Asianet Suvarna News Asianet Suvarna News
breaking news image

ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಜಿಡಿಪಿಗೆ ಶೇ.17 ಕೊಡುಗೆಯಿದೆ: ಸಚಿವ ಮಧು ಬಂಗಾರಪ್ಪ

ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಕೃಷಿಗೆ ಎಂದಿಗೂ ಪ್ರಾಮುಖ್ಯತೆ ಇದೆ. ಕೃಷಿ ಕ್ಷೇತ್ರದಿಂದ ಜಿಡಿಪಿಗೆ ಶೇ.17 ಕೊಡುಗೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. 

Agriculture is the future of our country and contributes 17 percent to GDP Says Minister Madhu Bangarappa gvd
Author
First Published Jun 30, 2024, 11:58 PM IST

ಶಿವಮೊಗ್ಗ (ಜೂ.30): ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಕೃಷಿಗೆ ಎಂದಿಗೂ ಪ್ರಾಮುಖ್ಯತೆ ಇದೆ. ಕೃಷಿ ಕ್ಷೇತ್ರದಿಂದ ಜಿಡಿಪಿಗೆ ಶೇ.17 ಕೊಡುಗೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಏರ್ಪಡಿಸಿದ್ದ ಕೃಷಿ ಶಿಕ್ಷಣ ಸುಗ್ಗಿ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಕೃಷಿ ಭವಿಷ್ಯದಲ್ಲಿ ಬೇಡಿಕೆ ಇರುವ ವಲಯ ಆಗಲಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಶೇ.60ರಷ್ಟು ರೈತರು ಇದ್ದು, ದೇಶಕ್ಕೆ ಕೃಷಿಕರ ಕೊಡುಗೆ ಅಪಾರವಾಗಿದೆ. 

ಕೃಷಿ ಉತ್ಪನ್ನಗಳು ಸಾಕಷ್ಟಿದ್ದು, ಈ ಬಗ್ಗೆ ಜನರಿಗೆ ತಿಳಿಸುವಲ್ಲಿ ಹಿಂದೆ ಉಳಿದಿ ದ್ದೇವೆ. ಇನ್ನು, ಕೃಷಿ ಕೋರ್ಸ್‍ಗಳಿಗೆ ಸಾಕಷ್ಟು ಬೇಡಿಕೆ ಇದೆ ಎಂದರು. ಅನೇಕ ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ಪಡೆಯುವುದು ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಮೊದಲ ಬಾರಿಗೆ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಕೋಚಿಂಗ್ ನೀಡಲಾಗುವುದು. ಮೊದಲ ಹಂತದಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಓದಿದ ಶೇ.15 ರಷ್ಟು ವಿದ್ಯಾರ್ಥಿಗಳಿಗೆ ಹೊರ ರಾಜ್ಯ ಮತ್ತು ದೇಶಗಳಿಗೆ ಹೋಗುವ ಅವಕಾಶವಿದೆ. 

ವಾಲ್ಮೀಕಿ ಹಗರಣವನ್ನು ಮುಚ್ಚಿಹಾಕಲು ಸಿದ್ದು, ಡಿಕೆಶಿಯಿಂದ ರಾಜಕೀಯ ನಾಟಕ: ಸಿ.ಟಿ.ರವಿ ಆರೋಪ

ಈ ಕೋರ್ಸ್ ಮಾಡಿದವರಿಗೆ ಉದ್ಯೋಗದ ಕೊರತೆ ಇಲ್ಲ. ಹಾಗೂ ರೈತರ ಮಕ್ಕಗಳಿಗೆ ಕೃಷಿ, ತೋಟಗಾರಿಕೆ ಕೋರ್ಸ್‍ಗಳಲ್ಲಿ ಶೇ.50 ಮೀಸಲಾತಿ ಇದೆ ಎಂದರು. ಆಡಳಿತ ಮಂಡಳಿ ಸದಸ್ಯ ಡಾ.ಪಿ.ಕೆ.ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು ಕೃಷಿ ಕೋರ್ಸ್‍ಗಳನ್ನು ಮಾಡಿಕೊಂಡರೆ ಕೃಷಿ ಪರಿಕರ, ರಾಸಾಯನಿಕ ಗೊಬ್ಬರ, ಮಾರ್ಕೆಟಿಂಗ್ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಲಭಿಸಲಿದೆ ಎಂದು ಮಾಹಿತಿ ನೀಡಿದರು. ಡಿಡಿಪಿಯು ಕೃಷ್ಣಪ್ಪ ಹಾಗೂ ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಗೆ ಕೃಷಿ ಕುರಿತು ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿವಿ ಕುಲಸಚಿವ ಕೆ.ಸಿ.ಶಶಿಧರ್ ಮಾತನಾಡಿ, ಕೃಷಿ ಶಿಕ್ಷಣದ ಕುರಿತಾದ ಜಾಗೃತಿ ಅಭಿಯಾನವಾಗಿದೆ. ಕೃಷಿ ಪದವಿ ಬಗ್ಗೆ ಅರಿವಿನ ಕೊರತೆ ಇದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿಯೂ ಕೃಷಿ ಪದವಿ ಪಡೆಯಬಹುದಾಗಿದೆ. ರೈತರ ಮಕ್ಕಳಿಗೆ ಶೇ.50 ಮೀಸಲಾತಿ ಇದ್ದು ಅವರು ಪ್ರಾಯೋಗಿಕ ಪರೀಕ್ಷೆಯನ್ನು ಬರೆದು ಸೀಟು ಪಡೆದುಕೊಳ್ಳಬಹುದು. ಈ ಪ್ರಾಯೋಗಿಕ ಪರೀಕ್ಷೆಗೆ ಯಾವುದೇ ಕೋಚಿಂಗ್ ಅವಶ್ಯಕತೆ ಇಲ್ಲ. ಸುಲಭವಾಗಿರುತ್ತದೆ. ಈ ಕಾರ್ಯಕ್ರಮದಲ್ಲೇ ಈ ಬಗ್ಗೆ ಒಂದು ಅಣಕು ಪರೀಕ್ಷೆ ಏರ್ಪಡಿಸಲಾಗಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ಚಿತ್ರರಂಗದವರಲ್ಲಿ ಶಿಸ್ತು ಕಮ್ಮಿಯಾಗಿದೆ, ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಲ್ಲ: ನಟ ಜಗ್ಗೇಶ್

ಕೃಷಿ ಶಿಕ್ಷಣದ ಪ್ರಾಮುಖ್ಯತೆ ಮತ್ತು ಪಿಯುಸಿ ನಂತರ ಏನು? ಎಂಬ ಬಗ್ಗೆ ಪಿಪಿಟಿ ಪ್ರದರ್ಶನದ ಮೂಲಕ ವಿವರಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕುವೆಂಪು ರಂಗಮಂದಿರ ಆವರಣದಲ್ಲಿ ಕೃಷಿ ಉತ್ಪನ್ನಗಳು, ಕೀಟಗಳು, ಚಿಟ್ಟೆಗಳು, ವಿವಿಧ ಭತ್ತದ ಬೀಜದ ತಳಿ, ಸಾವಯವ ಕೃಷಿ, ಜೇನು ಸಾಕಾಣಿಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ತೆರೆದು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಡಾ.ಬಿ.ಕೆ.ಕುಮಾರಸ್ವಾಮಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios