Hubballi-Dharwad ಸ್ಮಾರ್ಟ್‌ಸಿಟಿ ಕಾಮಗಾರಿಗೆ ಶೇ. 40 ಕಮಿಷನ್ ಕಂಟಕ..!
* ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ
* ಇನ್ನಾದರೂ ಕಣ್ಣಿಗೆ ಕಾಣುತ್ತಾ ಸ್ಮಾರ್ಟ್ ನಗರ?
* ಗ್ರೀನ್ ಮೊಬಿಲಿಟಿ ಕಾರಿಡಾರ್ ಈ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ
ಮಯೂರ ಹೆಗಡೆ
ಹುಬ್ಬಳ್ಳಿ(ಜ.05): ಹುಬ್ಬಳ್ಳಿ-ಧಾರವಾಡ(Hubballi-Dharwad) ಮಹಾನಗರದ ಕೆಲವು ಭಾಗಗಳಲ್ಲಿ ಹೊಸಮುಖ ನೀಡುವ ಪ್ರಯತ್ನವಾಗಿ ಅನುಷ್ಠಾನ ಆಗುತ್ತಿರುವ ‘ಸ್ಮಾರ್ಟ್‌ಸಿಟಿ ಯೋಜನೆ’(Smartcity Project) ಮೂರು ವರ್ಷದಿಂದ ಭಾರವಾದ ಹೆಜ್ಜೆ ಇಡುತ್ತ ಸಾಗಿದೆ. ಶೇ. 40 ಕಮಿಷನ್(Commission) ಶಾಪವಾಗಿ ಪರಿಣಮಿಸಿದ್ದು, ಕಾಮಗಾರಿಗಳು ನಿರೀಕ್ಷಿತ ವೇಗ ಪಡೆದುಕೊಳ್ಳದೇ ನಗೆಪಾಟಲಿಗೆ ಈಡಾಗಿವೆ. ಮಹಾನಗರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆ ಈವರೆಗೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಪೂರ್ಣಗೊಂಡ ಒಂದಿಷ್ಟು ಯೋಜನೆಗಳು ಸಾರ್ವಜನಿಕರಿಂದ ದೂರವಾಗಿವೆ ಎಂಬ ದೂರು ಸಹಜವಾಗಿದೆ. ಅದರೊಟ್ಟಿಗೆ ರಾಜ್ಯದಲ್ಲಿ(Karnataka) ದೊಡ್ಡ ದನಿಯಲ್ಲಿ ಕೇಳಿಬಂದ ಭಾರೀ ಪ್ರಮಾಣದ ಕಮಿಷನ್ ಆರೋಪಗಳಿಗೆ ಇಲ್ಲಿನ ಕಾಮಗಾರಿಗಳೇ ನಿದರ್ಶನ ಎನ್ನುವ ಮಾತುಗಳೂ ಇವೆ.
ಗೋಕುಲ ಕೈಗಾರಿಕಾ ವಸಾಹತು ಪ್ರದೇಶ ಅಭಿವೃದ್ಧಿ ಹೊರತುಪಡಿಸಿ ಇನ್ನೆಲ್ಲೂ ಸ್ಮಾರ್ಟ್‌ಸಿಟಿ ಎದ್ದು ಕಾಣುತ್ತಿಲ್ಲ. ಕೆಲ ಕಾಮಗಾರಿಗಳನ್ನು ‘ವ್ಯವಸ್ಥೆಗೆ’ ಹೊಂದಿಕೊಂಡು ನಿರ್ವಹಿಸಲಾಗುತ್ತಿದೆ. ಇನ್ನೊಂದಿಷ್ಟು ಯೋಜನೆಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯಕ್ಕಾಗಿ ಕಾದಿವೆ.
ಪ್ರಮುಖ ಘಟ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಯೋಜನೆ..!
