ರೈತರ ಜಮೀನಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ
ಶಿರಾ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಘೋಷಣೆ ಮಾಡಲು ಕೃಷಿ ಅಧಿಕಾರಿಗಳು ರೈತರು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ, ಕೆ.ಎ.ತಿಪ್ಪೇಸ್ವಾಮಿಯವರು ಸೂಚನೆ ನೀಡಿದರು.
ಶಿರಾ : ಶಿರಾ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಘೋಷಣೆ ಮಾಡಲು ಕೃಷಿ ಅಧಿಕಾರಿಗಳು ರೈತರು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ, ಕೆ.ಎ.ತಿಪ್ಪೇಸ್ವಾಮಿಯವರು ಸೂಚನೆ ನೀಡಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ನಾಗರಾಜ ಅವರಿಗೆ ಸೂಚನೆ ನೀಡಿ ತಾಲೂಕಿನಲ್ಲಿ ಮಳೆ ಅಭಾವದಿಂದ ಬೆಳೆ ವಿಫಲವಾದರೂ ಸಹ ಇದುವರೆಗೂ ಬೆಳೆ ಸಮೀಕ್ಷೆ ಮಾಡಿಸದೆ ರೈತರಿಗೆ ನಷ್ಟವಾಗಿದೆ. ಈಗಾಗಲೇ ಹಲವರು ಶೇಂಗಾ ಬೆಳೆ ಬಾರದಿದ್ದರೂ ಸಹ ಮೇವಿಗಾಗಿ ಕಟಾವು ಮಾಡಿದ್ದಾರೆ. ಇಂತಹ ಕಟಾವು ಮಾಡಿದ ರೈತರಿಗೆ ಯಾವ ರೀತಿ ಪರಿಹಾರ ನೀಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ನಾಗರಾಜ ಅವರು ಈಗಾಗಲೇ ಕಟಾವು ಮಾಡಿರುವ ಬೆಳೆಯನ್ನು ಕೃಷಿ ಅಧಿಕಾರಿಗಳು ತರಿಸಿಕೊಂಡು ವಿವರ ಪಡೆದು ಸರ್ಕಾರದಿಂದ ಪರಿಹಾರ ದೊರಕುವಂತೆ ಮಾಡಲಾಗುವುದು ಎಂದರು. ಈ ಬಾರಿ ರೈತರು ಬೆಳೆ ವಿಮೆಯನ್ನು ಸರಿಯಾಗಿ ಪಾವತಿಸಿಲ್ಲ. ಆದ್ದರಿಂದ ಬೆಳೆ ವಿಮೆ ಕಟ್ಟಿದವರಿಗೆ ಮಾತ್ರ ಬೆಳೆ ನಷ್ಟಪರಿಹಾರ ನೀಡದೆ ಎಲ್ಲಾ ರೈತರಿಗೂ ಪರಿಹಾರ ನೀಡುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ತಿಳಿಸಿದರು.
ಶಿರಾ ತಾಲೂಕಿನಲ್ಲಿರುವ ಸರ್ಕಾರಿ ಗೋಶಾಲೆಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಇವೆಯೇ? ಗೋವುಗಳಿಗೆ ಮೇವಿನ ವ್ಯವಸ್ಥೆ ಸರಿಯಾಗಿದೆಯೇ? ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಶು ಇಲಾಖೆಯ ಅಧಿಕಾರಿ ಸರ್ಕಾರಿಂದ ಚಿಕ್ಕಬಾಣಗೆರೆ ಗ್ರಾಮದಲ್ಲಿ ಗೋಶಾಲೆ ತೆರೆಯಲಾಗಿದೆ. ಅಲ್ಲಿ ನೆರಳಿನ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಕೆಲವು ಹಸುಗಳನ್ನು ಶಿರಾ ಬಳಿ ಇರುವ ಖಾಸಗಿ ಗೋಶಾಲೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದ ಟಿ.ಬಿ.ಜಯಚಂದ್ರ ಅವರು ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಮುಂದಿನ ದಿನಗಳಲ್ಲಿ ಮಳೆಯ ಕೊರತೆ ಉಂಟಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಮುಂಜಾಗ್ರತಾ ಕ್ರಮವಾಗಿ ಸನ್ನದ್ಧವಾಗಿರಬೇಕು. ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂದು ತಿಳಿಸಿದರು.
