ಭ್ರಷ್ಟರಿಗೆ ಕಾಂಗ್ರೆಸ್ ಸರ್ಕಾರ ಶ್ರೀರಕ್ಷೆ: ಕ್ರಮ ಕೈಗೊಳ್ಳದಿದ್ದರೆ ಸಿಎಂಗೆ ಮುತ್ತಿಗೆ
ಕಳೆದ ಜೂ.12 ಮತ್ತು ಜೂ.14ರಂದು ತನಿಖೆ ಮಾಡಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೂ ಸಹ ಸರ್ಕಾರವು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸೈಬಣ್ಣಾ ಜಮಾದಾರ್
ಕಲಬುರಗಿ(ಸೆ.13): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಆಗಿರುವ ಅವ್ಯವಹಾರದ ಕುರಿತು ರಾಜ್ಯ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದರೂ ಸಹ ಭ್ರಷ್ಟರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಶ್ರೀರಕ್ಷೆ ನೀಡುತ್ತಿದೆ ಎಂದು ದೂರಿರುವ ಅಹಿಂದ ಚಿಂತಕರ ವೇದಿಕೆ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡೇ ಕಲಬುರಗಿಗೆ ಬನ್ನಿ, ಇಲ್ಲದೆ ಹೋದ್ರೆ ಸೆ.17ಕ್ಕೆ ಕಲಬುರಗಿಗೆ ಬಂದಾಗ ನಮ್ಮ ಮುತ್ತಿಗೆ ಎದುರಿಸಿರಿ ಎಂದು ಅಹಿಂದ ಚಿಂತಕರ ವೇದಿಕೆ ಎಚ್ಚರಿಕೆ ನೀಡಿದೆ.
ವೇದಿಕೆಯ ರಾಜ್ಯಾಧ್ಯಕ್ಷ ಸೈಬಣ್ಣಾ ಜಮಾದಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕಳೆದ ಜೂ.12 ಮತ್ತು ಜೂ.14ರಂದು ತನಿಖೆ ಮಾಡಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೂ ಸಹ ಸರ್ಕಾರವು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕಾಶ ರೈ ಏನು ಚಡ್ಡಿ ಹಾಕೊಳ್ಳದೇ ಓಡಾಡ್ತಾರಾ? ಬಿಜೆಪಿ ಸಂಸದ ಜಾಧವ್ ಪ್ರಶ್ನೆ
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಮಾಡಲು ಹೊರಟಿರುವ ಮಂಡಳಿಗೆ ದುಂದುವೆಚ್ಚ ಮಾಡದೇ ಈಗಾಗಲೇ ಕಳೆದ ವರ್ಷ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಮಾಡಿ 3.69 ಕೋಟಿ ರು.ಗಳನ್ನು ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಮಾಡಿ 11.54 ಕೋಟಿ ರು.ಗಳನ್ನು ದುರ್ಬಳಕೆ ಮಾಡಲಾಗಿದೆ ಎಂದರು.
ತನಿಖಾ ವರದಿಯ ಪ್ರಕಾರ ಮಂಡಳಿಯ 50 ಕೋಟಿ ರು.ಗಳ ಬಡ್ಡಿ ಹಣದಲ್ಲಿ ಸರ್ಕಾರದ ಆದೇಶದ ವಿರುದ್ಧ ಕಲ್ಯಾಣ ಕರ್ನಾಟಕ ಉತ್ಸವಕ್ಕೆ 11.54 ಕೋಟಿ ರು.ಗಳನ್ನು ವೆಚ್ಚ ಮಾಡಿರುವುದು ಸ್ಪಷ್ಟವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಗೆ ಐದು ಲಕ್ಷ ರು.ಗಳನ್ನು ನಿಗದಿಪಡಿಸಲಾಗಿದ್ದು, ಕಾರ್ಯದರ್ಶಿಗಳು ಒಟ್ಟು 951 ನೀರಿನ ಘಟಕಗಳಿಗೆ ತಲಾ 2 ಲಕ್ಷ ರು.ಗಳಂತೆ ಹೆಚ್ಚುವರಿ ಹಣ ಸಂದಾಯ ಮಾಡಿ 17.22 ಕೋಟಿ ರು.ಗಳನ್ನು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದು, ಕೂಡಲೇ ಅವರಿಗೆ ಅಮಾನತು ಮಾಡಬೇಕೆಂದರು.
2021-2022ನೇ ಸಾಲಿನ ಅಧ್ಯಕ್ಷರ ವಿವೇಚನಾ ನಿಧಿಯಲ್ಲಿ ನಗರದ ಬಿದ್ದಾಪೂರ್ ಮೇಲ್ಸೆತುವೆಯಿಂದ ಹೀರಾಪೂರ್ ಕ್ರಾಸ್‍ದವರೆಗೆ ವರ್ತುಲ ಸರ್ವಿಸ್ ರಸ್ತೆಗೆ ಏಳು ಕೋಟಿ ರು.ಗಳನ್ನು ಎಸ್‍ಸಿಪಿ ಹಣ ದುರ್ಬಳಕೆ ಮಾಡಿದ್ದು ಸಾಬೀತಾಗಿದೆ.
ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!
ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಐಎಎಸ್ ಮತ್ತು ಕೆಎಎಸ್ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸ್ಟೈಫಂಡ್‍ನಲ್ಲಿ 18.80 ಲಕ್ಷ ರು.ಗಳ ದುರುಪಯೋಗವಾಗಿದೆ. ಸುಮಾರು 300 ಕೋಟಿ ರು.ಗಳಲ್ಲಿ 219 ಕೋಟಿ ರು.ಗಳ ಅನುದಾನ ದುರುಪಯೋಗವಾಗಿರುವ ಸಂಶಯವಿದ್ದು, ಸಂಘದ ಮಾಜಿ ಕಾರ್ಯದರ್ಶಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಬೇಡಿಕೆಗಳು ಈಡೇರದೇ ಹೋದಲ್ಲಿ ಸೆ.17ರಂದು ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು. ಯಶವಂತರಾವ್, ವಿಜಯಕುಮಾರ್ ಎಸ್., ತಿಪ್ಪಣ್ಣ, ಸಂಜು ಹೊಡಲಕರ್ ಇದ್ದರು.