ಹೆಚ್ಚಿನ ನಿರೀಕ್ಷೆ:
130 ಕೋಟಿ ವೆಚ್ಚದ 8 ಕಿ.ಮೀ. ಉದ್ದದ ಗ್ರೀನ್ ಮೊಬಿಲಿಟಿ ಕಾರಿಡಾರ್(Green Mobility Corridor) ಈ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅತಿಕ್ರಮಣ ತೆರವಿಲ್ಲದೆ ರಾಜನಾಲಾ ಉದ್ದಕ್ಕೆ ನಡೆಯುತ್ತಿರುವ ಈ ಕಾಮಗಾರಿ ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿದೆ. 50ಕೋಟಿ ಮಲ್ಟಿಲೇವಲ್ ಕಾರ್ ಪಾರ್ಕಿಂಗ್, 35 ಕೋಟಿ ವೆಚ್ಚದ ಹಳೆ ಬಸ್ ನಿಲ್ದಾಣ, 21 ಕೋಟಿಯ ನೆಹರು ಮೈದಾನ ಅಭಿವೃದ್ಧಿ, 16 ಕೋಟಿ ವೆಚ್ಚದ ಉಣಕಲ್ ಕೆರೆ ಸೌಂದರ್ಯಿಕರಣ, 20 ಕೋಟಿ ವೆಚ್ಚದ ಚಿಟಗುಪ್ಪಿ ಆಸ್ಪತ್ರೆ ನಿರ್ಮಾಣ, ಪಿಪಿಪಿ ಮಾದರಿಯಲ್ಲಿನ 8.5ಕೋಟಿ ಮೊತ್ತದ ಪಿಬಿಎಸ್ ಯೋಜನೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಇವು ಜನಬಳಕೆಗೆ ಲಭ್ಯವಾದರೆ ಸ್ಮಾರ್ಟ್‌ಸಿಟಿಯ ಫಲವನ್ನು ಜನತೆ ಕಣ್ತುಂಬಿಕೊಳ್ಳಬಹುದು.
ಗರಿಗೆದರದ ಸ್ಮಾರ್ಟ್ ರಸ್ತೆ:
ಗೋಕುಲ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 21ಕೋಟಿ ಮೊತ್ತದ ರಸ್ತೆ, ಜೆ.ಸಿ. ನಗರದಲ್ಲಿ ಮಾದರಿಗಾಗಿ ಸುಮಾರು 200 ಮೀ. ರಸ್ತೆ ನಿರ್ಮಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಈಗಾಗಲೆ ಆರಂಭಗೊಂಡು ಮುಕ್ತಾಯ ಹಂತಕ್ಕೆ ತಲುಪಬೇಕಿದ್ದ ಸ್ಮಾರ್ಟ್ ಸಿಟಿಯ 3 ಪ್ಯಾಕೇಜ್‌ಗಳ ರಸ್ತೆಯ ಒಂದೂ ಕಾಮಗಾರಿ ಆರಂಭವಾಗಿಲ್ಲ. ಕೊಪ್ಪಿಕರ ರಸ್ತೆಯಲ್ಲಿ ಅಮೃತ್ ಯೋಜನೆ ಅಡಿ ಯುಜಿಡಿ ಕಾಮಗಾರಿ ಪೂರ್ಣವಾಗಿದೆ. ಆದರೆ, .50.75 ಕೋಟಿ ವೆಚ್ಚದಲ್ಲಿ ಜೆ.ಸಿ. ನಗರ, ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ಬ್ರಾಡ್‌ವೇ, ಮರಾಠ ಗಲ್ಲಿ ಹಾಗೂ ಸಿಬಿಟಿ ರಸ್ತೆ 2ನೇ ಪ್ಯಾಕೇಜ್‌ನ ಕಾಮಗಾರಿ ಕಳೆದ ಮಳೆಗಾಲದ ಬಳಿಕ ಆರಂಭ ಆಗಬೇಕಿದ್ದರೂ ಈವರೆಗೆ ‘ಅ’ ಕಾರ ಬರೆದಿಲ್ಲ.
