ಅಧ್ಯಕ್ಷರ ನೇಮಕ ಮಾಡುವುದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮೇಲಾಗಿ ಸರ್ವಸಮ್ಮತ ಅಭ್ಯರ್ಥಿಯೂ ಅಲ್ಲ ಎಂದು ಯತ್ನಾಳ ಬೆಂಬಲಿಗ ಗುರು ಗಚ್ಚಿನಮಠ ಸೇರಿದಂತೆ ಮತ್ತಿತರರು ಆರೋಪಿಸಿದರು. ಈ ವೇಳೆ ಅಲ್ಲಿಯೇ ಹಾಜರಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಬೆಂಬಲಿಗರು, ಯತ್ನಾಳ ಬೆಂಬಲಿಗರ ಆರೋಪ ನಿರಾಕರಿಸಿದರು. ಆಗ ಯತ್ನಾಳ ಹಾಗೂ ಪಟ್ಟಣಶೆಟ್ಟಿಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಾಜಿ ಸಚಿವ ಪಟ್ಟಣಶೆಟ್ಟಿ ಹಾಗೂ ಇತರೆ ಮುಖಂಡರ ಎದುರಲ್ಲೇ ವಾಗ್ವಾದ ನಡೆಯಿತು. ಆನಂತರ ಉಭಯ ಗುಂಪಿನ ಕಡೆಯವರು ಪರಸ್ಪರ ಸಮಾಧಾನ ಹೇಳಿ, ಮಾತಿನ ಚಕಮಕಿಗೆ ತೆರೆ ಎಳೆದರು. ಈ ಘಟನೆಯಿಂದ ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಇನ್ನೂ ಇದೆ ಎಂಬುವುದು ಬೆಳಕಿಗೆ ಬಂದಿದೆ.

ಶಾಸಕ ಯತ್ನಾಳ ಬೆಂಬಲಿಗರ ತೀವ್ರ ವಿರೋಧದ ಮಧ್ಯೆಯೇ ವಿಜಯಪುರ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಮಳುಗೌಡ ಪಾಟೀಲ ಆಯ್ಕೆಗೊಂಡರು. ನಗರ ಮಂಡಲ ಅಧ್ಯಕ್ಷ ಸಾನಕ್ಕೆ ಪಕ್ಷದಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಯತ್ನಾಳ ಹಾಗೂ ಪಟ್ಟಣಶೆಟ್ಟಿ ಬೆಂಬಲಿಗರ ಪೈಕಿ ಸಾಕಷ್ಟುಕಾರ್ಯಕರ್ತರು ನಗರ ಮಂಡಲ ಅಧ್ಯಕ್ಷ ಹುದ್ದೆಗೆ ತೀವ್ರ ಹಣಾಹಣಿ ನಡೆಸಿದ್ದರು. ದಿಢೀರನೆ ಮಳುಗೌಡ ಅವರನ್ನು ನೇಮಕ ಮಾಡಿದ್ದಕ್ಕೆ ಶಾಸಕ ಯತ್ನಾಳ ಬೆಂಬಲಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿ ಭಿನ್ನಮತ ಸ್ಫೋಟಗೊಂಡಿದೆ.

ಈ ಹುದ್ದೆ ಆಯ್ಕೆಯಿಂದಾಗಿ ಮಾಜಿ ಸಚಿವ ಪಟ್ಟಣಶೆಟ್ಟಿಬಣದ ಕೈ ಮೇಲಾಯಿತು ಎಂದು ಯತ್ನಾಳ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ಆಯ್ಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಉಭಯ ಬಣಗಳ ಮಧ್ಯೆ ತೀವ್ರ ವಾಗ್ವಾದ ನಡೆಯಿತು.