ಚಿತ್ರರ್ದುದ ಘಟನೆ ಮರುಕಳಿಸಬಾರದು: ಚಿತ್ರದುರ್ಗ ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ ನೀರು ಸೇವನೆ ಮಾಡಿ ಹಲವರು ಮೃತಪಟ್ಟಿರುವುದು ದುರದೃಷ್ಟಕರ. ಇಂತಹ ಘಟನೆ ಮತ್ತೆಲ್ಲೂ ಮರುಕಳಿಸಬಾರದು. ನೀರು ಸರಬರಾಜು ಮಾಡುವ ಸಿಬ್ಬಂದಿ ಎಲ್ಲಾ ರೀತಿಯಲ್ಲೂ ಎಚ್ಚರಿಕೆಯಿಂದಿರಬೇಕು. ಅಧಿಕಾರಿಗಳೂ ಸಹ ಆಗಿದ್ದಾಂಗೆ ಪರಿಶೀಲನೆ ನಡೆಸಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ, ಬೆಸ್ಕಾಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಚಿದಾನಂದ್ ಎಂ.ಗೌಡ, ತಹಸೀಲ್ದಾರ್ ಮುರಳೀಧರ, ಶಾಸಕರ ವಿಶೇಷ ಅಧಿಕಾರಿ ಮಾರುತಿ ಪ್ರಸನ್ನ, ತಾ.ಪಂ. ಆಡಳಿತಾಧಿಕಾರಿ ಅನುಪಮ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಂತರಾಜು ಸೇರಿದಂತೆ ಹಲವರು ಹಾಜರಿದ್ದರು.
‘ಸರ್ಕಾರಿ ಆಸ್ಪತ್ರೆಗೆ ವೈದ್ಯರ ಕೊರತೆ ನೀಗಿಸಿ’
ಶಿರಾ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ತಮ್ಮ ಕರ್ತವ್ಯ ನಿರ್ವಹಿಸಿ. ಔಷಧಿಗಳನ್ನು ಹೊರಗಡೆ ಚೀಟಿ ಬರೆದು ಕೊಡಬೇಡಿ. ವೈದ್ಯರು ಸಾಮರಸ್ಯದಿಂದ ಇದ್ದು, ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ತಮ್ಮ ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ಸಹ ಅದನ್ನು ತಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಗೊಂದಲಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಚಿದಾನಂದ್ ಎಂ.ಗೌಡ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಿದ್ದೇಶ್ವರ ಅವರಿಗೆ ತಿಳಿಸಿದರು. ಶಿರಾ ನಗರದಲ್ಲಿರುವ 100 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದ್ದು, ಆಸ್ಪತ್ರೆಗೆ ಅವಶ್ಯಕವಾಗುವ ಸಿಬ್ಬಂದಿ ನಿಯೋಜನೆ ಆಗಿಲ್ಲ. ಇದರಿಂದ ಚಿಕಿತ್ಸೆ ನೀಡಲು ತೊಂದರೆ ಉಂಟಾಗಿದ್ದು, ಸರ್ಕಾರದಿಂದ ವೈದ್ಯರು ಮತ್ತು ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳು ಕೋರಿದರು. ಚಿದಾನಂದ್ ಎಂ.ಗೌಡ ಅವರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಶಿರಾ ಸಾರ್ವಜನಿಕ ಆಸ್ಪತ್ರೆಗೆ ಸಿಟಿ ಸ್ಕಾ್ಯನಿಂಗ್ ಯಂತ್ರವನ್ನು ಅಳವಡಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.