ಕ್ರೀಡಾ ಸಮುಚ್ಛಯ:
ಟೆಂಡರ್(Tender) ಹಂತದಲ್ಲಿರುವ 150 ಕೋಟಿ ಮೊತ್ತದ ಸ್ಪೋಟ್ಸ್‌ರ್ ಕಾಂಪ್ಲೆಕ್ಸ್ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಬಳಿ ಸ್ಥಳವನ್ನೂ ಗುರುತಿಸಲಾಗಿದೆ. ಈಗಾಗಲೇ ಒಂದು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ನಿರ್ದಿಷ್ಟಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ್ದರಿಂದ ಟೆಂಡರ್ ಸಾಧ್ಯವಾಗಿಲ್ಲ. ಹೀಗಾಗಿ 2ನೇ ಬಾರಿ ಟೆಂಡರ್ ಕರೆಯಲಾಗಿದೆ.
ಪ್ರಯೋಜನವಿಲ್ಲ:
ತಲಾ 4.55ಲಕ್ಷ ವ್ಯಯಿಸಿ ಹುಧಾ ಮಹಾನಗರದ 15 ಕಡೆ ಇಡಲಾಗಿದ್ದ ಇ ಶೌಚಾಲಯ ಪ್ರಯೋಜನಕ್ಕೆ ಬಂದಿಲ್ಲ. ಇದರ ಜತೆಗೆ ಸ್ಮಾರ್ಟ್‌ಸಿಟಿಯಡಿ ರೂಪಿಸಿದ್ದ ಇಂಗುಗುಂಡಿ ನೆಲದಡಿ ಹೂತಿದೆ. ಇದರಂತೆ ಉಣಕಲ್ ಕೆರೆಯ ಜಲಕಳೆ ಕೀಳಲು ವ್ಯಯಿಸಲಾದ ಕೋಟ್ಯಂತರ ರು. ಕೂಡ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂಬ ಆರೋಪ ಬಲವಾಗಿದೆ. ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬಂತಾಗಿದೆ. ಹಣ ಖರ್ಚಾಗಿದ್ದೇ ಬಂದು ಕೆಲಸ ಕೇಳಬೇಡಿ ಎನ್ನುತ್ತಿದ್ದಾರೆ ಅಧಿಕಾರಿಗಳು.
ಉದ್ಘಾಟನೆ ಭಾಗ್ಯ:
ಇಲ್ಲಿನ ಬೆಂಗೇರಿ ಮೈದಾನದಲ್ಲಿ 6 ಕೋಟಿ ಹಾಗೂ ಉಣಕಲ್‌ನಲ್ಲಿ .2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸ್ಮಾರ್ಟ್ ಮಾರುಕಟ್ಟೆ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಅದರಂತೆ .34 ಲಕ್ಷದ ಫಝಲ್ ಪಾರ್ಕಿಂಗ್, .15.57 ಕೋಟಿ ಮೊತ್ತದಲ್ಲಿ ಹೊಸ ಲುಕ್ ಪಡೆದಿರುವ ತೋಳನಕೆರೆ ಉದ್ಘಾಟನೆಗೆ ಕಾದಿವೆ.
ಬದಲಾವಣೆ:
ಇನ್ನು .2.31 ಕೋಟಿ ಮೊತ್ತದ ಸೋಲಾರ್ ರೂಫ್‌ಟಾಪ್ ಯೋಜನೆ 8 ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಮುಂದೆ ಬರಲಿಲ್ಲ. ಜತೆಗೆ ಟೆಂಡರ್, ನಿರ್ವಹಣೆ ಮೊತ್ತ ಒಪ್ಪಲಿಲ್ಲ. ಹೀಗಾಗಿ ಈ ಯೋಜನೆ ಕೈ ಬಿಡಲಾಗಿದೆ. ಇದರ ಬದಲಾಗಿ ಐಟಿಎಂಎಸ್ (ಇಂಟಿಗ್ರೆಟೆಡ್ ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸಿಸ್ಟಂ) ಯೋಜನೆ ರೂಪಿಸಲು ಎಚ್‌ಡಿಎಸ್‌ಸಿಎಲ್ ಮುಂದಾಗಿದೆ. ಇದರಂತೆ ಈ ಹಿಂದೆ ಸೋಲಾರ್ ಟ್ರೀ ಯೋಜನೆಯನ್ನೂ ಕೈಬಿಡಲಾಗಿತ್ತು.
ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯದ ಇನ್ನೂ 4 ನಗರ
ಅನುದಾನ ದಾನ!
ಹಾಗೆ ನೋಡಿದರೆ, ಸ್ಮಾರ್ಟ್‌ಸಿಟಿ ಹೆಸರಲ್ಲಿ ಬಂದ ಅನುದಾನ ದಾನವೂ ಆಗಿದೆ! ಫ್ಲೈಓವರ್‌ಗಾಗಿ(Flyover) ಸ್ಮಾರ್ಟ್‌ಸಿಟಿಯ . 20ಕೋಟಿ ನೀಡಲು ಸೂಚನೆ ಹೋಗಿರುವ ವಿಷಯವೂ ಬಹಿರಂಗವಾಗಿದೆ. ಈ ಹಿಂದೆ ಮಹಾನಗರ ಪಾಲಿಕೆಗೆ 15 ಟಿಪ್ಪರ್ ಕೊಳ್ಳಲು .3.10 ಕೋಟಿ, ಬಿಆರ್‌ಟಿಎಸ್(BRTS) ಯೋಜನೆಗೆ ಬೂಮ್ ಬ್ಯಾರಿಯರ್ ಅಳವಡಿಸಲು .2ರಿಂದ 4 ಕೋಟಿ ನೀಡಲಾಗಿದೆ. ಈ ಬಗ್ಗೆ ಸಭೆಯಲ್ಲಿ ಸಚಿವರು, ಕೆಲ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ ಬಳಿಕವೂ ಅನುದಾನ ಎಚ್‌ಡಿಎಸ್‌ಸಿಎಲ್‌ನಿಂದ ಎಚ್‌ಡಿಎಂಸಿ, ಬಿಆರ್‌ಟಿಎಸ್‌ಗೆ ಹೋಗಿದೆ.
ಸ್ಮಾರ್ಟ್‌ಸಿಟಿಯ ಕಾಮಗಾರಿ ವಿವರ
ಮುಕ್ತಾಯ 25 - 115ಕೋಟಿ
ಚಾಲ್ತಿ ಕಾಮಗಾರಿ 32 - 655ಕೋಟಿ
ಟೆಂಡರ್ ಹಂತದಲ್ಲಿ 1 - 150 ಕೋಟಿ
ಒಟ್ಟೂ ಕಾಮಗಾರಿ 58 - 950ಕೋಟಿ
ಇನ್ನೊಂದು ತಿಂಗಳಲ್ಲಿ 9 ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಜೂನ್ ವೇಳೆಗೆ ಬಹುತೇಕ ಕಾಮಗಾರಿ ಜನಬಳಕೆಗೆ ಮುಕ್ತವಾಗಲಿದೆ. ಕೋವಿಡ್ ಹಾಗೂ ಇತರೆ ಕಾರಣಕ್ಕೆ ವಿಳಂಬವಾಗಿತ್ತು. ಇದೀಗ ಕೆಲಸ ಚುರುಕು ಪಡೆದಿದೆ ಅಂತ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ತಿಳಿಸಿದ್ದಾರೆ.
ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದರೂ ಈವರೆಗೂ ಎದ್ದುಕಾಣುವಂತ ಒಂದೇ ಒಂದು ಕಾಮಗಾರಿ ಕಾಣುತ್ತಿಲ್ಲ. ಕಾಮಗಾರಿ ಹೆಸರಲ್ಲಿ ಜನಸಂಚಾರ ಸೇರಿ ಒಂದಿಷ್ಟುಸಮಸ್ಯೆ ಮಾತ್ರ ಆಗಿದೆ ಅಂತ ಹುಬ್ಬಳ್ಳಿ ನಾಗರಿಕ ರಾಜು ಮೆಹೆರವಾಡೆ ಹೇಳಿದ್ದಾರೆ.