Chitradurga; ಶ್ರೀರಾಮುಲು ಆಪ್ತರಿಂದ ST ಸಮುದಾಯದ ಜನರಿಗೆ ವಂಚನೆ ಆರೋಪ
ಸಚಿವ ಶ್ರೀರಾಮುಲು ಆಪ್ತರಿಂದ ST ಸಮುದಾಯದ ಜನರಿಗೆ ವಂಚನೆ ಆರೋಪ. ನೇರ ಸಾಲ, ಉದ್ಯಮಶೀಲತೆ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಕೈ ಸೇರದ ಸಾಲ ಸೌಲಭ್ಯ. ಚಿತ್ರ ನಾಯಕ ವೇದಿಕೆ ಪ್ರಶಾಂತ್ ಗಂಭೀರ ಆರೋಪ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.6): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯದ ಜನರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಅಧಿಕಾರಿಗಳು ಹಾಗೂ ಆಯಾ ಇಲಾಖೆಯ ಸಚಿವರ ಆಪ್ತರಿಂದ ಅನೇಕ ಅರ್ಹ ಫಲಾನುಭವಿಗಳಿಗೆ ಯೋಜನೆ ದೊರೆಯದೇ ಇವರ ಜೇಬು ಸೇರ್ತಿಬೆ ಎಂಬ ಗಂಭೀತ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ಪರಿಶಿಷ್ಟ ವರ್ಗಗಳ ಇಲಾಖೆಯ ಸಚಿವ ಶ್ರೀರಾಮುಲು ಹಾಗೂ ಅವರ ಆಪ್ತರ ವಿರುದ್ದ ಅವರದೇ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ನಡೆಸ್ತಿರೋದು ಬೇರೆಲ್ಲೂ ಅಲ್ಲ ಚಿತ್ರದುರ್ಗದಲ್ಲಿಯೇ ಆಗಿದೆ. ಈಗಾಗಲೇ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕವಾಗಿ ಆ ಇಲಾಖೆಯನ್ನು ರಚಿಸಲಾಗಿದೆ. ಆದ್ರೆ ಅಲ್ಲಿ ಸಿಗಬೇಕಾದ ಫಲಾನುಭವಿಗಳಿಗೆ ಯೋಜನೆಗಳು ಸಿಗದೇ ಹಳ್ಳ ಹಿಡಿಯುತ್ತಿವೆ, ಉಳ್ಳವರ ಜೇಬು ಸೇರುತ್ತಿವೆ ಎಂಬುವ ಗಂಭೀರ ಆರೋಪ ಕೇಳಿ ಬಂದಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 2020-21, 2021-22 ರ ಅವಧಿಯಲ್ಲಿ ನೇರ ಸಾಲ, ಉದ್ಯಮಶೀಲತೆ ಹಾಗೂ T.S.P ಅನುದಾನದ ಅಡಿಯಲ್ಲಿ ಅರ್ಹ ಫಲಾನುಭವಿಗಳು ಯೋಜನೆ ದೊರೆಯುತ್ತಿಲ್ಲ ಎಂದು ಚಿತ್ರ ನಾಯಕ ವೇದಿಕೆ ಸಂಘಟನೆ ಆರೋಪಿಸಿದೆ. ಸುಮಾರು 35 ಕೋಟಿಯಷ್ಟು ಭ್ರಷ್ಟಾಚಾರವನ್ನು ಖುದ್ದು ಶ್ರೀರಾಮುಲು ಅವರ ಆಪ್ತರಾದ ಪಾಪೇಶ್ ನಾಯಕ್, ಹನುಮಂತರಾಯಪ್ಪ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆಯೂ ಈ ಬಗ್ಗೆ ಅನೇಕ ಬಾರಿ ಸಚಿವರ ಗಮನಕ್ಕೆ ತರಲಾಗಿದ್ರು ಯಾವುದೇ ಪ್ರಯೋಜನ ಆಗಿಲ್ಲ. ಆಪ್ತರು ಮಾಡಿರೋ ಇಂತಹ ಕರ್ಮಕಾಂಡಕ್ಕೆ ನೇರ ಹೊಣೆ ಸಚಿವ ಶ್ರೀರಾಮುಲು ಅವರೇ ಆಗಿದ್ದಾರೆ. ಆದ್ದರಿಂದ ಕೂಡಲೇ ಇದಕ್ಕೆ ಉತ್ತರ ನೀಡಬೇಕು. ನಮ್ಮ ಸಮುದಾಯಕ್ಕೆ ಯಾರೇ ಮೋಸ ಮಾಡಿದ್ರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಸಚಿವರು ಅರ್ಹ ಫಲಾನುಭವಿಗಳಿಗೆ ಆಗಿರೋ ಅನ್ಯಾಯವನ್ನು ಸರಿಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಎಸಿಬಿ, ಹಾಗೂ ಲೋಕಾಯುಕ್ತಕ್ಕೆ ಕೊಡುವ ಮೂಲಕ ನಮ್ಮ ಹೋರಾಟ ನಿರಂತರವಾಗಿರುತ್ತೆ ಅಂತಾರೆ ಹೋರಾಟಗಾರರು.
ಇನ್ನೂ ಈ ಗಂಭೀರ ಆರೋಪ ಕುರಿತು ಪರಿಶಿಷ್ಟ ವರ್ಗಗಳ ಇಲಾಖೆಯ ಅಧಿಕಾರಿಯನ್ನ ಕೇಳೋಕ್ ಹೋದ್ರೆ, ಇದು ಕಳೆದ ಇಲಾಖೆಯ ಅಧಿಕಾರಿ ಇದ್ದಂತಹ ಸಮುದಲ್ಲಿ ಆಗಿರುವುದಾಗಿದೆ. ಅದಲ್ಲದೇ ನಮಗೆ ಮೇಲಿಂದ ಸೂಚನೆಯಿದೆ ಯಾವುದೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಈ ಪ್ರಕರಣ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ಇದೆ. ಈ ಕುರಿತು ಡಿಸಿ ಅವರೇ ಉತ್ತರಿಸಲಿದ್ದಾರೆ ಎಂದು ಸಬೂಬು ಹೇಳುತ್ತಾರೆ. ಇನ್ನೂ ಡಿಸಿ ಅವರಂತೂ ಯಾರ ಕೈಗೂ ಸಿಗದಂತಹ ಅಧಿಕಾರಿಗಳು ಆಗಿದ್ದಾರೆ ಎಂದ್ರೆ ತಪ್ಪಾಗಲಿಕ್ಕಿಲ್ಲ.
ಒಟ್ಟಾರೆಯಾಗಿ ಸಚಿವ ಶ್ರೀ ರಾಮುಲು ಅವರ ಆಪ್ತರ ಮೇಲಿನ ಆರೋಪಗಳು ನಿನ್ನೆ ಮೊನ್ನೆಯದಲ್ಲ. ಈ ಮೊದಲು ಅದೇ ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕರಾದ ತಿಪ್ಪೇಸ್ವಾಮಿ ಅವರು ಕೂಡ ಇವರ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಅನೇಕ ಬಾರಿ ತಿಳಿಸಿದ್ದರು. ಆದ್ರು ಇದಕ್ಕೆಲ್ಲಾ ಶ್ರೀರಾಮುಲು ಅವರು ತಲೆ ಕೆಡಿಸಿಕೊಳ್ಳದೇ ನಮ್ಮವರು ಸರಿಯಿದ್ದಾರೆ ಎಂದು ಅಂದುಕೊಳ್ಳುವುದು ಸೂಕ್ತವಲ್ಲ. ಕೂಡಲೇ ಈ ಬಗ್ಗೆ ಅವರೇ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.