ಇನ್ನೊಂದು ವರ್ಷದಲ್ಲಿ ಎಲ್ಲ ಫುಟ್ಪಾತ್ ಟ್ರಾನ್ಸ್‌ಫಾರ್ಮರ್ ಸ್ಥಳಾಂತರ: ಬೆಸ್ಕಾಂ
ಸ್ಪನ್ ಪೋಲ್ ರಚನೆ, ಸ್ಥಳಾಂತರ ಖಚಿತ: ಹೈಕೋರ್ಟ್‌ಗೆ ಬೆಸ್ಕಾಂ ಮಾಹಿತಿ, ಜ.9ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು(ಸೆ.13): ನಗರದ ಪಾದಚಾರಿ ಮಾರ್ಗಗಳ ಮೇಲಿರುವ 1,433 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಪ್ರಕ್ರಿಯೆಯನ್ನು 2023ರ ಸೆಪ್ಟೆಂಬರ್ ವೇಳೆ ಪೂರ್ಣಗೊಳಿಸಲಾಗುವುದು ಎಂದು ಬೆಸ್ಕಾಂ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ನಗರದ ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಮೇಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ತೆರವಿಗೆ ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು ಹಾಜರಾಗಿ, ಎರಡು ಹಂತದಲ್ಲಿ ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲಿದ್ದ ಒಟ್ಟು 5,784 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವ ಅಥವಾ ಅವುಗಳನ್ನು ನೆಲಮಟ್ಟದಿಂದ ಎತ್ತರಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 3,194 ಟ್ರಾನ್ಸ್‌ಫಾರ್ಮರ್‌ಗಳನ್ನು ಹೊಸ ಸ್ಪನ್ ಪೋಲ್ (ಕಂಬದ ಮೇಲೆ ಅಳವಡಿಸುವ) ರಚನೆಗೆ ಪರಿವರ್ತಿಸಲಾಗಿದೆ. ಎರಡು ಟ್ರಾನ್ಸ್‌ಫಾರ್ಮರ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ: ಏನಿದರ ವಿಶೇಷತೆ?
ಎರಡನೇ ಹಂತದಲ್ಲಿ 2,588 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ 1,155 ಟ್ರಾನ್ಸ್‌ಫಾರ್ಮರ್‌ಗಳನ್ನು ಎತ್ತರಿಸಲಾಗಿದೆ. ಉಳಿದ 1,433 ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 2023ರ ಸೆಪ್ಟಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಅದನ್ನು ದಾಖಲಿಸಿಕೊಂಡ ಹೈಕೋರ್ಟ್, ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕಾರ್ಯ ಮುಂದುವರಿಸಬೇಕು. ಮುಂದಿನ ವಿಚಾರಣೆ ವೇಳೆ ಕಾಮಗಾರಿ ಕುರಿತ ಪ್ರಗತಿ ವರದಿ ಸಲ್ಲಿಸಬೇಕು ಎಂದು ಬೆಸ್ಕಾಂ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಜ.9ಕ್ಕೆ ಮುಂದೂಡಿತು.