'ದಲಿತರೇನು ಹಿಂದುಗಳಲ್ಲವೇ, ದಲಿತರು ಅಂತಾ ಚುಚ್ಚಿ ಮಾತನಾಡುವುದು ಎಷ್ಟು ಸರಿ'
ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲಬುರಗಿಗೆ ಅನ್ಯಾಯ| ಇದನ್ನ ಓಟು ಕೊಟ್ಟವರು ಕೇಳಬೇಕು, ಆ ಪಕ್ಷವನ್ನು ಪ್ರತಿನಿಧಿಸುವ ಶಾಸಕರು ಕೇಳಬೇಕು| ಪಕ್ಷ, ಮುಖಂಡರ ಮೇಲೆ ಜನಪ್ರತಿನಿಧಿಗಳು ಒತ್ತಡ ತರಬೇಕು|
ಕಲಬುರಗಿ(ಫೆ.06): ಯಾರನ್ನು ಸಚಿವರನ್ನಾಗಿ ಮಾಡಬೇಕು ಅನ್ನೋದು ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಎಲ್ಲಿಯವರೆಗೆ ನಮ್ಮಲ್ಲಿದ್ರೋ ಅವರು ನಮ್ಮವರಾಗಿದ್ದವರು. ಯಾವಾಗ ಅವರು ಬೇರೆ ಪಕ್ಷ ಸೇರಿದ್ರೋ ಅವಾಗ ಯಾರನ್ನ ಮಂತ್ರಿ ಮಾಡೋದು ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲಬುರಗಿಗೆ ಅನ್ಯಾಯವಾಗಿದೆ. ಇದನ್ನ ಓಟು ಕೊಟ್ಟವರು ಕೇಳಬೇಕು, ಆ ಪಕ್ಷವನ್ನು ಪ್ರತಿನಿಧಿಸುವ ಶಾಸಕರು ಕೇಳಬೇಕು. ಪಕ್ಷ, ಮುಖಂಡರ ಮೇಲೆ ಜನಪ್ರತಿನಿಧಿಗಳು ಒತ್ತಡ ತರಬೇಕು. ಇಲ್ಲವೇ ಆ ಪಕ್ಷದವರು ಅರ್ಥ ಮಾಡಿಕೊಂಡು ರಾಜ್ಯದ ಯಾವಾವ ಭಾಗಕ್ಕೆ ಎಷ್ಟು ಒತ್ತು ಕೊಡಬೇಕು ತಿಳಿದುಕೊಂಡು ಸಚಿವ ಸ್ಥಾನ ಕೊಡಬೇಕು ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಶೇಷವಾಗಿ ಹಿಂದುಳಿದ ಭಾಗಗಳನ್ನು ಗುರುತಿಸಿ ವಿಶೇಷ ಆಧ್ಯತೆ ನೀಡಬೇಕು. ಬಿಜೆಪಿ ನಾಯಕರು ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೇಲೆ ಯಾಕೆ ಮುನಿಸಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಕಲ್ಯಾಣ ಕರ್ನಾಟಕ ಅಂತ ಕೇವಲ ಹೆಸರು ಬದಲಿಸಿದ್ರೆ ಅಭಿವೃದ್ಧಿ ಆಗುತ್ತಾ? ಈ ಆರು ಜಿಲ್ಲೆಗಳಲ್ಲಿ ಪ್ರಾತಿನಿಧ್ಯೆ ನೀಡಿ ನಿರೀಕ್ಷಿತ ಅಭಿವೃದ್ಧಿ ಮಾಡಬೇಕು ಅದರ ಬಗ್ಗೆ ಅವರಿಗೆ ಚಿಂತನೆ ಇಲ್ಲ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪಗೆ ಆಪರೇಷನ್ ಹೊಸದೇನೂ ಇಲ್ಲ, 2008 ರಲ್ಲೂ ಇದೇ ರೀತಿ ಮಾಡಿ ಸರಕಾರ ರಚಿಸಿದ್ದರು. ಈಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದು ನೋಡೋಣ. ಮೂಲ ಬಿಜೆಪಿಗರಲ್ಲಿ ಅಸಮಾಧಾನ ಇದೆ. ಅವರ ಭಾವನೆ ಏನು ಅನ್ನೋದು ಕಾದು ನೋಡೋಣ ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಕುರಿತಂತೆ ಟ್ರಸ್ಟ್ ಮಾಡಿದ್ದಾರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಾರ್ಯಗಳು ನಡೆಯುತ್ತವೆ. ರಾಮ ಮಂದಿರ ನಿರ್ಮಾಣ ಟ್ರಸ್ಟ್‌ನಲ್ಲಿ ದಲಿತರನ್ನ ಸೇರಿಸುತ್ತೇವೆ ಎಂಬ ಕೇಂದ್ರ ಹೇಳಿಕೆಗೆ ಖರ್ಗೆ ಆಕ್ರೋಶ ವ್ಯಕ್ತಡಿಸಿದ್ದಾರೆ.
ದಲಿತರೇನು ಹಿಂದುಗಳಲ್ಲವೇ, ದಲಿತರು ಅಂತಾ ಚುಚ್ಚಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ, ದಲಿತರ ಮನೆಗೆ ಹೋಗಿ ಊಟ ಮಾಡ್ತೇವೆ, ದಲಿತರನ್ನ ತೆಗೆದುಕೊಂಡಿದ್ದೇವೆ ಅಂತಾ ಹೇಳುತ್ತಾರೆ. ದಲಿತರು ದಲಿತರು ಅಂತಾ ಪದೆ ಪದೆ ಯಾಕೆ ಹೇಳುತ್ತಾರೆ, ದಲಿತರು ಹಿಂದೂ ಧರ್ಮದ ಭಾಗವಲ್ಲವೆ? ಬಿಜೆಪಿಯವರು ಹಿಂದೂ ಧರ್ಮವನ್ನ ಗುತ್ತಿಗೆ ಪಡೆದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತೆ ಅಂತಾ ಹೇಳಿದ್ದರು. ಮಾಧ್ಯಮದವರನ್ನ ಎನ್ಕ್ಯಾಶ್ ಮಾಡಿಕೊಂಡು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ದೆಹಲಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಲಿದ್ದಾರೆ. ಈ ಹಿಂದೆ ದಿಲ್ಲಿ ಅಭಿವೃದ್ಧಿಯಾಗಿದ್ದು ಶೀಲಾ ದಿಕ್ಷಿತ್ ಸಿಎಂ ಆಗಿದ್ದಾಗ ಹಾಗೂ ಸೋನಿಯಾ ಗಾಂಧಿ ಸಾಕಷ್ಟು ಸಹಕಾರ ನೀಡಿದ್ದರು. ಈ ಹಿನ್ನಲೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಪಾಲು ಸಿಗುತ್ತೆ ಅನ್ನೊ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಶಾ ಸೇರಿದಂತೆ ಅನೇಕ ಪ್ರಭಾವಿಶಾಲಿ ವ್ಯಕ್ತಿಗಳು ಅಪಪ್ರಚಾರದಲ್ಲಿ ತೊಡಿಗಿದ್ದಾರೆ. ಪ್ರಧಾನಿ ಮೋದಿಯಂತು ಅಭಿವೃದ್ಧಿ, ನಿರುದ್ಯೋಗ ಬಗ್ಗೆ ಮಾತನಾಡುವುದಿಲ್ಲ, ಬರೀ ಇಂಡಿಯಾ ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.