Asianet Suvarna News Asianet Suvarna News

AKBMS Election ಬ್ಯಾಂಕ್ ಹೆಸರಲ್ಲಿ ವಂಚಿಸಿದವರನ್ನು ದೂರ ಇಡಿ, ಬದಲಾವಣೆಗೆ ರಘುನಾಥ್ ಪಣ

* ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ-ಕಾವೇರಿದ ಪ್ರಚಾರ
* ಬ್ರಾಹ್ಮಣ ಉಪಪಂಗಡಗಳೆಲ್ಲ ಎಸ್‌. ರಘುನಾಥ್‍ಗೆ ಬೆಂಬಲ ನಿರೀಕ್ಷೆ
* ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು

akhila karnataka brahmana mahasabha Election updates mah
Author
Bengaluru, First Published Dec 10, 2021, 1:13 AM IST

ಬೆಂಗಳೂರು(ಡಿ. 10)  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (AKBMS) ಅಧ್ಯಕ್ಷ ಸ್ಥಾನದ ಚುನಾವಣೆ (Election)ಸಮೀಪಿಸಿದೆ. ಡಿಸೆಂಬರ್ 12ರಂದು ಮೊದಲ ಹಂತದ ಚುನಾವಣೆ ಬೆಂಗಳೂರು (Bengaluru) ಹೊರತುಪಡಿಸಿ ರಾಜ್ಯದ ಉಳಿದ ಐದು ಮತಗಟ್ಟೆಗಳಾದ ಮೈಸೂರು(Mysuru), ಶಿವಮೊಗ್ಗ, ಹಾಸನ, ಹುಬ್ಬಳ್ಳಿ ಮತ್ತು ರಾಯಚೂರುಗಳಲ್ಲಿ ನಡೆಯಲಿದೆ. ಡಿಸೆಂಬರ್ 19ರಂದು ಎರಡನೇ ಹಂತದ ಚುನಾವಣೆ ಬೆಂಗಳೂರಿನ ಬಸವನಗುಡಿಯ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಈ ಬಾರಿಯ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಉಪಪಂಗಡಗಳೆಲ್ಲ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘುನಾಥ್ ಅವರಿಗೆ ಬೆಂಬಲ ನೀಡಲು ಒಮ್ಮತದಿಂದ ತೀರ್ಮಾನಿಸಿವೆ ಎಂದು ಬ್ರಾಹ್ಮಣ ಉಪ ಪಂಗಡಗಳ ಮಹಾ ಒಕ್ಕೂಟದ ಅಧ್ಯಕ್ಷ ವಿ.ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡ ಸುಮಾರು 47 ವರ್ಷಗಳಿಂದ ಅಸ್ತಿತ್ವದಲ್ಲಿರುವ ಎಕೆಬಿಎಂಎಸ್ ಬೆಂಗಳೂರಿಗಷ್ಟೇ ಕೇಂದ್ರಿತವಾಗಿದೆ. ಬೆಂಗಳೂರು, ಅದರಲ್ಲೂ ಬಸವನಗುಡಿಯನ್ನು ಬಿಟ್ಟು ಹೊರ ಹೋಗಿಲ್ಲ. ಹೀಗಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ವಿವಿಧ ಬ್ರಾಹ್ಮಣ ಉಪಪಂಗಡಗಳ ಕಷ್ಟಗಳನ್ನು ಕೇಳುವವರೇ ಇಲ್ಲವಾಗಿತ್ತು. ಬ್ರಾಹ್ಮಣ ಸಮುದಾಯದಲ್ಲಿ ಸುಮಾರು 44ರಷ್ಟು ಉಪಪಂಗಡಗಳಿದ್ದು, ಎಲ್ಲ ಉಪಪಂಗಡಗಳೂ ಎಸ್.ರಘುನಾಥ್ ಅವರಿಗೆ ಈ ಬಾರಿ  ಬೆಂಬಲ ಸೂಚಿಸಿವೆ. .

