ಬಾಗಲಕೋಟೆ: ಕಾಂಗ್ರೆಸ್-ಬಿಜೆಪಿ ಸದಸ್ಯರ ವಾಗ್ವಾದ
* ನಗರಸಭೆ ಸಾಮಾನ್ಯ ಸಭೆಯಲ್ಲಿ ಅಂಬೇಡ್ಕರ ಕುರಿತ ಚರ್ಚೆ ಸದ್ದು
* ಅಂಬೇಡ್ಕರ ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ
* ಅಭಿವೃದ್ಧಿಗೆ ಎಲ್ಲರೂ ಒತ್ತು ಕೊಡುವುದು ಮುಖ್ಯ
ಬಾಗಲಕೋಟೆ(ಆ.18): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲವೆಂದು ನಗರಸಭೆಯ ಉಪಾಧ್ಯಕ್ಷ ಬಿಜೆಪಿಯ ಬಸವರಾಜ ಅವರಾದಿ ಹೇಳುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ವಾಗ್ದಾದ ನಡೆದ ಘಟನೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಅವರ ಪುತ್ಥಳಿ ಆವರಣದಲ್ಲಿನ ಉದ್ಯಾನದ ಚರ್ಚೆ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ ಮಧ್ಯೆ ಪ್ರವೇಶಿಸಿ, ಕಾಂಗ್ರೆಸ್ ಪಕ್ಷ ಅಂಬೇಡ್ಕರ ಅವರನ್ನು ಗೌರವದಿಂದ ನಡೆಸಿಕೊಂಡಿಲ್ಲ. ಅವರ ಬಗ್ಗೆ ಮಾತನಾಡಬೇಡಿ ಎಂದು ಕಾಂಗ್ರೆಸ್ ಸದಸ್ಯರಿಗೆ ಹೇಳಿದರು.
ಅವರಾದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಚನ್ನವೀರ ಅಂಗಡಿ, ಹಾಜಿಸಾಬ ದಂಡಿನ, ಲಕ್ಷ್ಮಣ ಮುಚಖಂಡಿ, ಅಂಬೇಡ್ಕರ ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ ಅಭಿವೃದ್ಧಿಗೆ ಎಲ್ಲರೂ ಒತ್ತು ಕೊಡುವುದು ಮುಖ್ಯ ಎಂದರಲ್ಲದೆ ಎಲ್ಲದರಲ್ಲಿಯೂ ರಾಜಕೀಯ ತರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆ ಅವಧಿಗೆ ಸಿಎಂ ಆಗುತ್ತೇನೆ ಎಂದ ಉಮೇಶ್ ಕತ್ತಿ : ಅಚ್ಚರಿ ಮೂಡಿಸಿದ ಹೇಳಿಕೆ
ನಗರದಲ್ಲಿ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದು ನಗರಸಭೆ ಪೌರಾಯುಕ್ತ ಮುನಿಶಾಮಪ್ಪ ಹಾಗೂ ಅಧಿಕಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಸೂಚನೆ ನೀಡಿದರು.
ನವನಗರದ ಸೆಕ್ಟರ್ ನಂ.45ರಲ್ಲಿ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಖಾತೆ ಉತಾರಗಳನ್ನು ಸಹ ಅಧಿಕಾರಿಗಳು ನೀಡುತ್ತಿಲ್ಲ ಎಂದು ಸದಸ್ಯ ಹಾಜಿಸಾಬ ದಂಡಿನ ಸಭೆಯಲ್ಲಿ ಗಮನ ಸೆಳೆದರು.
ಅಧಿಕಾರಿಗೆ ಎಚ್ಚರಿಕೆ:
ಕಾಂಗ್ರೆಸ್ ಸದಸ್ಯ ಹಾಜಿಸಾಬ ದಂಡಿನ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಚರಂತಿಮಠ, ಸದಸ್ಯರ ವಾರ್ಡ್‌ನಲ್ಲಿ ಸಮಸ್ಯೆಗಳು ಇದ್ದರೆ ಅವುಗಳಿಗೆ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಸರಿಯಾಗಿ ಕೆಲಸ ಮಾಡದಿದ್ದರೆ ದಿಟ್ಟಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ 24/7 ಕುಡಿಯುವ ನೀರು ಪೂರೈಕೆ ಹಾಗೂ ನಿರ್ವಹಣೆ ಸರಿಯಾಗಿ ಮಾಡದ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯ ಎಂಜನಿಯರನ್ನು ಶಾಸಕ ಚರಂತಿಮಠ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡು, ತಮಗೆ ವಹಿಸಿದ ಕೆಲಸವನ್ನು ಸರಿಯಾಗಿ ಮಾಡಿ ನಗರ ಸಭೆಗೆ ಹಸ್ತಾಂತರಿಸುವ ಕೆಲಸವನ್ನು ತಕ್ಷಣವೇ ಮಾಡಬೇಕು ಎಂದು ಎಚ್ಚರಿಸಿದರು.
ಖಾತೆ ಉತಾರ ನೀಡಿ:
ಹಿಂದೆ ನಗರಸಭೆ ಪೌರಾಯುಕ್ತರಾಗಿದ್ದ ಗಣಪತಿ ಪಾಟೀಲ ಅವರ ಅವಧಿಯಲ್ಲಿ ನಿಯಮಾವಳಿ ಪ್ರಕಾರ ನಗರದ ಜನತೆಗೆ ಉತಾರ ನೀಡಲಾಗಿತ್ತು. ಈಗ ನಿಯಮಾವಳಿ ಇರುವ ಆಸ್ತಿಗಳ ಉತಾರ ನೀಡಬೇಕು ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಪೌರಾಯುಕ್ತರಿಗೆ ಶಾಸಕರು ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ, ನಗರಸಭೆಯಲ್ಲಿ ದಾಖಲಾದ ಆಸ್ತಿಗಳಿಗೆ ಉತಾರ ನೀಡಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.
ಬುಡಾ ಆಯುಕ್ತ ಗಣಪತಿ ಪಾಟೀಲ, ಸದಸ್ಯರಾದ ಪ್ರಕಾಶ ಹಂಡಿ, ಶ್ರೀನಾಥ ಸಜ್ಜನ, ರಾಜೇಂದ್ರ ಬಳೂಲಮಠ, ಅಯ್ಯಪ್ಪ ವಾಲ್ಮೀಕಿ, ಯಲ್ಲಪ್ಪ ನಾರಾಯಣಿ, ಸಾಗರ ಬಂಡಿ, ರತ್ನಾ ಶರಣಪ್ಪ ಕೆರೂರ, ಸ್ಮೀತಾ ಪವಾರ, ಶಶಿಕಲಾ ಮಜ್ಜಗಿ, ಸುಜಾತ ಸಿಂಧೆ, ಅಧಿಕಾರಿಗಳು ಇದ್ದರು.