ಬಳ್ಳಾರಿ(ಜ.20): ನಗರದಲ್ಲಿ ಫಾಸ್ಟರ್‌ವೊಬ್ಬರು ಯುವತಿಯೊಂದಿಗೆ ಪರಾರಿಯಾಗಿರುವ ಪ್ರಕರಣ ಹಸಿರಾಗಿರುವಾಗಲೇ ಮತ್ತೊಬ್ಬ ಫಾದರ್ ಚರ್ಚೆಗೆ ಬಂದಿದ್ದಾರೆ. ಹೌದು ಈ ಬಾರಿ ಸರ್ಕಾರದ ಹಣವನ್ನು ದುರಪಯೋಗ ಮಾಡಿಕೊಳ್ಳುವ ಮೂಲಕ ನಗರದ ಸಿಎಸ್ಐ ತೆಲುಗು ಚರ್ಚ್ ಫಾದರ್ ರೇವರನರ್ ಗೋನಾ ಇಮ್ಯಾನುವೆಲ್ ಚರ್ಚೆಗೆ ಬಂದಿದ್ದಾರೆ.

ಫಾದರ್ ರೇವರನರ್ ಗೋನಾ ಇಮ್ಯಾನುವೆಲ್ ಸರ್ಕಾರದಿಂದ ಹಣ ಗೋಲ್‌ಮಾಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚರ್ಚ್ ಅಭಿವೃದ್ಧಿಗೆಂದು ರಾಜ್ಯ ಸರ್ಕಾರ ಐವತ್ತು ಲಕ್ಷ ಹಣವನ್ನ ಬಿಡುಗಡೆ ಮಾಡಿತ್ತು. ಅದರಲ್ಲಿನ ಮೊದಲ ಕಂತಿನ ಹನ್ನೆರಡುವರೆ ಲಕ್ಷ ಹಣವನ್ನು ಫಾದರ್ ಸ್ವಂತ ಅಕೌಂಟ್‌ಗೆ ಹಾಕಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ದುರ್ಬಳಕೆ ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿದ ಅಕೌಂಟೆಂಟ್ ಮತ್ತು ಸೆಕ್ರಟ್ರಿಯನ್ನು ಹುದ್ದೆಯಿಂದ ತೆಗದುಹಾಕಿದ್ದಾರೆ ಎಂದು ಫಾದರ್ ವಿರುದ್ಧ ಆರೋಪಿಸಲಾಗಿದೆ. 

ಯುವತಿ ನಾಪತ್ತೆ ಹಿಂದೆ ಚರ್ಚ್‌ ಫಾಸ್ಟರ್‌ ಕೈವಾಡ? ಕಾಣೆಯಾದ ಪ್ರಕರಣಕ್ಕೆ ಟ್ವಿಸ್ಟ್‌..!

ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಚರ್ಚ್‌ಗಳ ಮುಖ್ಯಸ್ಥರಾದ ಬಿಷಪ್ ರೈಟ್ ರೆವರೆಂಟ್ ರವಿಕುಮಾರ ನಿರಂಜನ್ ಅವರಿಗೂ ದೂರು ಸಲ್ಲಿಸಲಾಗಿದೆ. ಆದರೆ, ಫಾದರ್‌ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎನ್ನುವ ಮತ್ತೊಂದು ಆರೋಪ ಕೇಳಿ ಬಂದಿದೆ. ಮೇಲ್ನೋಟಕ್ಕೆ ಹನ್ನೆರಡುವರೆ ಲಕ್ಷ ದುರುಪಯೋಗ ಎನ್ನಲಾಗುತ್ತಿದೆಯಾದ್ರೂ ಇದರಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚು ಹಣ ಗೋಲ್‌ಮಾಲ್ ನಡೆದಿದೆ ಎಂದು ಹೇಳಲಾಗುತ್ತಿದೆ.