ಶಿವಮೊಗ್ಗ(ಜು.07): ಇಲ್ಲಿಗೆ ಸಮೀಪದ ಇರುವಕ್ಕಿಯಲ್ಲಿ ಆರಂಭಿಸಲಾಗುತ್ತಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕಟ್ಟಡ ಆಗಸ್ಟ್‌ ಮೊದಲ ವಾರದಲ್ಲಿ ಪೂರ್ಣಗೊಂಡು ಸೆಪ್ಟೆಂಬರ್‌ ಮೊದಲ ವಾರದಿಂದಲೇ ತರಗತಿಗಳು ಆರಂಭಗೊಳ್ಳಿಲಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಸೋಮವಾರ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಉದ್ದೇಶಿತ ನೂತನ ಕಟ್ಟಡ ಕಾಮಗಾರಿಗಳನ್ನು ವೀಕ್ಷಿಸಿ, ಅ​ಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ, ಸಚಿವರು ಮಾಧ್ಯಮ ಪ್ರತಿನಿ​ಧಿಗಳ ಜತೆ ಮಾತನಾಡಿದರು.

ಈಗಾಗಲೇ ನಿಗ​ಧಿಪಡಿಸಿದ ಕಾಲಾವ​ಧಿಯೊಳಗಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದ ಬಿ.ಸಿ.ಪಾಟೀಲ್‌, ಮುಖ್ಯಮಂತ್ರಿ ಯಡಿಯೂರಪ್ಪನವರ ದೂರದೃಷ್ಟಿಹಾಗೂ ಚಿಂತನಾಫಲವಾಗಿ ನಿರ್ಮಾಣಗೊಳ್ಳುತ್ತಿರುವ ಈ ವಿಶ್ವವಿದ್ಯಾಲಯದ ಭೌತಿಕ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ 121 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ. ಇನ್ನು 33 ಕೋಟಿ ರು.ಗಳ ಅಗತ್ಯವಿದೆ. ಈಗಾಗಲೇ ವಿವಿಯ ಕ್ಯಾಂಪಸ್‌ನೊಳಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಹೇಳಿದರು.

ದೇಶದ ಮಾದರಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಲಿರುವ ಕೃಷಿ ವಿಶ್ವವಿದ್ಯಾಲಯ ಈ ಭಾಗಕ್ಕೆ ಪ್ರವಾಸಕ್ಕೆ ಆಗಮಿಸುವವರಿಗೆ ಇದೊಂದು ಪ್ರವಾಸಿ ತಾಣವಾಗಿಯೂ ರೂಪುಗೊಳ್ಳಲಿದೆ. ಅಲ್ಲದೇ ರಾಣೆಬೆನ್ನೂರು -ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಡಾಗಿರುವ ಈ ಪ್ರದೇಶ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶೇಷತೆ ಪಡೆದುಕೊಳ್ಳಲಿದೆ ಎಂದು ಅಭಿಪ್ರಾಯಿಸಿದರು.

ವಿಶ್ವವಿದ್ಯಾಲಯದ ಎರಡನೇ ಹಂತದ ಕಾಮಗಾರಿಗಳಿಗಾಗಿ ಕಳೆದ ಬಜೆಟ್‌ನಲ್ಲಿ 200 ಕೋಟಿ ರು. ಕಾಯ್ದಿರಿಸಲಾಗಿದೆ. ಈ ಪೈಕಿ ಈಗಾಗಲೆ 40 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ. ಈ ಅನುದಾನ ಉದ್ದೇಶಿತ ಕೆಲಸ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದರು.

ವಿಶ್ವವಿದ್ಯಾಲಯಕ್ಕೆ ನೀಡಲಾಗಿರುವ ಪ್ರದೇಶದಲ್ಲಿ ನೂರಾರು ಎಕರೆ ಭೂಪ್ರದೇಶ ಬಗರ್‌ಹುಕುಂ ಸಾಗುವಳಿದಾರರ ಹಿಡಿತದಲ್ಲಿದೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸ್ಥಳೀಯವಾಗಿರುವ ಜನಪ್ರತಿನಿ​ಧಿಗಳು, ಅ​ಧಿಕಾರಿಗಳು ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಲಾಗುವುದು. ಹಿಡುವಳಿದಾರರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಿರೀಕ್ಷೆಯಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಗತಿಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಸಕಾಲದಲ್ಲಿ ನಿರ್ಮಾಣ ಕಾರ್ಯ ಪೂರೈಸಿದಲ್ಲಿ ಅವರಿಗೆ ದೊರೆಯಬಹುದಾದ ಹಣವನ್ನು ಸಕಾಲದಲ್ಲಿ ಪಾವತಿಸಲು ಸರ್ಕಾರದಿಂದ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ನುಡಿದರು.

ಮಲೆನಾಡು ಅಭಿವೃದ್ಧಿ ಪ್ರಾ​ಧಿಕಾರದ ಅಧ್ಯಕ್ಷ ಕೆ.ಎಸ್‌.ಗುರುಮೂರ್ತಿ, ವಿವಿ ಕುಲಪತಿ ಡಾ. ಎಂ.ಕೆ.ನಾಯಕ್‌, ಶಾಸಕ ಹರತಾಳು ಹಾಲಪ್ಪ, ಜಿಲ್ಲಾ​ಧಿಕಾರಿ ಕೆ.ಬಿ.ಶಿವಕುಮಾರ್‌, ಉಪವಿಭಾಗಾ​ಧಿಕಾರಿ ನಾಗರಾಜ ನಾಯಕ್‌, ವಿಶ್ವವಿದ್ಯಾಲಯದ ಹಾಗೂ ವಿವಿಧ ಇಲಾಖೆಗಳ ಅ​ಧಿಕಾರಿಗಳು, ತಂತ್ರಜ್ಞರು, ಜನಪ್ರತಿನಿ​ಧಿಗಳು ಉಪಸ್ಥಿತರಿದ್ದರು.

ಈ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಗೆ ಮುಕುಟಪ್ರಾಯವಾಗಲಿರುವುದು ಎಲ್ಲರ ಹೆಮ್ಮೆ. ಇದು ಮುಖ್ಯಮಂತ್ರಿ ಯಡಿಯೂರಪ್ಪನವರ ಅ​ಧಿಕಾರಾವ​ಧಿಯ ಹೆಜ್ಜೆಗುರುತಾಗಿ ಉಳಿಯಲಿದೆ. ವಿವಿ ಕಟ್ಟಡಗಳ ನಿರ್ಮಾಣದಲ್ಲಿ ಲೋಪದೋಷ ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಕೂಡಾ.

- ಬಿ.ಸಿ.ಪಾಟೀಲ್‌, ಕೃಷಿ ಸಚಿವ