Asianet Suvarna News Asianet Suvarna News

ಚುನಾವಣೆ ಗೆಲ್ಲಲು ಕಾಂಗ್ರೆಸ್ ನಾಯಕರ ಅನೈತಿಕ ಹಣ ಸಂಗ್ರಹಣೆ ಆರೋಪ

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಕಾರ್ಖಾನೆಯಾಗಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ನಾಯಕರು ಅನೈತಿಕವಾಗಿ ಹಣ ಸಂಗ್ರಹಣೆ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ದ್ರೋಹ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಹೇಳಿದರು.

Allegation of illegal collection of money by Congress leaders to win elections snr
Author
First Published Dec 12, 2023, 10:25 AM IST | Last Updated Dec 12, 2023, 10:25 AM IST

 ತುಮಕೂರು :  ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಕಾರ್ಖಾನೆಯಾಗಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ನಾಯಕರು ಅನೈತಿಕವಾಗಿ ಹಣ ಸಂಗ್ರಹಣೆ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ದ್ರೋಹ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಹೇಳಿದರು.

ಜಿಲ್ಲಾ ಬಿಜೆಪಿಯಿಂದ ನಗರದ ಟೌನ್ ಹಾಲ್ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸದರೊಬ್ಬರು ಸಂಗ್ರಹಿಸಿದ್ದ 350 ಕೋಟಿ ರು. ಹೆಚ್ಚಿನ ಅಕ್ರಮ ಹಣವನ್ನು ಮೂರು ದಿನಗಳಿಂದ ಎಣಿಕೆ ಮಾಡಿದರೂ ಮುಗಿಯುತ್ತಿಲ್ಲ. ಇಂತಹ ಅನೇಕ ದೊಡ್ಡ ಭ್ರಷ್ಟ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಜನರಿಗೆ ಹಣದ ಆಮಿಷವೊಡ್ಡಿ ಚುನಾವಣೆ ಗೆಲ್ಲಬಹುದೆಂದು ಕಾಂಗ್ರೆಸ್ ನಾಯಕರು ಅನೈತಿಕವಾಗಿ ಹಣ ಸಂಗ್ರಹಿಸುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ನೆರವಾಗಬೇಕಾಗಿದ್ದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ.

ಕೇಂದ್ರ ಸರ್ಕಾರ ನೀಡುವ ಪಡಿತರದಲ್ಲೂ ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಕೇಂದ್ರದ ಯೋಜನೆಗಳು ಜನರಿಗೆ ತಲುಪದಂತೆ ತಡೆಯುವ ಪ್ರಯತ್ನಗಳೂ ನಡೆದಿವೆ ಎಂದು ಟೀಕಿಸಿದರು.

ಇಂತಹ ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಬೇಕು. ಈ ಸಂಬಂಧ ಬಿಜೆಪಿ ಜನಜಾಗೃತಿ ಹೋರಾಟ ಆರಂಭಿಸಿದೆ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ಹೆಚ್ಚು ಕಾಲ ದೇಶ ಆಳಿದ ಕಾಂಗ್ರೆಸ್ ನಾಯಕರು ಜನರ ಹಿತಕ್ಕಿಂತ ಭ್ರಷ್ಟಾಚಾರಕ್ಕೇ ಆದ್ಯತೆ ನೀಡಿ ದೇಶದ ಅಭಿವೃದ್ಧಿ ನಿರ್ಲಕ್ಷಿಸಿದರು. ಮುಂಬರುವ ಚುನಾವಣೆಗಾಗಿ ಹಣ ಸಂಗ್ರಹಣೆಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಕಾಂಗ್ರೆಸ್‌ನ ಭ್ರಷ್ಟಾಚಾರದ ಹಣವನ್ನು ಹೊರ ತೆಗಿಯಬೇಕು. ಅಕ್ರಮವಾಗಿ ಹಣ ಸಂಗ್ರಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಮಾತನಾಡಿ, ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಿದರೆ ದೇಶ ಭ್ರಷ್ಟಾಚಾರ ಮುಕ್ತವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ. ದೇಶ ಆಳಿದ ಎಲ್ಲಾ ಕಾಂಗ್ರೆಸ್ ನಾಯಕರ ಅಧಿಕಾರವಧಿಯಲ್ಲೂ ದೊಡ್ಡ ಹಗರಣೆಗಳೇ ನಡೆದಿವೆ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಬಳುವಳಿ ಎಂದು ಟೀಕಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್ ಮಾತನಾಡಿ, ಎ ಫಾರ್ ಆದರ್ಶ ಸ್ಕ್ಯಾಂ, ಬಿ ಫಾರ್ ಬೋಫರ್ಸ್ ಹಗರಣ ಹೀಗೆ ಕಾಂಗ್ರೆಸ್ ಸರ್ಕಾರ ಎ ಟು ಜಡ್ ಹಗರಣ ಮಾಡಿದೆ. ಈಗಿನ ಸಂಸದರೊಬ್ಬರು ಸಂಗ್ರಹಿಸಿರುವ ಅಪಾರ ಪ್ರಮಾಣದ ಅಕ್ರಮ ಹಣ ಕಾಂಗ್ರೆಸ್ ನಡವಳಿಕೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಕಪ್ಪು ಹಣದ ಕಾರ್ಖಾನೆ. ಭ್ರಷ್ಟಾಚಾರ ಮಾಡಿ ದೇಶದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ಮುಖಂಡರಾದ ದಿಲೀಪ್ ಕುಮಾರ್, ವೈ.ಹೆಚ್. ಹುಚ್ಚಯ್ಯ, ಹೆಚ್.ಟಿ. ಭೈರಪ್ಪ. ಡಾ. ಪರಮೇಶ್, ವಿನಯ್ ಬಿದರೆ, ಹೆಚ್.ಟಿ.ಚಂದ್ರಶೇಖರ್, ಬಾವಿಕಟ್ಟೆ ನಾಗಣ್ಣ, ಸಂದೀಪ್ ಗೌಡ, ಯಶಸ್, ಜಗದೀಶ್, ರುದ್ರೇಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಆದ್ಯ, ಪ್ರೇಮಾ ಹೆಗಡೆ ಇದ್ದರು.

Latest Videos
Follow Us:
Download App:
  • android
  • ios