Asianet Suvarna News Asianet Suvarna News

ಮಸ್ಕಿ ಉಪಚುನಾವಣೆ ಸರ್ವಕಾಲಿಕ ದಾಖಲೆ ಮತದಾನ

ಮೂರು ಸಾರ್ವತ್ರಿಕ ಚುನಾವಣೆಗಿಂತಲೂ ಉಪಚುನಾವಣೆಯಲ್ಲೇ ಅಧಿಕ ಮತದಾನ|ರಾಯಚೂರು ನಗರದ ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ| ಬಿಜೆಪಿ-ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ| ಜೋರಾದ ಸೋಲು ಗೆಲುವಿನ ಲೆಕ್ಕಾಚಾರ| 

All Time Record Voting in Maski Byelection grg
Author
Bengaluru, First Published Apr 19, 2021, 11:03 AM IST

ರಾಮಕೃಷ್ಣ ದಾಸರಿ

ರಾಯಚೂರು(ಏ.19): ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸರ್ವಕಾಲಿಕ ದಾಖಲೆಯ ಮತದಾನವಾಗಿದೆ. ಇಲ್ಲಿವರೆಗೂ ಕ್ಷೇತ್ರಕ್ಕೆ ಮೂರು ಸಾರ್ವತ್ರಿಕ ಚುನಾವಣೆಗಳು ನಡೆದಿದ್ದು, ಇದೇ ಮೊದಲ ಸಲ ನಡೆದ ಉಪಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಿದೆ.

ದಾಖಲೆ ಮತದಾನ:

ಮಸ್ಕಿ ಕ್ಷೇತ್ರದ ಮೊದಲ ಚುನಾವಣೆಯ 2008ರಲ್ಲಿ ಒಟ್ಟು 1,57,804 ಮತದಾರರ ಪೈಕಿ 84,532 ಮತಗಳು ಚಲಾವಣೆಗೊಂಡು ಶೇ.53.56 ರಷ್ಟುಮತದಾನವಾಗಿತ್ತು. 2013ರಲ್ಲಿ ಒಟ್ಟು 1,64,897 ಮತದಾರರಲ್ಲಿ 1,05,728 ಮತಗಳು ಚಲಾವಣೆಯಾಗಿ ಶೇ.64.11 ರಷ್ಟುಮತದಾನವಾಗಿತ್ತು. 2018ರಲ್ಲಿ ಒಟ್ಟು 1,95,494 ಮತದಾರರಲ್ಲಿ 1,36,878 ಮತಗಳು ಚಲಾವಣೆಗೊಂಡು ಶೇ.70.01 ರಷ್ಟುಮತದಾನವಾಗಿತ್ತು. ಇದೀಗ ಉಪಚುನಾವಣೆಯಲ್ಲಿ ಒಟ್ಟು 2,06,429 ಮತದಾರರ ಪೈಕಿ 1,45,458 ಮತ ಚಲಾವಣೆಗೊಂಡಿದ್ದು, ಶೇ.70.46 ರಷ್ಟುಮತದಾನವಾಗಿದೆ. ಕೊರೋನಾ ಎರಡನೇ ಅಲೆ ಭೀತಿ, ಬೇಸಿಗೆಯ ಬಿಸಿಲು ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದರ ನಡುವೆಯೂ ದಾಖಲೆಯ ಮತದಾನವಾಗಿದೆ.

ಸೋಲು-ಗೆಲುವಿನ ಲೆಕ್ಕಾಚಾರ:

ಉಪಕದನವು ಬಿಜೆಪಿ-ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ನೀಡಿದ್ದು, ಮತದಾನ ಮುಗಿಯುತ್ತಿದ್ದಂತೆಯೇ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಸೋಲು ಗೆಲುವಿನ ಲೆಕ್ಕಾಚಾರವು ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡ ತುರ್ವಿಹಾಳ ನಡುವೆ ಜಯದ ಮಾಲೆ ಯಾರ ಕೊರಳಿಗೆ ಎನ್ನುವ ವಿಷಯ ಸದ್ಯ ಹಾಟ್‌ ಟಾಪಿಕ್‌ ಆಗಿದೆ. ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಜನರು ಕೊರೋನಾ ಎರಡನೇ ಅಲೆ, ಸಾರಿಗೆ ನೌಕರರ ಮುಷ್ಕರ, ಐಪಿಎಲ್‌ ವಿಷಯಗಳನ್ನು ಬದಿಗಿಟ್ಟು ಮಸ್ಕಿ ಕದನದಲ್ಲಿ ಗೆಲ್ಲುವ ಕುದುರೆ ಯಾವುದು ಎನ್ನುವ ಸಂಗತಿಯ ಮೇಲೆಯೇ ಹೆಚ್ಚಿನ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಮಸ್ಕಿ ಬೈಎಲೆಕ್ಷನ್‌ನಲ್ಲಿ ಮಂಗ್ಲಿ ಹವಾ: ಬಿಜೆಪಿ ಪರ ಸ್ಟಾರ್‌ ಸಿಂಗರ್‌ ಪ್ರಚಾರ

ಭವಿಷ್ಯ ಕೊಠಡಿಗಳಲ್ಲಿ ಭದ್ರ:

ಮಸ್ಕಿ ಕ್ಷೇತ್ರದಾದ್ಯಂತ 305 ಮತಗಟ್ಟೆಗಳಲ್ಲಿ ಶನಿವಾರ ಶಾಂತಿಯುತವಾಗಿ ಮತದಾನವಾಗಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌, ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ನಡುವೆ ಗಟ್ಟಿ ಪೈಪೋಟಿ ಸೃಷ್ಟಿಯಾಗಿದೆ. ಇವರ ಜೊತೆಗೆ ಇನ್ನು ಆರು ಜನರ ಭವಿಷ್ಯವನ್ನು ಮತದಾರರು ಮತಯಂತ್ರದಲ್ಲಿ ಭದ್ರಗೊಳಿಸಿಟ್ಟಿದ್ದಾರೆ.

ಮತದಾನದ ಬಳಿಕ ಶನಿವಾರ ರಾತ್ರಿ ಮತಯಂತ್ರಗಳನ್ನು ಮಸ್ಕಿ ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತರಲಾಗಿತ್ತು. ಅಲ್ಲಿಂದ ರಾಯಚೂರು ಜಿಲ್ಲಾ ಕೇಂದ್ರದಲ್ಲಿರುವ ಎಸ್‌ಆರ್‌ಪಿಎಸ್‌ ಕಾಲೇಜಿಗೆ ತಂದು ಕೊಠಡಿಗಳಲ್ಲಿ ಭದ್ರಪಡಿಸಲಾಗಿದೆ. ಚುನಾವಣೆ ವೀಕ್ಷಕರು, ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರ ಸಮಕ್ಷಮದಲ್ಲಿ ಸಿಬ್ಬಂದಿ ಮತಯಂತ್ರಗಳನ್ನು ಕೊಠಡಿಗಳಲ್ಲಿಟ್ಟು ಭದ್ರಪಡಿಸಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.
 

Follow Us:
Download App:
  • android
  • ios