ವಂಚಕರಿಗೆ ರಕ್ಷಣೆ ನೀಡುವವರನ್ನು ದೂರವಿಡಿ

ಬದಲಾವಣೆಗಾಗಿ ಒಗ್ಗಟ್ಟು ಪ್ರದರ್ಶನ ಎಕೆಬಿಎಂಎಸ್‍ನಲ್ಲಿ ಅಮೂಲಾಗ್ರ ಬದಲಾವಣೆ ಆಗಲೇಬೇಕು ಎಂಬ ಕಾರಣಕ್ಕೆ ಉಪಪಂಗಡಗಳೆಲ್ಲ ಒಗ್ಗಟ್ಟಿನಿಂದ ಸ್ವಚ್ಛ ವರ್ಚಸ್ಸಿನ ಎಸ್. ರಘುನಾಥ್ ಅವರನ್ನು ಬೆಂಬಲಿಸಲು ಮುಂದಾಗಿವೆ. ಎರಡು ಪ್ರಮುಖ ಬ್ಯಾಂಕ್‍ಗಳಿಗೆ ವಂಚಿಸಿದವರು, ಈ ಬ್ಯಾಂಕ್‍ಗಳ ಲಾಭ ಗಳಿಸಿಕೊಂಡವರು, ಬ್ಯಾಂಕಿಗೆ ವಂಚಿಸಿದವರ ಪರವಾಗಿಯೇ ವಕಾಲತ್ತು ನಡೆಸಿ ವಂಚನೆಗೆ ಪರೋಕ್ಷ ಬೆಂಬಲವಾಗಿ ನಿಂತವರ ನಿಜಬಣ್ಣವೆಲ್ಲ ಬಯಲಾಗಿದ್ದು, ಮತ್ತೆ ಅವರು ಎಕೆಬಿಎಂಎಸ್‍ಗೆ ಬರಬಾರದು ಎಂಬ ಸಂಕಲ್ಪದೊಂದಿಗೆ ಬ್ರಾಹ್ಮಣ ಉಪಪಂಗಡಗಳೆಲ್ಲ ಒಗ್ಗಟ್ಟು ಪ್ರದರ್ಶಿಸಿವೆ. 

ಪ್ರಮುಖ ಉಪಪಂಗಡಗಳಾದ ಬಡಗನಾಡು ಬ್ರಾಹ್ಮಣ ಸಂಘ, ಮುಲಕನಾಡು, ಉಳಿಚಿಕಮ್ಮೆ, ನಂದವೈದಿಕ ಸಂಘ, ಬಬ್ಬೂರಕಮ್ಮೆ, ಶಿವಳ್ಳಿ, ಯಾಜ್ಞವಲ್ಕ್ಯರು, ಅಲವೇಲು, ದೇಶಸ್ಥ ಬ್ರಾಹ್ಮಣರು, ಹವ್ಯಕರು, ಸಿರ್ನಾಡು,  ಸಾರಸ್ವತ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ವೈಷ್ಣವರು, ಅಯ್ಯಂಗಾರರು, ಕಡೆಂಬಿಗಳು, ಹೆಬ್ಬಾರತಿ ವೈಷ್ಣವರು, ಸಂಕೇತಿಗಳು, ಮಾಧ್ವರು ಸಹಿತ ಎಲ್ಲಾ ಉಪಪಂಗಡಗಳೂ ಎಸ್. ರಘುನಾಥ್ ಅವರಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಬ್ರಾಹ್ಮಣ ಉಪ ಪಂಗಡಗಳ ಮಹಾ ಒಕ್ಕೂಟದ ಅಧ್ಯಕ್ಷ ವಿ.ಮಂಜುನಾಥ್ ತಿಳಿಸಿದರು

ಈ ಬಾರಿ ಯಾಕಾಗಿ: ಈ ಹಿಂದೆ  ಚುನಾವಣೆ ನೆಪ ಮಾತ್ರಕ್ಕಷ್ಟೇ ನಡೆಯುತ್ತಿತ್ತು. ಸಮಾಜದ ಗಣ್ಯರೊಬ್ಬರು ಚುನಾವಣೆ ನಿಂತುಕೊಳ್ಳುತ್ತಿದ್ದರು, ಅವರನ್ನೇ ಕಣ್ಣುಮುಚ್ಚಿ ಬೆಂಬಲಿಸಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣಾ ಕಣದಲ್ಲಿ ಘಟಾನುಘಟಿಗಳೇ ಕಣಕ್ಕೆ ಇಳಿದಿದ್ದಾರೆ. ವಂಚನೆಗೊಳಗಾದ ಬ್ಯಾಂಕ್‍ನಿಂದ ಉಪಕೃತರಾದವರು, ವಂಚಕರಿಗೆ ನೆರವು ನೀಡಿದವರು ಒಂದು ಕಡೆ ಇದ್ದರೆ, ಶುದ್ಧಹಸ್ತರು ಇನ್ನೊಂದು ಕಡೆಯಲ್ಲಿ ನಿಂತಿದ್ದಾರೆ. ಅಭ್ಯರ್ಥಿಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಶುದ್ಧಹಸ್ತರನ್ನೇ ಗೆಲ್ಲಿಸಬೇಕು ಎಂಬ ಕಾರಣಕ್ಕೆ ಬ್ರಾಹ್ಮಣ ಉಪಪಂಗಡಗಳೆಲ್ಲ ಒಂದಾಗಿ ರಘುನಾಥ್ ಅವರನ್ನು ಬೆಂಬಲಿಸಲು ಮುಂದಾಗಿವೆ ಎಂದರು.

ಬೆಂಗಳೂರಿನ ಹೊರಭಾಗಕ್ಕೂ ವಿಸ್ತರಣೆ:  ಈ ಬಾರಿ ಚುನಾವಣೆಯ ಕಾವು ಏರಲು ಕಾರಣ ಬೆಂಗಳೂರು ಬಿಟ್ಟು ಹೊರ ಹೋಗಿರುವುದು. ಇದುವರೆಗೆ ಸುಮಾರು 8 ಸಾವಿರದಷ್ಟು ಮಂದಿ ಮಾತ್ರ ಮತ ಚಲಾಯಿಸುತ್ತಿದ್ದರು. ಈ ಪೈಕಿ ಸುಮಾರು 5 ಸಾವಿರದಷ್ಟು ಮಂದಿ ಬೆಂಗಳೂರಿನವರೇ ಆಗಿರುತ್ತಿದ್ದರು. ಆದರೆ ಈ ಬಾರಿ ಬೆಂಗಳೂರು ಹೊರಭಾಗದಲ್ಲೂ ಎಕೆಬಿಎಂಎಸ್ ಚುನಾವಣೆಯ ಕಾವು ಏರಿದೆ. ಬದಲಾವಣೆಗಾಗಿ ಮತದಾರರು ಹಾತೊರೆಯುತ್ತಿದ್ದಾರೆ. ಸುಮಾರು 41 ಸಾವಿರದಷ್ಟಿರುವ ಮತದಾರರ ಪೈಕಿ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಮತದಾನವಾಗುವ ವಿಶ್ವಾಸ ಇದೆ. ಎಕೆಬಿಎಂಎಸ್ ಬೈಲಾದಲ್ಲಿನ ಲೋಪವನ್ನೇ ನೆಪವಾಗಿ ಇಟ್ಟುಕೊಂಡು ಕೆಲವರ ಕೈಯಲ್ಲೇ ಅಧಿಕಾರ ಉಳಿಸಿಕೊಳ್ಳಲು ಇದುವರೆಗೆ ಪ್ರಯತ್ನ ನಡೆದಿತ್ತು. ಇನ್ನು ಮುಂದೆ ಬೈಲಾಕ್ಕೆ ಅಮೂಲಾಗ್ರ ಬದಲಾವಣೆ ತರುವ ತುಡಿತ ಹೊಂದಿರುವವರೇ ಚುನಾವಣಾ ಕಣಕ್ಕೆ ಇಳಿದಿರುವುದರಿಂದ ಹೊಸ ಹುರುಪು ಮೂಡಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಮತದಾರರು ಸಹ ಎಕೆಬಿಎಂಎಸ್ ಅಧ್ಯಕ್ಷರಾಗುವ ಅವಕಾಶ ಒದಗಿ ಬರಲಿದೆ ಎಂದು ತಿಳಿಸಿದರು.

ಬ್ರಾಹ್ಮಣರು ನಗಣ್ಯರು ಎಂದು ಬಿಂಬಿಸುವ ಪ್ರಯತ್ನ: ಜಾತಿಗಣತಿ ನಡೆದಾಗ ಕೇವಲ ಬ್ರಾಹ್ಮಣ ಎಂದಷ್ಟೇ ಹೇಳಬೇಕಿತ್ತು ಆದರೆ ಕೆಲವರು ಉಪಪಂಗಡವನ್ನೂ ಹೇಳಿದ್ದರು. ಹೀಗಾಗಿ ರಾಜ್ಯದಲ್ಲಿ 44 ಲಕ್ಷ ಬ್ರಾಹ್ಮಣರಿದ್ದರೂ ಕೇವಲ 12 ಲಕ್ಷ ಬ್ರಾಹ್ಮಣರಿದ್ದಾರೆ ಎಂಬ ಲೆಕ್ಕ ತೋರಿಸಲಾಗುತ್ತಿದೆ. ಹೀಗೆ ರಾಜಾರೋಷವಾಗಿ ಅನ್ಯಾಯ ಆಗುತ್ತಿದ್ದರೂ, ಅದನ್ನು ತಡೆಗಟ್ಟುವ ಕೆಲಸವನ್ನು ಈ ಹಿಂದಿನ ಎಕೆಬಿಎಂಎಸ್ ಅಧ್ಯಕ್ಷರಾಗಲಿ, ಇತರ ನಿರ್ದೇಶಕರಾಗಲಿ ಮಾಡಲಿಲ್ಲ ಎಂಬುದು ಗಂಭೀರ ವಿಚಾರ. ಅವರೆಲ್ಲ ಒಂದು ಪಕ್ಷದ ಅಡಿಯಲ್ಲಿ ಕೆಲಸ ಮಾಡಿದವರು ಎಂಬುದನ್ನೂ ಮರೆಯಬಾರದು. ಹೀಗಾಗಿಯೇ ಈ ಬಾರಿ ಉಪಪಂಗಡಗಳ ನಾಯಕರೆಲ್ಲ ಒಗ್ಗಟ್ಟು ಪ್ರದರ್ಶಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಂದಾಗಿದ್ದಾರೆ ಎಂದರು.

 

 

Follow Us:
Download App:
  • android
  • ios