Asianet Suvarna News Asianet Suvarna News

ಎಲ್ಲಾ ಇಲಾಖೆಗಳ ಅರ್ಜಿ ಶೀಘ್ರ ಇತ್ಯರ್ಥಗೊಳಿಸಿ: ಸಚಿವ

ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸೂಚಿಸಿದರು.

All departments' applications should be disposed of quickly: Minister
Author
First Published Aug 24, 2023, 8:24 AM IST

  ಮಧುಗಿರಿ :  ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸೂಚಿಸಿದರು.

ಮಧುಗಿರಿ ತಾಲೂಕು ಇಟಕ ದಿಬ್ಬನಹಳ್ಳಿ(ಐ.ಡಿ.ಹಳ್ಳಿ) ಹೋಬಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಕಂದಾಯ ಇಲಾಖೆ, ಆರ್‌ಡಿಪಿಆರ್‌ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ನಿವೇಶನ ಇರುವರಿಗೆ ಗೃಹ ನಿರ್ಮಾಣ ಸೌಲಭ್ಯ ಹಾಗೂ ನಿವೇಶನ ಇಲ್ಲದವರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ, ಅಗತ್ಯ ಇರುವ ಕಡೆ ಗೋಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ, ಎತ್ತಿನಹೊಳೆ ಯೋಜನೆಯಡಿ ಹಲವು ಕೆರೆಗಳು ತುಂಬಿಸಲಾಗುತ್ತದೆ, ಅಗತ್ಯ ಇರುವವರಿಗೆ ಹಸು, ಕುರಿ, ಮೇಕೆ ಸಾಕಾಣಿಕೆಗೆ ಬಡ್ಡಿರಹಿತ ಸಾಲವನ್ನು ನೀಡಲು ಕ್ರಮ ವಹಿಸಲಾಗಿದೆ. ಸಾರ್ವಜನಿಕ ಆಸ್ತಿಗಳ ಸಂರಕ್ಷಿಸಿ, ಅವುಗಳ ಉಪಯೋಗವನ್ನು ಮುಂದಿನ ಪೀಳಿಗೆಗೆ ತಲುಪಿಸಲಾಗುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಸಾರ್ವಜನಿಕರ ಸಮಸ್ಯೆಗಳು ಏನೇ ಇದ್ದರೂ ನನ್ನ ಗಮನಕ್ಕೆ ತರಬೇಕು, ಕಳೆದ ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಸುಮಾರು 16400 ಮನೆಗಳನ್ನು ತಾಲೂಕಿನಲ್ಲಿ ನಿರ್ಮಾಣ ಮಾಡಿಸಿ, ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಲಾಯಿತು. ರೈತರು ಸಣ್ಣ ಪುಟ್ಟಸಮಸ್ಯೆ, ವ್ಯಾಜ್ಯಗಳಿಗೆ ಪರಸ್ಪರ ದ್ವೇಷ ಸಾಧಿಸಬಾರದು, ಪರಸ್ಪರ ಸಹಕಾರ, ನಂಬಿಕೆಯಿಂದ ಅಭಿವೃದ್ಧಿ ಸಾಧ್ಯ ಎಂದರು.

ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಮಾತನಾಡಿ, ಹೋಬಳಿ ಮಟ್ಟದ ಜನ ಸಂಪರ್ಕ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆ ಸಭೆಯ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಸಮರ್ಪಕವಾಗಿ ಬಗೆಹರಿಸಬಹುದಾಗಿದ್ದು, ಇಂದೊಂದು ಉತ್ತಮ ಜನೋಪಕಾರಿ ಸಭೆಯಾಗಿದೆ. ವಿವಿಧ ಇಲಾಖೆಗಳು, ನಿಗಮಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಸಾರ್ವಜನಿಕರು ಅರ್ಜಿ ಸಲ್ಲಿಸಿದ ಕೂಡಲೇ ಸ್ಥಳದಲ್ಲೇ ಅಹವಾಲುಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕಿ ದೀಪಶ್ರೀ, ಡಿಎಚ್‌ಒ ಡಾ. ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್‌, ತಹಸೀಲ್ದಾರ್‌ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮತ್ತಿತರರು ಭಾಗವಹಿಸಿದ್ದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಅಹವಾಲುಗಳನ್ನು ಇತ್ಯರ್ಥ ಪಡಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಐ.ಡಿ. ಹಳ್ಳಿ ಹೋಬಳಿಯಲ್ಲಿ ಮೊದಲ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಆಗಸ್ಟ್‌ 30ರಂದು ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗಲಿದೆ, ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸೌಲಭ್ಯಗಳನ್ನು ತಲುಪಿಸುವುದೇ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿ ಪಂಚಾಯತ್‌ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುತ್ತದೆ.

ಕೆ.ಎನ್‌.ರಾಜಣ್ಣ ಸಹಕಾರ ಸಚಿವ

Follow Us:
Download App:
  • android
  • ios